ದೇವನಳ್ಳಿ….ಇದು ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಇರೋ ಪ್ರದೇಶದ ಹೆಸರಲ್ಲ. ವಿಮಾನದಲ್ಲಿ ಕುಳಿತು ಹಾರಾಟ ಮಾಡುವಾಗಲೂ ಕಾಣಬಹುದಾದ ಗಗನ ಚುಂಬಿ ಎತ್ತರದ, ಯಾಣದ ಕರಿ ಕಲ್ಲಿನ ಶಿಖರಕ್ಕೆ ಸಮೀಪ ಇರುವ ಹಳ್ಳಿಯ ಹೆಸರೂ ದೇವನಳ್ಳಿ.
ಇದು, ಉತ್ತರ ಕನ್ನಡದ ಶಿರಸಿ ತಾಲೂಕಿನ ಪುಟ್ಟ ಹಳ್ಳಿ. ಶಿರಸಿಯಿಂದ 22 ಕಿಲೋಮೀಟರ್. ಯಾಣಕ್ಕೆ ಹೋಗುವಾಗ ಸಿಗುವ ಊರು. ಊರು ಎಂದರೆ ಅರೆಬರೆ ಪೇಟೆ.
ಇರುವ ನಾಲ್ಕೈದು ಹೋಟೆಲ್‌ಗಳಲ್ಲಿ ರಾಘವೇಂದ್ರ ಹೋಟೆಲ್‌ನ ಅಪರೂಪದ ಡ್ರೈ ಮಿಸಳ್‌ಬಾಜಿ ತಿಂದರೆ ಮತ್ತೆ ಮತ್ತೆ ಇಲ್ಲೇ ತಿನ್ನ ಬೇಕು ಎನಿಸುತ್ತದೆ. ಮಿಸಳ್ ಬಾಜಿ, ಖಾರಾ ಮಿಸಳ್ ಗೊತ್ತಿರುವವರಿಗೆ ಯಾವುದೇ ದ್ರವ ಪದಾರ್ಥ ಹಾಕದೇ ಸಿದ್ಧಗೊಳಿಸುವ ಡ್ರೆ„ ಮಿಸಳ್ ಬಾಜಿ ಎಂದರೆ ಏನಿರಬಹುದು ಎಂಬ ಕುತೂಹಲ ಸಹಜವೇ. ಆದರೆ, ಈ ಹೋಟೆಲ್ ಫೇಮಸ್ ಆಗಿದ್ದೇ ಡ್ರೆ„ ಮಿಸಳ್ ಬಾಜಿ ಹಾಗೂ ಕಟ್ ಮಿರ್ಚಿಯಿಂದಾಗಿ. ಪ್ರವಾಸಿಗರು ಮಾತ್ರವಲ್ಲ, 25, 30 ಕಿ.ಮೀ ದೂರದಿಂದಲೂ ವಾಹನ ಓಡಿಸಿಕೊಂಡು ಬಂದು ತಿಂದು ಹೋಗುತ್ತಾರೆ. ಸಾಹಿತಿಗಳು, ರಾಜಕಾರಣಿಗಳು, ಅಧಿಕಾರಿಗಳಲ್ಲಿ ಅನೇಕರು ಇಲ್ಲಿನ ಮಿಸಳ್ ಬಾಜಯನ್ನು ಸವಿದಿದ್ದಾರೆ.
ಈ ಹೋಟೆಲ್‌ಗೆ ಹೋಗಿ ಒಂದು ಡ್ರೆ„ ಮಿಸಳ್ ಕೊಡಿ ಎಂದರೆ ಹೋಟೆಲ್ ಯಜಮಾನ ಹುಬ್ಬೇರಿಸಿ ನೋಡುತ್ತಾರೆ. ಏಕೆಂದರೆ ಇವರು ಕೊಡೋ ಒಂದು ಡ್ರೆ„ ಮಿಸಳ್ ಬಾಜಿಯಿಂದ ಬರೋಬ್ಬರಿ ಐದ ಜನರ ಉದರ ತುಂಬುತ್ತೆ! ಒಂದಿಬ್ಬರು ಇದ್ದರೆ ಬೇರೆ ತಗೊಳ್ಳಿ ಎಂದೇ ಹೇಳುತ್ತಾರೆ ಕೂಡ.
