ಗಂಗಾವತಿ: ಭೂಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಕಳೆದ ಒಂದುವರೆ ತಿಂಗಳಿಂದ ರೈತರು ನಡೆಸುತ್ತಿರುವ ಹೋರಾಟ ಎರಡನೇ ಸ್ವಾತಂತ್ರ್ಯ ಚಳುವಳಿಯಾಗಿದೆ ಎಂದು ಜೆಡಿ ಎಸ್ ಪಕ್ಷದ ರಾಜ್ಯ ಮುಖಂಡ, ಪ್ರಗತಿಪರ ಚಿಂತಕ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟರು.
ಅವರು ಗಂಗಾವತಿಯಲ್ಲಿ ಉದಯವಾಣಿ ಜೊತೆ ಮಾತನಾಡಿ, ರಾಜ್ಯದ ಎಪಿಎಂಸಿ ಗಳನ್ನು ಖಾಸಗೀಕರಣ ಮಾಡುವ ಸುದ್ದಿ ಮೊದಲು ಉದಯವಾಣಿಯಲ್ಲಿ ಪ್ರಕಟವಾಗಿತ್ತು. ರೈತರು ಎಚ್ಚತ್ತುಕೊಳ್ಳದಿದ್ದರೆ ದೇಶದ ಕೃಷಿ ವ್ಯವಸ್ಥೆಗೆ ಭಾರಿಪೆಟ್ಟು ಬೀಳಲಿದ್ದು ಆಹಾರ ಸ್ವಾವಲಂಬನೆ ಆಹಾರ ಭದ್ರತೆ ಇಲ್ಲವಾಗುತ್ತದೆ. ಐಟಿಬಿಟಿಯವರು ಭೂಮಿ ಖರೀದಿಸಲು ಆಂಧ್ರ ಪ್ರದೇಶ, ತಮಿಳುನಾಡಿಗೆ ಹೋಗುವುದನ್ನು ತಪ್ಪಿಸಲು ಭೂಸುಧಾರಣಾ ಕಾಯ್ದೆಯ 79ಎ,ಬಿ,ಸಿ ಮತ್ತು 108ಕಾಯ್ದೆಗೆ ತಿದ್ದುಪಡಿಯನ್ನು ರಾಜ್ಯ ಸರಕಾರ ಮಾಡಿದ್ದು ಅವೈಜ್ಞಾನಿಕವಾಗಿದೆ ಎಂದರು.
ಇದನ್ನೂ ಓದಿ:ದತ್ತು ಶಾಲೆ ಪ್ರಗತಿ ಯೋಜನೆಗೆ ಸಿದ್ಧತೆ
ಇದರಿಂದ ಸಣ್ಣ ಹಿಡುವಳಿದಾರರು ಬೀದಿಗೆ ಬರುವುದು ಖಚಿತ. ಇರುವ ಭೂಮಿ ಎಲ್ಲಾ ಶ್ರೀಮಂತರು ಮತ್ತು ದೊಡ್ಡ ದೊಡ್ಡ ಕಾರ್ಪೋರೆಟ್ ಕಂಪನಿಗಳ ಪಾಲಾಗಲಿದ್ದು ರಾಜ್ಯ ಸರಕಾರ ಭೂಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಖಾಸಗೀಕರಣವನ್ನು ಮಾಡುವ ಕೇಂದ್ರ ಸರಕಾರ ನೀತಿ ವಿರೋಧಿಸಬೇಕು ಎಂದು ಹೇಳಿದರು.
ಬಿಜೆಪಿ ಜೊತೆ ಜೆಡಿಎಸ್ ವಿಲೀನ ಅಥವಾ ಬೆಂಬಲಕ್ಕೆ ಗೌಡ ಬೆಂಬಲವಿಲ್ಲ: ಬಿಜೆಪಿ ಸರಕಾರದ ಕೆಲ ನಿರ್ಧಾರಗಳನ್ನು ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲಿಸಿದ್ದು ಖಂಡನೀಯ. ದೇವೇಗೌಡರು ಬಿಜೆಪಿ ಪಕ್ಷವನ್ನು ಬೆಂಬಲಿಸುವ ಅಥವಾ ಪಕ್ಷವನ್ನು ಅದರಲ್ಲಿ ವಿಲೀನ ಮಾಡುವುದಕ್ಕೆ ವಿರೋಧಿಸಿದ್ದಾರೆ. ಗೌಡರ ನಿರ್ಧಾರ ಅವರ ಜೀವನ ಸೆಕ್ಯೂಲರ್ ಎನ್ನುವುದನ್ನು ಹೇಳುತ್ತದೆ. ಗೌಡರ ನಿಲುವು ತಮ್ಮನಿಲುವಾಗಿದೆ ಎಂದು ದತ್ತ ಹೇಳಿದರು.