Advertisement

ಕುಟುಂಬ ಪದ್ಧತಿ ಆದರ್ಶ ಪರಿಕಲ್ಪನೆ: ಡಾ|ವಿವೇಕ ರೈ

07:05 AM Aug 07, 2017 | Harsha Rao |

ಮಂಗಳೂರು: ತುಳುನಾಡಿ ನಲ್ಲಿ ಕುಟುಂಬ ಪದ್ಧತಿಯ ಶ್ರೀಮಂತಿಕೆಯನ್ನು ಅತ್ಯಂತ ನಾಜೂಕಾಗಿ ಕಾಪಾಡಿಕೊಂಡು ಬರಲಾಗಿದ್ದು, ಇದು ಆದರ್ಶ ಪರಿಕಲ್ಪನೆಯನ್ನು ಪ್ರತಿ ಬಿಂಬಿಸಿತ್ತು. ಆದರೆ ಈಗಿನ ಕಾಲದಲ್ಲಿ ಇಂತಹ ಪರಿಕಲ್ಪನೆಯನ್ನೇ ಮರೆತಿದ್ದೇವೆ ಎಂದು ಹಿರಿಯ ವಿದ್ವಾಂಸ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ 
ರೈ ಹೇಳಿದರು.

Advertisement

ಹಿರಿಯ ಸಾಹಿತಿ ಬೋಲ ಚಿತ್ತರಂಜನ್‌ದಾಸ್‌ ಶೆಟ್ಟಿ ಪುಣ್ಯಸ್ಮರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಅವರು ಬರೆದ ತುಳು ಕಾವ್ಯಗಳ ಗದ್ಯ ರೂಪಾಂತರಿತ ಕೊನೆಯ ಕೃತಿ “ಮಾತೃಧರ್ಮ ಅಳಿಯ ಸಂತಾನ’ ಪುಸ್ತಕವನ್ನು ರವಿವಾರ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ “ಬೋಲ ಸ್ಮೃತಿಯಾನ’ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪುಸ್ತಕದಲ್ಲಿ….
ತುಳುವ ಸಂಸ್ಕೃತಿಯ ಮಾತೃ ಮೂಲೀಯ ಕುಟುಂಬ ಪದ್ಧತಿಯನ್ನು ಕನ್ನಡದಲ್ಲಿ ಜನಪ್ರಿಯವಾಗಿ “ಅಳಿಯ ಸಂತಾನ ಕಟ್ಟು’ ಎಂದು ಕರೆಯ ಲಾಗುತ್ತದೆ. ಈ ಎರಡು ನುಡಿಗಟ್ಟುಗಳು ಸಮಾನವಾದುವೇ ಅಥವಾ ಭಿನ್ನ ದೃಷ್ಟಿಕೋನ ಉಳ್ಳವುಗಳೇ ಎನ್ನುವ ಕುರಿತು ಗಂಭೀರ ಚರ್ಚೆಗಳು ನಡೆದಿಲ್ಲ. ಮಾತೃಮೂಲೀಯ, ಮಾತೃಸ್ಥಾನೀಯ ಮತ್ತು ಮಾತೃಪ್ರಧಾನ ಎಂಬ ವಿಶೇಷಣಗಳನ್ನು ತುಳುನಾಡಿನ ಕುಟುಂಬ ಪದ್ಧತಿಗೆ ಜೋಡಿಸುವಾಗ ಆ ಪದ್ಧತಿಗಳ ನಡುವಿನ ಮುಖ್ಯ ವ್ಯತ್ಯಾಸಗಳನ್ನು ಬಹಳ ಬಾರಿ ಗಣನೆಗೆ ತೆಗೆದುಕೊಳ್ಳದೆ ಅವುಗಳನ್ನು ಸಮಾನಾರ್ಥಕಗಳೆಂಬ ಸರಳ ಸಮೀಕರಣದಲ್ಲಿ ಗ್ರಹಿಸಿದ ಬರಹಗಳು ಈ ಪುಸ್ತಕದಲ್ಲಿ ದೊರೆಯುತ್ತವೆ ಎಂದವರು ಹೇಳಿದರು.

ಹಿರಿಯ ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಸಂಸ್ಮರಣಾ ಭಾಷಣ ಮಾಡಿದರು. ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ| ವಾಮನ ನಂದಾವರ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಕೆ. ಚಿತ್ತರಂಜನ್‌, ಉಪಸ್ಥಿತರಿದ್ದರು. 
ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಪ್ರಸ್ತಾವನೆಗೈದರು. ಚಂದ್ರಶೇಖರ ಕೆ. ಶೆಟ್ಟಿ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರು ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next