Advertisement
1918 ರಲ್ಲಿ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಆ ಕಾಲದ ಶ್ರೇಷ್ಠ ಭಾಗವತರೆನಿಸಿಕೊಂಡಿದ್ದ ಶ್ರೀನಿವಾಸ ಉಪ್ಪೂರ ಮತ್ತು ಅಕ್ಕಣಿಯಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ನಾರಣಪ್ಪ ಅವರು ಮನೆಯಲ್ಲೇ ಯಕ್ಷಗಾನದ ವಾತಾವರಣದಲ್ಲಿ ಶ್ರೇಷ್ಠ ಕಲಾವಿದರಾಗಿ ಮೂಡಿ ಬಂದವರು.
Related Articles
Advertisement
ಡಾ.ಶಿವರಾಮ ಕಾರಂತರ ನೆಚ್ಚಿನ ಭಾಗವತರಾಗಿದ್ದ ಉಪ್ಪೂರರು ಅವರ ಬ್ಯಾಲೆ ತಂಡದಲ್ಲೂ ಭಾಗವತಿಗೆ ಮಾಡಿದ್ದರು. ಕೋಟ ಅಮೃತೇಶ್ವರಿ ಮೇಳ, ಸಾಲಿಗ್ರಾಮ ಮೇಳ , ಕೊಲ್ಲೂರು, ಪೆರ್ಡೂರು ಮೇಳಗಳಲ್ಲಿ 47 ವರ್ಷಗಳ ಕಾಲ ಸುದೀರ್ಘ ಭಾಗವತಿಕೆಯ ಸೇವೆ ಸಲ್ಲಿಸಿದ ಉಪ್ಪೂರರು ಅಪಾರ ಅಭಿಮಾನಿಗಳನ್ನು ಆ ಕಾಲಕ್ಕೆ ಸಂಪಾದಿಸಿದ್ದರು. ಸದ್ಯ ಚಲಾವಣೆಯಲ್ಲಿರುವ ಚಾಲು ಕುಣಿತ ,ಪದ್ಯದ ಗತಿ ವಿಸ್ತರಿಸಿ ವಿಳಂಬಿಸಿ ಹಾಡುವುದು, ಹಿಮ್ಮೇಳದ ಮದ್ದಳೆ,ಚಂಡೆ ವಾದಕರಿಗೆ ಅವಕಾಶ ನೀಡಿ , ಉತ್ತಮ ನಾಟ್ಯ ಪಟುಗಳಿಗೆ ಕುಣಿಯಲು ಅವಕಾಶ ಮಾಡಿಕೊಡುವ ಕ್ರಮವನ್ನು ರಂಗಕ್ಕೆ ಕೊಡುಗೆಯಾಗಿ ನೀಡಿದ ಹಿರಿಮೆ ನಾರಣಪ್ಪ ಉಪ್ಪೂರರದ್ದು.
ಅಂದಿನ ಕಾಲದಲ್ಲಿ ದಿಗ್ಗಜರಾಗಿದ್ದ ಮಟಪಾಡಿ ವೀರಭದ್ರ ನಾಯಕರು, ಮದ್ದಳೆಯಲ್ಲಿ ತಿಮ್ಮಪ್ಪ ನಾಯಕರು , ಕೆಮ್ಮಣ್ಣು ಆನಂದ ಗಾಣಿಗರು ಉಪ್ಪೂರರ ಒಡನಾಡಿಗಳಾಗಿ ಪ್ರದರ್ಶನವನ್ನು ಕಳೆಗಟ್ಟುತ್ತಿರುವುದನ್ನೂ ಇಂದಿಗೂ ಹಿರಿಯ ಯಕ್ಷಗಾನ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. 1972 ರಲ್ಲಿ ಆರಂಭವಾದ ಕೋಟ ಯಕ್ಷಗಾನ ಕೇಂದ್ರದ ಗುರುಗಳಾಗಿ ನೇಮಕಗೊಂಡ ಉಪ್ಪೂರರು ಹಲವಾರು ಆಸಕ್ತರಿಗೆ ತನ್ನಲ್ಲಿದ್ದ ವಿದ್ಯೆಯನ್ನು ಧಾರೆಯೆರೆದರು. ಕಂಚಿನ ಕಂಠದ ಕಾಳಿಂಗ ನಾವುಡರು, ರಂಗ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ, ಕೆ.