Advertisement

ಮಹದಾಯಿ ಇತ್ಯರ್ಥ ನಿರೀಕ್ಷೆ ಹುಸಿ

01:11 PM Mar 07, 2017 | Team Udayavani |

ಹುಬ್ಬಳ್ಳಿ: ಗೋವಾ ವಿಧಾನಸಭೆ ಚುನಾವಣೆ ನಂತರ ಮಹದಾಯಿ ವಿವಾದ ಇತ್ಯರ್ಥ ಕಾಣಲಿದೆ ಎಂಬ ನಿರೀಕ್ಷೆ ಹುಸಿಯಾಗುತ್ತಿದ್ದು, ಗೋವಾ ಮತ್ತದೇ ಹೊಸ ಕ್ಯಾತೆಗೆ ಮುಂದಾಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮನವೊಲಿಸುವಿಕೆಯಲ್ಲಿ ರಾಜ್ಯ ಬಿಜೆಪಿ ನಾಯಕರು ವಿಫ‌ಲರಾಗಿದ್ದಾರೆ ಎಂದು ಶಾಸಕ ಎನ್‌.ಎಚ್‌.ಕೋನರಡ್ಡಿ ಆರೋಪಿಸಿದರು. 

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ ಚುನಾವಣೆ ಅನಂತರದಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು, ಖಾಸಗಿಯಾಗಿಯೂ ಭರವಸೆ ನೀಡಿದ್ದರು. ಆದರೆ, ಅಂತಹ ಯಾವುದೇ ಯತ್ನ ನಡೆಯುತ್ತಿಲ್ಲ. ಬದಲಾಗಿ ರಾಜ್ಯಕ್ಕೆ ಮಾರಕವಾಗುವ ನಿಟ್ಟಿನಲ್ಲಿ ಗೋವಾ ಕೇಂದ್ರದ ಮೇಲೆ ಒತ್ತಡ ತರುವ ಯತ್ನಕ್ಕೆ ಮುಂದಾಗಿದೆ ಎಂದರು. 

ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪಾರ್ಸೆಕರ್‌ ಮಹದಾಯಿ ವಿಷಯವಾಗಿ ಪ್ರಧಾನಿಯವರ ಸಮಯ ಕೇಳಿದ್ದಾರೆನ್ನಲಾಗಿದೆ. ಒಂದು ವೇಳೆ ಗೋವಾ ಮುಖ್ಯಮಂತ್ರಿಗೆ ಪ್ರಧಾನಿ ಸಮಯ ನೀಡುವುದಾದರೆ ಅದೇ ವೇಳೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಕರೆದು ಸೌಹಾರ್ದ ಮಾತುಕತೆಗೆ ಮುಂದಾಗಲಿ ಎಂದು ಒತ್ತಾಯಿಸಿದರು. ಮಹದಾಯಿ ಹೋರಾಟಕ್ಕೆ 600 ದಿನಗಳು ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು. 

ಅಧಿವೇಶನದಲ್ಲಿ ಹೋರಾಟ: ಮಲಪ್ರಭಾ ಬಲದಂಡೆ ಕಾಲುವೆ ರೋಣ ತಾಲೂಕಿನ ಬೆಳವಣಕಿ ಬಳಿ ಒಡೆದು ನೀರು ಪೋಲಾಗಿದೆ. ನಾಲೆ ಆಧುನೀಕರಣಕ್ಕೆ 962ಕೋಟಿ ರೂ.ವೆಚ್ಚದ ಯೋಜನೆಯನ್ನು ಜಾರಿಗೊಳಿಸಲು ಸರಕಾರ ಮುಂದಾಗದಿದ್ದರೆ ಬಜೆಟ್‌ ಅಧಿವೇಶನ ಸಂದರ್ಭದಲ್ಲಿ ಹೋರಾಟ ಮಾಡುವುದಾಗಿ ಶಾಸಕ ಕೋನರಡ್ಡಿತಿಳಿಸಿದರು. 

ಬರಗಾಲ ಹಿನ್ನೆಲೆಯಲ್ಲಿ ಅಗತ್ಯ ಪರಿಹಾರ ಕಾಮಗಾರಿ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರೊಂದಿಗೆ ಕಣ್ಣಾಮುಚ್ಚಾಲೆ ಆಟಕ್ಕೆ ಮುಂದಾದಂತೆ ತೋರುತ್ತಿದೆ. ಕುಡಿಯುವ ನೀರು, ಮೇವಿನ ಕೊರತೆಯಿಂದ ಜನ-ಜಾನುವಾರು ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯ ಸರಕಾರ ತಕ್ಷಣವೇ ಬರ ಪರಿಹಾರ ಕಾಮಗಾರಿ ಆರಂಭಿಸಬೇಕು.

Advertisement

ಕೆರೆ ಸಂಜೀವಿನಿ ಯೋಜನೆಗೆ ಒತ್ತು ನೀಡಬೇಕು. ಮೊದಲು ಕುಡಿಯುವ ನೀರಿನ ವ್ಯವಸ್ಥೆಗೆ ತುರ್ತಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ನವಲಗುಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಅಭಿವೃದ್ಧಿ ಸಹಿಸಿಕೊಳ್ಳಲಾಗದೆ ಬಿಜೆಪಿವರು ಇಲ್ಲಸಲ್ಲದ ಆರೋಪಕ್ಕೆ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next