Advertisement
ಪೆರುವಾಜೆ ಗ್ರಾ.ಪಂ.ಗೆ ಒಳಪಟ್ಟಿರುವ ಕುಂಡಡ್ಕ ಸಾರಕರೆ ನಿವಾಸಿ, ಪರಿಶಿಷ್ಟ ಜಾತಿಗೆ ಸೇರಿರುವ ಭಾರತಿ ಅವರು ವಸತಿ ಯೋಜನೆಯ ಎರಡು ಕಂತಿನ ಹಣಕ್ಕೆ ಒಂದು ವರ್ಷದಿಂದ ಕಾಯುತ್ತಿದ್ದಾರೆ. ನಾಳೆ ಬರುತ್ತೆ, ಹದಿನೈದು ದಿವಸ ಕಳೆದು ಬರುತ್ತದೆ ಎಂಬ ಉತ್ತರ ಕೇಳಿ ಈ ಕುಟುಂಬ ಬಸವಳಿದಿದೆ. ಮೊದಲ ಕಂತು ಬಂದ ಬಳಿಕ ಎರಡನೇ ಕಂತು ಪಾವತಿಸಲು ಹಿಂದೇಟು ಹಾಕಿರುವುದು ಏಕೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ.
2017ರ ಆಗಸ್ಟ್‌ನಲ್ಲಿ ಪೆರುವಾಜೆ ಗ್ರಾ.ಪಂ. ಮೂಲಕ ಭಾರತಿ ಅವರಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾಗಿತ್ತು. ಅಡಿಪಾಯ ಕಾಮಗಾರಿ ಮುಗಿದು ಪ್ರಥಮ ಹಂತದ 32 ಸಾವಿರ ರೂ. ಅನುದಾನ ಬಿಡುಗಡೆಯಾಗಿತ್ತು. ಗ್ರಾ.ಪಂ. ಸೂಚನೆ ಪ್ರಕಾರ ಗೋಡೆ ನಿರ್ಮಿಸಲಾಯಿತು. ಪಂಚಾಯತ್ ನಿಂದ ಪರಿಶೀಲನೆ ನಡೆದು, ಪೋಟೋ ತೆಗೆದು ಎರಡನೆ ಹಂತದ ಸಹಾಯಧನಕ್ಕೆ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲಾಗಿದೆ. ಹಣ ಶೀಘ್ರ ಪಾವತಿ ಆಗುತ್ತದೆ. ಬಳಿಕ ಛಾವಣಿ ಕೆಲಸ ಆರಂಭಿಸುವಂತೆಯೂ ತಿಳಿಸಲಾಗಿತ್ತು. ಇದನ್ನು ನಂಬಿದ ಈ ಕುಟುಂಬಕ್ಕೆ ಈಗ ದಿಕ್ಕು ತೋಚದ ಸ್ಥಿತಿ ಉಂಟಾಗಿದೆ.
Related Articles
ಭಾರತಿ ಅವರು ಎರಡನೆ ಕಂತಿನ ಹಣಕ್ಕಾಗಿ ಪದೇ-ಪದೇ ಪಂಚಾಯತ್ ಗೆ, ಬ್ಯಾಂಕ್‌ಗೆ ಅಲೆದಾಡುತ್ತಿದ್ದಾರೆ. ಪಂಚಾಯತ್ ಅಧಿಕಾರಿಗಳ ಬಳಿ ವಿಚಾರಿಸಿದರೆ, ಬ್ಯಾಂಕಿಗೆ ಹಣ ಹಾಕಲಾಗಿದೆ. ವಾರ ಬಿಟ್ಟು ಹೋಗಿ ನೋಡಿ ಎನ್ನುವ ಉತ್ತರ ದೊರೆತಿದೆ. ಇದನ್ನು ನಂಬಿ ಭಾರತಿ ಅವರು ಅನೇಕ ಬಾರಿ ಬ್ಯಾಂಕ್‌ಗೆ ತೆರಳಿದ್ದಾರೆ. ಆದರೆ ಅಲ್ಲಿ ಬಂದಿಲ್ಲ ಎಂಬ ಉತ್ತರ ಬರುತ್ತಿದೆ. ಆ. 27ರಂದು ಗ್ರಾ.ಪಂ.ಗೆ ತೆರಳಿ ವಿಚಾರಿಸಿದ್ದಾರೆ. ಅಕೌಂಟ್‌ಗೆ ಹಣ ಪಾವತಿ ಆಗಿದೆ. ಬ್ಯಾಂಕಿಗೆ ಹೋಗಿ ಪರಿಶೀಲಿಸಿ ಎಂದಿದ್ದರು. ಅಲ್ಲಿ ಹೋಗಿ ವಿಚಾರಿಸಿದಾಗ ಬಂದಿರಲಿಲ್ಲ. ಆ. 29 ರಂದು ಪುನಃ ಗ್ರಾ.ಪಂ.ಗೆ ಬಂದು ವಿಷಯ ತಿಳಿಸಿದ್ದಾರೆ. 15 ದಿನ ಬಿಟ್ಟು ನೋಡಿ ಎಂಬ ಉತ್ತರ ದೊರೆತಿದೆ ಎಂದು ಫಲಾನುಭವಿ ಭಾರತಿ ಅಳಲು ತೋಡಿಕೊಂಡಿದ್ದಾರೆ.