ಪಿ. ಹೆಗಡೆ , ಹಾಲಾಡಿ ರಾಘವೇಂದ್ರ ಮಯ್ಯ ಸೇರಿದಂತೆ ಹಲವು ಖ್ಯಾತ ನಾಮರು ಉಪ್ಪೂರರ ಶಿಷ್ಯರು. ತೆಕ್ಕಟ್ಟೆ ಬಾಬಣ್ಣ ಶ್ಯಾನುಭಾಗ್, ಕೊಕ್ಕರ್ಣೆ ನರಸಿಂಹ ಕಾಮತ್, ಹಾರಾಡಿ ರಾಮಗಾಣಿಗ, ಮಟಪಾಡಿ ವೀರಭದ್ರ ನಾಯಕ್, ಕೋಟ ವೈಕುಂಠ ದಿವಂಗತ ಪದ್ಮಶ್ರಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಮೊದಲಾದ ದಿಗ್ಗಜರನ್ನು ಕುಣಿಸಿದ ಕೀರ್ತಿ ನಾರಣಪ್ಪ ಉಪ್ಪೂರರದ್ದು. ಪರಸ್ಪರ 2 ಮೇಳಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇರುವ ಜೋಡಾಟದಲ್ಲೂ ಎತ್ತಿದ ಕೈ ಆಗಿದ್ದ ಉಪ್ಪೂರರೂ ಶೃತಿ ಏರಿಸಿ ಹಾಡುವ ವೇಳೆ ಹೃದಯಕ್ಕೆ ಹೊಡೆತವಾಗಿ ಕಲಾಯಾನ ಮುಗಿಸಬೇಕಾದ ದುರಂತ ಯಕ್ಷರಂಗಕ್ಕೆ ಎದುರಾಯಿತು. 1984 ರ ಎಪ್ರಿಲ್ 12 ರಂದು ತಮ್ಮ 66 ನೇ ವಯಸ್ಸಿನಲ್ಲಿ ಗಾಯನ ನಿಲ್ಲಿಸಿದ ಉಪ್ಪೂರರು ಅಭಿಮಾನಿಗಳ ಮನದಲ್ಲಿ ಇಂದಿಗೂ ಶಾಶ್ವತ ಸ್ಥಾನ ಪಡೆದಿದ್ದಾರೆ.
ಕಲಾಭಿಮಾನಿಗಳ ಅದೃಷ್ಟವೆಂದರೆ ಉಪ್ಪೂರರ ಭಾಗವತಿಕೆಯ ಅನೇಕ ಧ್ವನಿ ಸುರುಳಿಗಳು ಲಭ್ಯವಿದ್ದು , ಅವುಗಳನ್ನು ಪುತ್ರ ದಿನೇಶ್ ಉಪ್ಪೂರ್ ಅವರು ಸಂಗ್ರಹಿಸಿಟ್ಟಿದ್ದಾರೆ. ಎಲ್ಲೂ ಲಭ್ಯವಿಲ್ಲದ ಅತ್ಯಮೂಲ್ಯವಾದ ಉಪ್ಪೂರರ ಭಾಗವತಿಕೆಯ ಪದ್ಯಗಳು ಲಭ್ಯವಿವೆ. ಗುರು ಶಿಷ್ಯರು ಎನ್ನುವ ವಾಟ್ಸಪ್ ಗ್ರೂಫ್ ಮೂಲಕ , ನಾರಣಪ್ಪ ಉಪ್ಪೂರ್ ಫೇಸ್‌ಬುಕ್ ಮೂಲಕ ಹೊಸ ತಲೆಮಾರಿನ ಯುವ ಅಭಿಮಾನಿಗಳಿಗೆ ಉಪ್ಪೂರರ ಹಾಡುಗಳ ಸವಿ ಉಣ ಬಡಿಸುತ್ತಿದ್ದಾರೆ. ನೆಚ್ಚಿನ ಶಿಷ್ಯ ಕಾಳಿಂಗ ನಾವುಡರೊಂದಿಗೆ ದ್ವಂದ್ವ ಭಾಗವತಿಕೆ ನಡೆಸಿರುವ ಉಪ್ಪೂರರ ಧ್ವನಿ ಮುದ್ರಿಕೆ ಕೇಳಿದವರು ಮತ್ತೆ ಮತ್ತೆ ಕೇಳಬೇಕೆನಿಸುವಂತಿದೆ. ಹಳೆಯ ಚೌಕಟ್ಟಿನೊಳಗೆ ಹೊಸತನವನ್ನು ಸೇರಿಸಿ ಯಕ್ಷಗಾನಕ್ಕೆ ಒಂದಿನಿತೂ ಹಾನಿಯಾಗದಂತೆ ಕಲಾ ಮೌಲ್ಯವನ್ನು ಎತ್ತಿ ಹಿಡಿದಿದ್ದ ಉಪ್ಪೂರರು ಇಂದಿನ ಯುವ ಭಾಗವತರಿಗೆ ಆದರ್ಶಪ್ರಾಯರು. ವಿಷ್ಣುದಾಸ್ ಪಾಟೀಲ್ ಗೋರ್ಪಾಡಿ