ದೇವನಳ್ಳಿ ಹೋಟೆಲ್‌ನಲ್ಲಿ ಕಳೆದ ಹದಿನೆಂಟು ವರ್ಷದಿಂದ ಈ ಡ್ರೆ„ ಮಿಸಳ್ ಬಾಜಿಯ ಪ್ರಯೋಗ ನಡೆದಿದೆ. ಸ್ವತಃ ಹೋಟೆಲ್ ಮಾಲೀಕ ರಾಘವೇಂದ್ರ ಜಿ.ನಾಯ್ಕ ಹಾಗೂ ಅವರ ಸಹೋದರ ಅರವಿಂದ ಕಂಡುಕೊಂಡ ಸ್ವಾದಿಷ್ಟ ಮಿಸಳ್ ಇದು. ನಮ್ಮ ಹೋಟೆಲ್‌ಗೆ ಬರುವ ಗ್ರಾಹಕರಿಗೆ ಏನಾದರೂ ಹೊಸತು ಕೊಡಬೇಕು ಎಂಬ ಯೋಚನೆಯಲ್ಲೇ ಅವರು ಉತ್ಪಾದಿಸಿದ ತಿಂಡಿ ಈಗ ಫೇಮಸ್ಸಾಗಿದೆ.
ಅವಲಕ್ಕಿ, ಖಾರ, ಶೇಂಗಾ, ಗೋಡಂಬಿ, ದ್ರಾಕ್ಷಿ, ಕಾಯಸುಳಿ, ಈರುಳ್ಳಿ, ಲಿಂಬು ಎಲ್ಲವನ್ನೂ ಒಂದು ಅಳತೆಯಲ್ಲಿ ಇಟ್ಟು ಒಂದು ದೊಡ್ಡ ಪ್ಲೇಟಿನ ತುಂಬಾ ಕೊಡುತ್ತಾರೆ. ಯಾಣ ನೋಡಿ ಹಸಿದು ಬಂದ ಪ್ರವಾಸಿಗರು ಇದನ್ನು ಮೆಚ್ಚಿ ತಿನ್ನುತ್ತಾರೆ. ಸುತ್ತಲಿನ ಗ್ರಾಮಸ್ಥರು, ಪ್ರವಾಸಿಗರು, ಅಮೇರಿಕಾ, ಇಂಗ್ಲೆಂಡ್, ಕೆನಡಾ, ಇಂಡೋನೇಶಿಯಾ ಸೇರಿದಂತೆ ಹಲವಡೆಯ ಗ್ರಾಹಕರು ಖುಷಿ ಪಟ್ಟು ತಿಂದಿದ್ದಾರೆ. 60 ರೂಪಾಯಿಯಿಂದ ಆರಂಭಗೊಂಡಿದ್ದ ಈ ಮಿಸಳ್ ಬಾಜಿಯ ಬೆಲೆ ಈಗ ಒಂದು ಪ್ಲೇಟ್‌ಗೆ ಈಗ 100 ರೂ. ಆಗಿದೆ. ನಿತ್ಯ ಹತ್ತಾರು ಪ್ಲೇಟ್‌ನ ಸುತ್ತ ಐದಾರು ಜನರು ಕುಳಿತು ತಿನ್ನುತ್ತಾರೆ. ಇವರ ಮಿಸಳ್ ತಿಂದ ಮೇಲೆ ರಾತ್ರಿ ಊಟ ಬೇಡ ಅನ್ನೋರೇ ಜಾಸ್ತಿಯಂತೆ.
ಇದೇ ಹೋಟೆಲ್‌ನಲ್ಲಿ ತಯಾರಾಗುವ ಕಟ್ ಮಿರ್ಚಿ ಕೂಡ ಫೇಮಸ್ಸು. ಒಮ್ಮೆ ಹದ ಬರಿತ ಕಡಲೆ ಹಿಟ್ಟಿನಲ್ಲಿ ಕರಿದ ಮಿರ್ಚಿಯನ್ನು ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕತ್ತರಿಸಿ ಕರಿದು, ಸಂಬಾರ ಹಾಕಿ ಉಳ್ಳಾಗಡ್ಡೆ ಜೊತೆ ನೀಡುತ್ತಾರೆ. ಇದೇ ಮಾದರಿಯ ತಿಂಡಿಗಳನ್ನು ಬೇರೆಯವರು ಮಾಡಲು ಹೋಗಿದ್ದಾರೆ. ಆದರೆ ಎಲ್ಲೂ ಈ ಟೇಸ್ಟ್ ಬಂದಿಲ್ಲ ಎಂದೂ ಕಾಂಪ್ಲಿಮೆಂಟ್ ಕೊಟ್ಟವರೂ ಇದ್ದಾರೆ!
ಒಂದು ಊರು ತಿಂಡಿ ಮೂಲಕವೂ ಪರಿಚಯವಾಗುವುದು ಹೀಗೆ!
(8762149815)
– ರಾಘವೇಂದ್ರ ಬೆಟ್ಟಕೊಪ್ಪ