ಪಿರಿಯಾಪಟ್ಟಣ: ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಮೂಲದ ಮಹಿಳೆ ಮತ್ತು ಇಬ್ಬರು ಮಕ್ಕಳು ಐರ್ಲೆಂಡಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕೆಯ ಗಂಡನೆ ಕೊಲೆ ಮಾಡಿರುವುದಾಗಿ ಕುಟುಂಬದ ಮೂಲಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸೀಮಾ ಬಾನು(37), ಮಗಳು ಅಫ್ರಿಯಾ(11) ಮಗ ಫಜಾನ್(06) ದಕ್ಷಿಣ ಡಬ್ಲಿನ್‌ನಲ್ಲಿರುವ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ ನಲ್ಲಿರುವ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ಸೀಮಾ ಬಾನು ರವರನ್ನು ಮೈಸೂರಿನ ಸಾಫ್ಟವೇರ್ ಇಂಜಿನಿಯರ್ ಸಮೀರ್ ಎಂಬುವವರಿಗೆ ಕಳೆದ 13 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿದ್ದು, ಈತ ಉದ್ಯೋಗಕ್ಕಾಗಿ ದುಬೈಗೆ ಹೋಗಿದ್ದನು ನಂತರ ಕೊರೋನಾ ವೈರಸ್ ಎದುರಾದ ಸಂದರ್ಭದಲ್ಲಿ ಫೆಬ್ರವರಿ ತಿಂಗಳಲ್ಲಿ ಹೆಚ್ಚಿನ ಸಂಭಾವನೆ ಪಡೆಯುವ ಉದ್ದೇಶದಿಂದ ಕಂಪನಿ ಬದಲಾವಣೆ ಮಾಡಿ ಕುಟುಂಬ ಸಮೇತರಾಗಿ ಐರ್ಲಾಂಡಿನ ಡಬ್ಲಿನ್‌ಗೆ ಕರೆದೊಯ್ದಿದ್ದಾನೆ.
ಇದನ್ನೂ ಓದಿ:ಕೈಬೀಸಿ ಕರೆಯೋ ಮಂಜಿನ ಶೃಂಗಾರ ಸೌಂದರ್ಯದ ಮುಳ್ಳಯ್ಯನಗಿರಿ ಬೆಟ್ಟ!
ಇದರ ನಡುವೆ ಈತ ಐರ್ಲೆಂಡಿನಲ್ಲಿ ಬೆರೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರವಾಗಿ ಗಂಡ ಹೆಂಡತಿ ನಡುವೆ ಪ್ರತಿದಿನ ಜಗಳ ನಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಅಲ್ಲದೆ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ಇನ್ನು ನಾಲ್ಕು ದಿನಗಳಲ್ಲಿ ಹೆಂಡತಿ ಮಕ್ಕಳು ತನ್ನ ವಿರುದ್ಧವಾಗಿ ಸಾಕ್ಷಿ ಹೇಳುತ್ತಾರೆ ಎಂದು ತಿಳಿದು ತನ್ನಿಬ್ಬರು ಮಕ್ಕಳನ್ನು ಒಂದು ಕೊಠಡಿಯಲ್ಲಿ, ಮತ್ತೊಂದು ಕೊಠಡಿಯಲ್ಲಿ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಗೊತ್ತಾಗಲಿದೆ.
ತನ್ನ ಸುತ್ತಮುತ್ತಲಿನ ನಿವಾಸಿಗಳ ಜೊತೆ ಉತ್ತಮ ಸಂಬಂಧದಲ್ಲಿದ್ದ ಸೀಮಾ ಬುಧವಾರ ಯಾರಿಗೂ ಕಾಣಿಸಿರಲಿಲ್ಲ. ಹೀಗಾಗಿ ಅನುಮಾನ ಬಂದು ಸಮೀಪದ ನಿವಾಸಿಗಳು ಮನೆಗೆ ಬಂದು ವೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತರ ದೇಹಗಳನ್ನು ಪಿರಿಯಾಪಟ್ಟಣಕ್ಕೆ ಕಳುಹಿಸಿ ಕೊಡುವಂತೆ ಅಲ್ಲಿನ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಸೀಮಾ ಮೇಲೆ ಈಕೆಯ ಪತಿಯೇ ಹಲ್ಲೆ ನಡೆಸಿ ಕುಟುಂಬದವರಿಗೆ ಪೋನ್ ಕರೆ ಮಾಡಿದಂತೆ ಮೊಬೈಲ್ ಫೋನ್ ಕಿತ್ತುಕೊಂಡಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.