Advertisement

Paddy: ಕುಸಿಯುತ್ತಿದೆ ಭತ್ತದ ದರ: ಕಟಾವು ಹತ್ತಿರವಾಗುತ್ತಿದ್ದಂತೆ ರೈತರಲ್ಲಿ ಆತಂಕ

11:52 PM Oct 02, 2024 | Team Udayavani |

ಕೋಟ: ಕಟಾವು ಹತ್ತಿರವಾಗುತ್ತಿದ್ದಂತೆ ಭತ್ತದ ದರ ಕುಸಿಯುವುದು ಪ್ರತಿವರ್ಷವೂ ಇದ್ದದ್ದೇ. ಆದರೆ ಈ ಬಾರಿ ಕುಸಿತದ ಪ್ರಮಾಣದ ಆತಂಕಕಾರಿಯಾಗಿದ್ದು, ರೈತರು ಕಂಗೆಡುವಂತೆ ಮಾಡಿದೆ.

Advertisement

ಕಳೆದ ವರ್ಷ 26ರಿಂದ 28 ರೂಪಾಯಿಗೆ ಮಾರಾಟವಾಗಿದ್ದ ಭತ್ತವನ್ನು ಈಗ 22-23 ರೂ.ಗೆ ಕೇಳುತ್ತಿದ್ದಾರೆ. ಪ್ರತಿವರ್ಷ ಭತ್ತದ ಕಟಾವು ಆರಂಭವಾದ ಕೂಡಲೇ ದರವನ್ನು ಇಳಿಸಲಾಗುತ್ತದೆ. ಕಟಾವು ಮುಗಿದು ಒಂದೆರಡು ತಿಂಗಳ ಬಳಿಕ ಏರಿಸಲಾಗುತ್ತದೆ. ಆದರೆ ಉಡುಪಿ, ದ.ಕ. ಜಿಲ್ಲೆಯಲ್ಲಿ ಭತ್ತವನ್ನು ಸಂಗ್ರಹಿಸಿಟ್ಟು ಮಾರಾಟ ಮಾಡುವ ಕ್ರಮ ಇಲ್ಲ. ಆದ್ದರಿಂದ ರೈತರು ಆರಂಭದಲ್ಲೇ ಕಡಿಮೆ ಬೆಲೆಯಲ್ಲೇ ಮಾರುತ್ತಾರೆ. ಕಟಾವು ಸಂದರ್ಭದ ಅನಿರೀಕ್ಷಿತ ಬೆಲೆ ಕುಸಿತಕ್ಕೆ ಕಡಿವಾಣ ಹಾಕಬೇಕು ಎನ್ನುವುದು ರೈತರ ಆಗ್ರಹ.

ಆರಂಭದಲ್ಲಿ ನೀರಿನಾಂಶ ಹೆಚ್ಚು
ಉದ್ದೇಶ ಪೂರ್ವಕವಾಗಿ ಕಟಾವು ಆರಂಭದಲ್ಲಿ ಬೆಲೆ ಕುಸಿತ ಮಾಡುವುದಿಲ್ಲ. ಆರಂಭದಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಭತ್ತದಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ಒಂದೆರಡು ತಿಂಗಳ ಬಳಿಕ ಭತ್ತ ಖರೀದಿಸಿದರೆ ನೀರಿನಾಂಶ ಇರುವುದಿಲ್ಲ ಹೀಗಾಗಿ ಆರಂಭದಲ್ಲಿ ಕಡಿಮೆ ದರ ನೀಡಿ, ಅನಂತರ ಹೆಚ್ಚು ದರ ನೀಡುತ್ತೇವೆ ಎನ್ನುವುದು ಅಕ್ಕಿ ಗಿರಿಣಿಗಳ ಮಾಲಕರ ಅಭಿಪ್ರಾಯ. ಇದನ್ನು ಒಪ್ಪದ ರೈತರು, ಆರಂಭದಲ್ಲಿ ಒದ್ದೆ ಭತ್ತ ಹಾಗೂ ಉತ್ತಮ ಗುಣಮಟ್ಟದ ಒಣ ಭತ್ತಕ್ಕೂ ಗಿರಣಿ ಮಾಲಕರು ಒಂದೇ ದರ ನೀಡುತ್ತಾರೆ ಎನ್ನುತ್ತಿದ್ದಾರೆ ರೈತರು.

ಹೊರ ಜಿಲ್ಲೆ ಭತ್ತ ಕಡಿಮೆ ದರಕ್ಕೆ

ಅಕ್ಕಿ ಗಿರಿಣಿಗಳಿಗೆ ಹೊರ ಜಿಲ್ಲೆಗಳಿಂದ ಹೇರಳ ಪ್ರಮಾಣದಲ್ಲಿ ಕಡಿಮೆ ದರದಲ್ಲಿ ಭತ್ತ ಪೂರೈಕೆಯಾಗುತ್ತದೆ. ಹೀಗಾಗಿ ಜಿಲ್ಲೆಯ ಭತ್ತದ ಕುರಿತು ಸ್ವಲ್ಪ ಮಟ್ಟಿನ ತಾತ್ಸಾರವಿದೆ. ಇದು ಸರಿಯಲ್ಲ. ಜಿಲ್ಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎನ್ನುವುದು ರೈತ ಕೋಟ ಶಿವಮೂರ್ತಿ ಉಪಾಧ್ಯರ ಅಭಿಪ್ರಾಯ.

