ಕೊಲ್ಹಾರ: ಶಾಸಕ ಶಿವಾನಂದ ಪಾಟೀಲರು ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡುತ್ತ ಬ್ಲ್ಯಾಕ್ ಮೇಲ್ ತಂತ್ರ ಮಾಡುತ್ತಿರುವುದು ಮತ್ತು ನಮ್ಮ ಬಗ್ಗೆ ಎಲ್ಲೆಡೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ಯುವ ಮುಖಂಡ ಮಲ್ಲಿಕಾರ್ಜುನ ಬೆಳ್ಳುಬ್ಬಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನ ವತಿಯಿಂದ ಹಮ್ಮಿಕೊಂಡಿದ್ದ ಭಜನಾ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಶಿವಾನಂದ ಪಾಟೀಲರು ನಮ್ಮ ಕುಟುಂಬದ ಮೇಲೆ ಪದೇ ಪದೇ ಆಧಾರ ರಹಿತ ಆರೋಪ ಮಾಡುತ್ತಿದ್ದು ಇದು ಸರಿಯಲ್ಲ. ಶಾಸಕರು ಸಾಕ್ಷ್ಯಾಧಾರಗಳಿಲ್ಲದೇ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. 50 ಕೋಟಿ ಅನುದಾನ ತಂದಿದ್ದೀನಿ. ಆದರೆ ಬೆಳ್ಳುಬ್ಬಿ ಅವರು ಪತ್ರ ಬರೆಯುವ ಮೂಲಕ ಅನುದಾನ ತಡೆಹಿಡಿದಿದ್ದಾರೆ ಎಂದು ಸುಖಾ ಸುಮ್ಮನೆ ನಮ್ಮ ತಂದೆಯವರ ಮೇಲೆ ಆರೋಪ ಮಾಡುತ್ತಿದ್ದೀರಿ. ನಿಮ್ಮ ಹಿಂಬಾಲಕರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬೆಳ್ಳುಬ್ಬಿ ಅವರು ಬರೆದ ಪತ್ರ ಹರಿಯಬಿಟ್ಟಿದ್ದೀರಿ. ನೀವು ಶಾಸಕರಿದ್ದು, ಅದನ್ನು ಸರಿಯಾಗಿ ಗಮನಿಸಿ. ಆ ಪತ್ರವನ್ನು ಕೊಲ್ಹಾರ ಪಟ್ಟಣದ ಅಭಿವೃದ್ಧಿಗಾಗಿ ಎಲ್ಲ ವಾರ್ಡ್‌ಗಳಿಗೆ ಸಮನಾಗಿ ಅನುದಾನ ಹಂಚಿಕೆ ಮಾಡಿ ಎಂದು ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಸಮನಾಗಿ ಹಂಚಿಕೆ ಮಾಡಿ ಅಂತ ಪತ್ರ ಬರೆದರೆ ತಡೆ ಹಿಡಿಯಿರಿ ಅಂತ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ನಿವೇಶನಗಳಲ್ಲಿ ಅಕ್ರಮವೆಸಗಿದ್ದಾರೆ ಎಂದು ನೀವು ಸಂತ್ರಸ್ತರನ್ನು ವಿಧಾನಸಭೆವರೆಗೆ ಎಳೆದು 1117 ಜನರ ಮೇಲೆ ಪ್ರಕರಣ ದಾಖಲಿಸಿದ್ದೀರಿ. ನಿಮಗೆ ಮತ ನೀಡಿರುವ ಜನರಿಗೆ ನೀವು ಸರಿಯಾದ ಪಾಠ ಕಲಿಸಿದ್ದೀರಿ ಎಂದು ವ್ಯಂಗವಾಡಿದ ಅವರು, ತನಿಖೆ ಮಾಡಿಸಿದರೆ ಸತ್ಯಾಸತ್ಯತೆ ಹೊರಬೀಳುತ್ತದೆ. ಅದು ಬಿಟ್ಟು ಬೆಳ್ಳುಬ್ಬಿ ಅವರ ಮೇಲೆ ನಿರಾಧಾರ ಆರೋಪ ಮಾಡಿದ್ದಲ್ಲಿ ಸಹಿಸುವ ಪ್ರಶ್ನೆಯೇ ಇಲ್ಲ ಎಂದರು.
ಮುಳುಗಡೆ ಸಂತ್ರಸ್ತರ ನೋವು ನಿಮಗೆ ಅರ್ಥವಾಗುತ್ತಿಲ್ಲ, ನಾವು ಸಂತ್ರಸ್ತರಿದ್ದೀವಿ. ಮನೆ-ಮಠ ಕಳೆದುಕೊಂಡಿದ್ದೇವೆ. ಆ ನೋವು ನಮಗಿದೆಯೇ ಹೊರತು ನಿಮಗಲ್ಲ. ಸಂತ್ರಸ್ತರ ವಿಷಯಕ್ಕೆ ಬಂದಲ್ಲಿ ನಾವು ಸುಮ್ಮನಿರಲಾರೆವು ಎಂದು ಶಾಸಕರ ವಿರುದ್ಧ ಗುಡುಗಿದರು.