ಚಿಂಚೋಳಿ: ರಾಜ್ಯ ಸಮ್ಮಿಶ್ರ ಸರಕಾರ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕೇವಲ ಸುಳ್ಳು ಆಶ್ವಾಸನೆ ನೀಡುತ್ತಿದೆ. ಸಾಲಮನ್ನಾ ಕುರಿತು ರೈತರಿಗೆ ಹುಚ್ಚು ಹೆಚ್ಚಿಸಿ ಅವರನ್ನು ದಿವಾಳಿ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸುಭಾಷ ಬಿರಾದಾರ ಟೀಕಿಸಿದರು.
ತಾಲೂಕಿನ ಕೋಡ್ಲಿ ಗ್ರಾಮದ ಹನುಮಾನ ದೇಗುಲ ಸಭಾಂಗಣದಲ್ಲಿ ರೈತ ದಿನಾಚರಣೆ ಅಂಗವಾಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿ ಸಮಿತಿ ಸಭೆ ಮತ್ತು ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲು ಹಮ್ಮಿಕೊಳ್ಳಲಾಗಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ರೈತರಿಗೆ ಸರಕಾರದ ಸೌಲಭ್ಯ ಸಿಗುತ್ತಿಲ್ಲ. ಬ್ಯಾಂಕ್ ಸಾಲ ಮತ್ತು ಸಮರ್ಪಕ ವಿದ್ಯುತ್ ಪೂರೈಕೆ, ಕೃಷಿ ಇಲಾಖೆಯಿಂದ ಆಧುನಿಕ ಯಂತ್ರೋಪಕರಣಗಳನ್ನು ಕೊಡುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ತೊಗರಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಬೇಕು. ಹೈ.ಕ. ಪ್ರದೇಶದ ರೈತರ ಸಮಸ್ಯೆಗಳಿಗೆ ರಾಜ್ಯ ಸಮ್ಮಿಶ್ರ ಸರಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದರು. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಮಳೆ ಅಭಾವದಿಂದ ರೈತರು ಕಂಗಾಲಾಗಿದ್ದಾರೆ. ಆದರೂ ರಾಜ್ಯ ಸರಕಾರ ರೈತರಿಗೆ ನೆರವಿಗೆ ಬರುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಇಂಗಿನ ಮಾತನಾಡಿ, ರೈತರು ಸಮಗ್ರ ಕೃಷಿ ಮತ್ತು ಸಾವಯವ ಕೃಷಿ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು, ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಭೀಮಶೆಟ್ಟಿ ಮುರುಡಾ, ಪ್ರಗತಿಪರ ರೈತ ಧೂಳಗುಂಡಿ ಗುಂಡೇರಾವ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಜೇಂದ್ರ ಅರಕಲ್, ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹರಸೂರ, ಕೋಡ್ಲಿ ಜಿಪಂ ಸದಸ್ಯ ರಾಮಲಿಂಗಾರೆಡ್ಡಿ ದೇಶಮುಖ ಮಾತನಾಡಿದರು.
ಪ್ರಗತಿಪರ ರೈತರಿಗೆ ಸನ್ಮಾನ: ಆದೀನಾಥ ಹೀರಾ ರುದ್ರವಾಡಿ, ಗುಂಡೇರಾವ್ ಧೂಳಗೊಂಡ, ಅಣ್ಣಾರಾವ್ ಕುಡಹಳ್ಳಿ, ಸಂಜೀವಕುಮಾರ ಚಂದನಕೇರಾ, ಶ್ರೀಮಂತರಾವ್ ಗಂಗಾಣಿ, ದೇವೇಂದ್ರಪ್ಪ ಜಿರ್ಜಿ, ಸುಶೀಲಾಬಾಯಿ ರಾಠೊಡ, ರಾಜಪ್ಪ ಗಂಜಗೂಡ, ನಾಗೀಂದ್ರಪ್ಪ ರಾಮತೀರ್ಥ, ದತ್ತಾತ್ರೇಯ ಮುಕರಂಬಿ ಅವರನ್ನು ಸನ್ಮಾನಿಸಲಾಯಿತು.
ಸಂತೋಷ ಗಡಂತಿ, ಲಕ್ಷ್ಮಣ ಆವಂಟಿ, ಅಣ್ಣಾರಾವ್ ಪೆದ್ದಿ, ನ್ಯಾಯವಾದಿ ಶಶಿಕಾಂತ ಆಡಕಿ, ಶ್ರೀಮಂತ ಬುಬಲಿ, ಸೌಭಾಗ್ಯಮ್ಮ ಮಠಪತಿ, ದಿವಾಕರರಾವ್ ಜಹಾಗೀರದಾರ, ಉಮೇಶ ಪಾಟೀಲ ಇನ್ನಿತರರಿದ್ದರು. ಅಣ್ಣಾರಾವ್ ಪೆದ್ದಿ ಸ್ವಾಗತಿಸಿದರು.