Advertisement
ಬಡ ಕುಟುಂಬಭಾರತಿ ಅವರ ಪತಿ ಕೆಲವು ಸಮಯಗಳ ಹಿಂದೆಯಷ್ಟೇ ಮೃತಪಟ್ಟಿದ್ದಾರೆ. ನಾಲ್ವರು ಮಕ್ಕಳಿರುವ ಕುಟುಂಬದ ಹೊಣೆ ಇವರ ಮೇಲಿದೆ. ಜೀವನ ನಿರ್ವಹಣೆಗೆ ಬೀಡಿ ಕಟ್ಟುವುದು ಬಿಟ್ಟರೆ ಬೇರೆ ಆದಾಯ ಇಲ್ಲ. ಈಗಿರುವ ಹಳೆ ಮನೆಯು ವಾಸಕ್ಕೆ ಯೋಗ್ಯವಾಗಿಲ್ಲ. ಹೊಸ ಮನೆ ಗೋಡೆ ಹಂತದಲ್ಲಿ ಬಾಕಿಯಾಗಿದೆ. ಹಣ ಪಾವತಿಯಾಗದೆ ಬಾಕಿ ಕೆಲಸ ಮಾಡುವಂತಿಲ್ಲ. ಅದಕ್ಕೆ ಬೇಕಾದ ಆರ್ಥಿಕ ಶಕ್ತಿಯೂ ಇಲ್ಲ. ದಿನವಿಡಿ ಪಂಚಾಯತ್, ಬ್ಯಾಂಕ್ ಗೆ ಸುತ್ತಾಡಬೇಕಾದರೆ ಜೀವನ ನಿರ್ವಹಣೆಗೆ ಏನು ಮಾಡುವುದು ಎಂಬ ಚಿಂತೆ ಈ ಕುಟುಂಬದ್ದು. ಸಮಸ್ಯೆ ಇಲ್ಲ
ಗ್ರಾ.ಪಂ.ನಿಂದ ಯಾವುದೇ ಸಮಸ್ಯೆ ಆಗಿಲ್ಲ. ಎರಡನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಪಾವತಿ ಆಗಿರುವ ಬಗ್ಗೆ ತೋರಿಸುತ್ತಿದ್ದರೂ ಹಣ ಬಂದಿಲ್ಲ ಎಂದು ಫಲಾನುಭವಿ ಗಮನಕ್ಕೆ ತಂದಿದ್ದಾರೆ. ಆಧಾರ್ ಕಾರ್ಡ್ ಸಲ್ಲಿಸಿರುವ ಬೇರೆ ಬ್ಯಾಂಕ್ ಖಾತೆಗೆ ಹಣ ಪಾವತಿ ಆಗಿರುವ ಸಾಧ್ಯತೆಯ ಬಗ್ಗೆ ಪರಿಶೀಲಿಸಬೇಕಿದೆ. ಈ ಬಗ್ಗೆ ನಾವು ಜಿ.ಪಂ.ನಲ್ಲಿ ಮಾತನಾಡಿದ್ದೇವೆ. ಆ ಕುಟುಂಬಕ್ಕೆ ನೆರವಾಗುವ ಪ್ರಯತ್ನ ಮುಂದುವರಿಸಿದ್ದೇವೆ.
– ಜಯಪ್ರಕಾಶ್
ಪಿಡಿಒ, ಪೆರುವಾಜೆ ಗ್ರಾ.ಪಂ. ಅಲೆದು ಸಾಕಾಗಿದೆ
ಹಲವು ಬಾರಿ ಸುತ್ತಾಡಿದ್ದೇನೆ. ಬ್ಯಾಂಕ್‌ಗೆ ಬಂದಿದೆ ಎಂದು ಪಂಚಾಯತ್ ಹೇಳಿದರೆ, ಬಂದಿಲ್ಲ ಎಂದು ಬ್ಯಾಂಕ್‌ನವರು ಹೇಳುತ್ತಾರೆ. ಏನು ಸಮಸ್ಯೆ ಎಂಬುವುದಕ್ಕೆ ಉತ್ತರ ಸಿಕ್ಕಿಲ್ಲ. ಆರು ತಿಂಗಳ ಹಿಂದೆ ಮನೆ ಕಟ್ಟಿದವರಿಗೆ ಎಲ್ಲ ಕಂತು ಸಿಕ್ಕಿದೆ. ನಮಗೆ ಮಾತ್ರ ಸಿಕ್ಕಿಲ್ಲ.
– ಶಶಿಕಲಾ
ಭಾರತಿ ಅವರ ಮಗಳು ಕಿರಣ್ ಪ್ರಸಾದ್ ಕುಂಡಡ್ಕ