ಜಿಲ್ಲಾಡಳಿತ ಕಡಿವಾಣ ಹಾಕಲಿ
ದರ ಇಳಿಕೆ ವಿಷಯದಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಅಕ್ಕಿಗಿರಣಿಗಳ ಮಾಲಕರ ಸಭೆ ಕರೆದು ರೈತರ ಹಿತ ಕಾಪಾಡಬೇಕು ಎನ್ನುವುದು ರೈತ ಸಂಘಟನೆಗಳ ಆಗ್ರಹ.

ದ.ಕ. ಮನವಿ ಬಂದಿಲ್ಲ
ದ.ಕ. ಜಿಲ್ಲೆಯಲ್ಲಿ ಕಟಾವು ಸ್ವಲ್ಪ ತಡವಾಗಿ ನಡೆಯುವುದರಿಂದ ಬೆಲೆ ಸಮಸ್ಯೆ ಕುರಿತು ಯಾವುದೇ ಮನವಿ ಬಂದಿಲ್ಲ. ಮನವಿ ಬಂದಲ್ಲಿ ಈ ಬಗ್ಗೆ ಪರಿಶೀಲಿಸುವುದಾಗಿ ಕೃಷಿ ಇಲಾಖೆ, ಜಿಲ್ಲಾಡಳಿತ ಮುಖ್ಯಸ್ಥರು ತಿಳಿಸಿದ್ದಾರೆ.

Advertisement

ಜಿಲ್ಲಾಡಳಿತ, ಕೃಷಿ ಇಲಾಖೆ, ಎ.ಪಿ.ಎಂ.ಸಿ. ಮಿಲ್‌ ಮಾಲಕರೊಂದಿಗೆ ಜಂಟಿ ಸಭೆ ನಡೆಸಿ ಈ ಬಗ್ಗೆ ಮಿಲ್‌ ಮಾಲಕರಿಗೆ ಮಾರ್ಗದರ್ಶನ ನೀಡುವ ಕೆಲಸ ಶೀಘ್ರದಲ್ಲೇ ನಡೆಯಲಿದೆ.
-ಪೂರ್ಣಿಮಾ,
ಜಂಟಿ ನಿರ್ದೇಶಕರು ಕೃಷಿ ಇಲಾಖೆ ಉಡುಪಿ

ಹೋರಾಟ ಅನಿವಾರ್ಯ
ಅಕ್ಕಿಗಿರಣಿಗಳ ಮಾಲಕರು ಈ ಬಾರಿಯೂ ಕಡಿಮೆ ದರ ನೀಡಿದರೆ ಜಿಲ್ಲಾದ್ಯಂತ ರೈತ ಸಂಘಟನೆಗಳ ಮೂಲಕ ಹೋರಾಟಕ್ಕೆ ಕರೆ ನೀಡಲಾಗುವುದು. ರೈತರು ಎಷ್ಟೇ ಕಷ್ಟವಾದರೂ ಕನಿಷ್ಠ ಬೆಲೆಗೆ ಭತ್ತ ಮಾರಾಟ ಮಾಡಬಾರದು. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದು ಸಮಸ್ಯೆಗೆ ಪರಿಹಾರ ನೀಡಬಹುದು ಎನ್ನುವ ನಿರೀಕ್ಷೆ ಇದೆ.
-ಜಯರಾಮ್‌ ಶೆಟ್ಟಿ ಮಣೂರು,
ರೈತಧ್ವನಿ ಸಂಘಟನೆ ಅಧ್ಯಕ್ಷರು

ಸಭೆ ಕರೆದು ಮಾತನಾಡುವೆ
ಅಕ್ಕಿ ಗಿರಣಿ ಮಾಲಕರು ಭತ್ತವನ್ನು 22-23 ರೂ. ಗೆ ಕೇಳುತ್ತಿದ್ದಾರೆ. ಈ ರೀತಿಯ ದರ ಕುಸಿತ ಯಾವತ್ತೂ ಆಗಿಲ್ಲ ಎಂದು ಕೆಲವು ಸಂಘಟನೆಗಳು ತಿಳಿಸಿವೆ. ಈ ಬಗ್ಗೆ ಗಿರಣಿ ಮಾಲಕರು ಹಾಗೂ ರೈತರ ಸಭೆ ಕರೆದು ಚರ್ಚಿಸಿ ರೈತರ ಹಿತ ಕಾಪಾಡಲಾಗುವುದು.
-ಡಾ| ವಿದ್ಯಾ ಕುಮಾರಿ,
ಜಿಲ್ಲಾಧಿಕಾರಿಗಳು ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next