ನವದೆಹಲಿ: ಕೇರಳ ಮಹಿಳಾ ಉದ್ಯಮಿಯಾದ ಫಾಲ್ಗುಣಿ ನಾಯರ್ ಅವರ ಮಾಲೀಕತ್ವದ ಖ್ಯಾತ ಫ್ಯಾಷನ್ ಬ್ರಾಂಡ್ ಆದ “ನೈಕಾ’, ಬುಧವಾರದಿಂದ ಷೇರು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮೊದಲ ದಿನವೇ 1 ಲಕ್ಷ ಕೋಟಿ ರೂ. ಬಂಡವಾಳ ಸಂಗ್ರಹಿಸಿದೆ.
ಇದರಿಂದಾಗಿ, ಈ ಕಂಪನಿಯ ಒಟ್ಟಾರೆ ಮೌಲ್ಯ 9.6 ಸಾವಿರ ಕೋಟಿ ರೂ.ಗಳಿಗೆ ಏರಿದೆ.
ಈ ಮೂಲಕ, ನೈಕಾದ ಮಾತೃ ಕಂಪನಿಯಾದ ಎಫ್ಎಸ್‌ಎನ್ ಇ-ಕಾಮರ್ಸ್ ವೆಂಚರ್ಸ್ ಕಂಪನಿಯು, ಮಹಿಳಾ ಉದ್ಯಮಿಯೊಬ್ಬರ ನೇತೃತ್ವದಲ್ಲಿ ಷೇರು ಮಾರುಕಟ್ಟೆಗೆ ಲಗ್ಗೆಯಿಟ್ಟ ಮೊದಲ ಭಾರತೀಯ ಕಂಪನಿಯೆಂಬ ಹಿರಿಮೆಗೆ ಪಾತ್ರವಾಗಿದೆ. ಜೊತೆಗೆ, ಫಾಲ್ಗುಣಿ ಅವರು, ಏಕಾಂಗಿಯಾಗಿ ಇಷ್ಟು ದೊಡ್ಡ ಮೌಲ್ಯದ ಕಂಪನಿಯನ್ನು ಹುಟ್ಟುಹಾಕಿದ ದೇಶದ ಮೊದಲ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೊದಲ ದಿನವೇ ಈ ಕಂಪನಿಯ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಅತೀವ ಆಸಕ್ತಿ ತೋರಿದ ಹಿನ್ನೆಲೆಯಲ್ಲಿ ಈ ಕಂಪನಿಯ ಷೇರುಗಳು ನಿಗದಿತ ಗರಿಷ್ಠ ಬೆಲೆಗಿಂತ ಶೇ. 77.87ರಷ್ಟು ಹೆಚ್ಚು ಬೆಲೆಗೆ ಮಾರಾಟವಾದವು.
ಇದನ್ನೂ ಓದಿ:ಐಎನ್‌ಕ್ಸ್ ಮೀಡಿಯಾ ಪ್ರಕರಣ: ದಾಖಲೆ ಪರಿಶೀಲಿಸಲು ಚಿದು, ಪುತ್ರಗೆ ಅವಕಾಶ
“ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್’ (ಎನ್‌ಎಸ್‌ಇ) ಈ ಕಂಪನಿಯ ಪ್ರತಿಯೊಂದು ಷೇರು ಬೆಲೆಯನ್ನು 1,125 ರೂ.ಗಳಿಗೆ ನಿಗದಿಪಡಿಸಿತ್ತು. ಆದರೆ, ಈ ಷೇರುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಪ್ರತಿ ಷೇರು 2,054 ರೂ. ಮೌಲ್ಯದಿಂದ ಅದು ಮಾರಾಟವಾಗಿತ್ತು.
ದಿನಾಂತ್ಯದ ಹೊತ್ತಿಗೆ ಷೇರುಗಳ ಮೌಲ್ಯ ಪುನಃ ಶೇ. 10ರಷ್ಟು ಹೆಚ್ಚಾಗಿ ಪ್ರತಿ ಷೇರುಗಳು 2,208 ರೂ.ಗಳಷ್ಟು ಬಿಕರಿಯಾದವು. ಈ ಮೂಲಕ, ಮೊದಲ ದಿನವೇ ಈ ಕಂಪನಿಗೆ 1 ಲಕ್ಷ ಕೋಟಿ ರೂ.ಗಳ ಬಂಡವಾಳ ಹರಿದುಬಂದಿದೆ.