Advertisement

40 ವರ್ಷದಿಂದ ಕಳ್ಳತನ,160 ಕೇಸ್‌ಗಳಲ್ಲಿ ಭಾಗಿ: 20 ಬಾರಿ ಜೈಲುವಾಸ; ಮೂರು ಮದುವೆ!

03:03 PM Aug 28, 2022 | Suhan S |

ಬೆಂಗಳೂರು: ಮನೆ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡು 160 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಬೆರಳಚ್ಚು ಕೊಟ್ಟ ಸುಳಿವಿನಿಂದ ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಸೋಲದೇವನಹಳ್ಳಿಯ ನಿವಾಸಿ ಪ್ರಕಾಶ್‌ (54) ಬಂಧಿತ. 1978ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಇದ್ದಾಗಲೇ ಕಳ್ಳತನಕ್ಕೆ ಇಳಿದಿದ್ದ ಆರೋಪಿಯು 40 ವರ್ಷಗಳಿಂದ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ. ಶಿವಮೊಗ್ಗ, ಬಳ್ಳಾರಿ, ಕೋಲಾರ ಮೂಲದ ಮೂವರನ್ನು ವಿವಾಹವಾಗಿದ್ದ. ಈತನಿಗೆ 7 ಜನ ಮಕ್ಕಳಿದ್ದಾರೆ. ಈತನ ಕುಟುಂಬವೇ ಕಳ್ಳರ ಕುಟುಂಬವಾಗಿದ್ದು, ಸಹೋದರ ವರದರಾಜ್‌, ಮಕ್ಕಳಾದ ಬಾಲರಾಜ್‌, ಮಿಥುನ್‌ ಹಾಗೂ ಅಳಿಯ ಜಾನ್‌ ಎಲ್ಲರೂ ಪ್ರಕಾಶ್‌ಗೆ ಕಳ್ಳತನ ಎಸಗಲು ಸಾಥ್‌ ನೀಡುತ್ತಿದ್ದರು. ಶೇಷಾದ್ರಿಪುರಂನಲ್ಲಿ ಚಿನ್ನದ ಅಂಗಡಿ, ಮಾರ್ಕೆಟ್‌ನಲ್ಲಿ ಅಂಗಡಿ ಬೀಗ ಮುರಿದು 4 ಕೆ.ಜಿ. ಚಿನ್ನ ಕದ್ದಿದ್ದ. 1997ರಲ್ಲಿ ಗೋವಾದಲ್ಲಿ 7 ಕೆ.ಜಿ ಚಿನ್ನಾಭರಣ ಲಪಟಾಯಿಸಿದ್ದ. 20ಕ್ಕೂ ಅಧಿಕ ಬಾರಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಹಳೆ ಚಾಳಿ ಮುಂದುವರೆಸುತ್ತಿದ್ದ.

ಬೆರಳಚ್ಚು ಕೊಟ್ಟ ಸುಳಿವು: ಕೆಲ ದಿನಗಳ ಹಿಂದೆ ರಾಜಾಜಿನಗರದ ಮನೆಯೊಂದರಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಪತ್ತೆಯಾದ ಬೆರಳಚ್ಚು ಸಂಗ್ರಹಿಸಿ ಪರಿಶೀಲಿಸಿದಾಗ ಆರೋಪಿ ಪ್ರಕಾಶ್‌ ಬೆಳರಳಚ್ಚು ಹೋಲಿಕೆಯಾಗಿತ್ತು. ಈ ಆಧಾರದ ಮೇಲೆ ಆತನನ್ನು ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next