ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ಸೇನಾ ಯೋಧರೊಬ್ಬರು ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರಿನ ಚಳ್ಳಕೆರೆಯಲ್ಲಿ ನಡೆದಿದೆ. ಹರೀಶ್ ಕುಮಾರ್ (32), ಮಕ್ಕಳಾದ ರಜಿತ್ (6) ಮತ್ತು ಕೃತಿಕಾ (4) ಮೃತರು. ನಗರದವರೇ ಆದ ಹರೀಶ್ ಅಸ್ಸಾಂನ ಸೇನಾ ವಲಯದಲ್ಲಿ ಕೆಲ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂಟು ವರ್ಷಗಳ ಹಿಂದೆ ಸಂಗೀತಾ ಎಂಬುವರನ್ನು ವಿವಾಹವಾಗಿದ್ದರು.
ದಂಪತಿಗೆ ರಜಿತ್ ಮತ್ತು ಕೃತಿಕಾ ಎಂಬ ಮಕ್ಕಳಿದ್ದರು. ಸಂಗೀತಾ ಅತ್ತೆ, ಮಾವ ಮತ್ತು ಮಕ್ಕಳೊಂದಿಗೆ ಚಳ್ಳಕೆರೆಯಲ್ಲಿ ವಾಸವಿದ್ದರು. ಒಂದು ತಿಂಗಳ ಹಿಂದೆ ಹರೀಶ್ ತಂದೆ ಮೃತಪಟ್ಟಿದ್ದರು. ತಂದೆ ಸಾವಿನಲ್ಲಿ ಪಾಲ್ಗೊಳ್ಳುವ ಸಲುವಾಗಿ ರಜೆಯ ಮೇಲೆ ಹರೀಶ್ ನಗರಕ್ಕೆ ಬಂದಿದ್ದರು. ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಹತ್ತು ದಿನಗಳ ಹಿಂದೆ ಜಗಳವಾಗಿತ್ತು.
ಇದರಿಂದ ಹರೀಶ್ ಮಾನಸಿಕವಾಗಿ ನೊಂದಿದ್ದರು. ಸೋಮವಾರ ರಾತ್ರಿ ಎಂದಿನಂತೆ ಊಟ ಮುಗಿಸಿದ ಹರೀಶ್ ಮಕ್ಕಳೊಂದಿಗೆ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು. ಮಕ್ಕಳೊಂದಿಗೆ ಪತಿ ಮಲಗಿರಬಹುದೆಂದು ಪತ್ನಿ ಸಂಗೀತಾ ಭಾವಿಸಿದ್ದರು. ತಡರಾತ್ರಿ ಮಕ್ಕಳಿಗೆ ವಿಷ ನೀಡಿ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ 8ಗಂಟೆಯಾದರೂ ಮಕ್ಕಳು ಹಾಗೂ ಪತಿ ಹರೀಶ್ ಕೊಠಡಿಯಿಂದ ಹೊರ ಬಂದಿರಲಿಲ್ಲ.
ಅನುಮಾನಗೊಂಡ ಪತ್ನಿ ಸಂಗೀತಾ ಸಾಕಷ್ಟು ಬಾರಿ ಕೂಗಿದರೂ ಹರೀಶ್ ಬಾಗಿಲು ತೆರೆದಿಲ್ಲ. ಬಳಿಕ ಬಾಗಿಲು ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೆಣ್ಣೂರು ಪೊಲೀಸರು ತಿಳಿಸಿದ್ದಾರೆ. ಮೃತ ಹರೀಶ್ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, “ಮಕ್ಕಳು ಮತ್ತು ನನ್ನ ಸಾವಿಗೆ ಯಾರು ಕಾರಣರಲ್ಲ’ ಎಂದು ಬರೆದಿದ್ದಾರೆ.
ಘಟನೆ ನಡೆದ ವೇಳೆ ಮೃತ ಹರೀಶ್‌ರ ಪತ್ನಿ ಹಾಗೂ ತಾಯಿ ಮನೆಯಲ್ಲಿಯೇ ಇದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಕ್ಕಳಿಗೆ ಯಾವುದರಲ್ಲಿ ವಿಷ ನೀಡಿದ್ದಾರೆ ಎಂಬುದು ಖಚಿತವಾಗಿಲ್ಲ ಎಂದು ಡಿಸಿಪಿ ಅಜಯ್ ಹಿಲೋರಿ ತಿಳಿಸಿದ್ದಾರೆ.