ಪಡುಬಿದ್ರಿ: ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪೆನಿಯಿಂದ ವಾಹನ ವಿಮಾ ದುರ್ಲಾಭ ಪಡೆಯಲು ಆರೋಪಿ ಗಳಾದ ಕಂದಲ್ ಕೋಡಿ ನೌಶಾದ್ (59) ಹಾಗೂ ಆತನ ಮಗ ನಬೀಲ್ ಕೆ. ಅವರು ಪೊಲೀಸ್ ಇಲಾಖೆಗೆ, ನ್ಯಾಯಾಲಯಕ್ಕೆ ಸುಳ್ಳು ಕತೆ ಕಟ್ಟಿ ಹಾಗೂ ಸುಳ್ಳು ದಾಖಲಾತಿಗಳನ್ನು ನೀಡಿ ವಂಚಿಸಿರುವುದಾಗಿ ಕಂಪೆನಿಯ ಆಪರೇಷನ್ ಮ್ಯಾನೇಜರ್ ಚಂದ್ರ ಶೇಖರ್ ಅವರು ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಂದಲ್ ಕೋಡಿ ನೌಶಾದ್ ಜಾಗ್ವಾರ್ ಕಾರಿನ ಮಾಲಕರಾಗಿದ್ದು, 2ನೇ ಆರೋಪಿ ನಬೀಲ್ ಕೆ. ನೌಶಾದ್ ಜಾಗ್ವಾರ್ ಕಾರನ್ನು ಚಲಾಯಿಸಿಕೊಂಡು ಆ. 13ರಂದು ಉಚ್ಚಿಲ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ತೆಂಕ ಎರ್ಮಾಳು ಗ್ರಾಮದಲ್ಲಿ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ ಹೊಡೆದು ಮಗುಚಿ ಬಿದ್ದ ಕಾರಣ ಕಾರು ಜಖಂಗೊಂಡಿತ್ತು. ಈ ಕಾರಣಕ್ಕೆ ಕಾರು ಮಾಲಕ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪೆನಿಗೆ ವಿಮೆ ಪಡೆಯಲು ಅರ್ಜಿ ಸಲ್ಲಿಸಿದ್ದರು.
ವಿಮೆ ಅರ್ಜಿ ವಿಚಾರಣೆಯ ಸಮಯ ಕಂಪೆನಿಯ ಆಂತರಿಕ ತನಿಖಾ ತಂಡ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿದಾಗ ಅಪಘಾತ ಸಮಯ ಕಾರನ್ನು ನಬೀಲ್ ಚಲಾಯಿಸುತ್ತಿದ್ದರು. ಕಾರಿನ ಒಳಗಡೆ ಅಪರಿಚಿತ ಮಹಿಳೆಯೊಬ್ಬರು ಇದ್ದರು ಎಂಬ ಮಾಹಿತಿ ಇತ್ತು. ಆದರೆ 1ನೇ ಆರೋಪಿಯು ವಿಮಾ ಅರ್ಜಿಯ ಜತೆ ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲಿಸಿದಾಗ ಅಪಘಾತದ ಸಮಯದಲ್ಲಿ ಕಾರನ್ನು ಚಲಾಯಿಸುತ್ತಿದ್ದ ಚಾಲಕನಿಗೆ ಎಲ್‌ಎಲ್‌ಆರ್ ಇದ್ದು, ಪಕ್ಕದಲ್ಲಿ 1ನೇ ಆರೋಪಿ ನೌಶಾದ್ ಕಾರಲ್ಲೇ ಕುಳಿತಿದ್ದರು ಎಂದೂ, ಅವರಿಗೆ ಡಿ.ಎಲ್. ಇರುವುದಾಗಿ ದಾಖಲಾತಿಯನ್ನು ನೀಡಿದ್ದರು. ಅಪಘಾತದ ಸಮಯದಲ್ಲಿ ಕಾರು ಮಾಲಕನ ಮೊಬೈಲ್ ಇರುವ ಸ್ಥಳವು ಅಪಘಾತ ಸ್ಥಳವಲ್ಲದ ಬೇರೆ ಸ್ಥಳದಲ್ಲಿ ಇದ್ದುದಾಗಿ ತಿಳಿದುಬಂದಿದೆ.
ನಬೀಲ್ ತನ್ನ ಡಿ.ಎಲ್. ದಾಖಲಾತಿಯನ್ನು ತಿರುಚಿದ ಮತ್ತು 1ನೇ ಆರೋಪಿ ನೌಶಾದ್ ಅಪಘಾತ ಸಮಯದಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿರುವುದಾಗಿ ಕಟ್ಟು ಕಥೆಯನ್ನು ಮಾಡಿ ಸುಳ್ಳು ಮಾಹಿತಿ ನೀಡಿರುವುದಾಗಿದೆ. ಮೋಸದಿಂದ ಕಂಪೆನಿ ವಿಮೆಯನ್ನು ಪಡೆಯಲು ಯತ್ನಿಸಿದ ಕುರಿತು ನೀಡಲಾದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.