Advertisement

ಫಕೀರ ದಿಂಗಾಲೇಶ್ವರ ಶ್ರೀ ಹೇಳಿಕೆಗೆ ಖಂಡನೆ

01:31 PM Apr 27, 2022 | Team Udayavani |

ಶಿರಹಟ್ಟಿ: ಮಠದ ಶ್ರೀಗಳು ಧಾರ್ಮಿಕ, ಆಧ್ಯಾತ್ಮಿಕ, ಪ್ರವಚನ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕಾಂಗ್ರೆಸ್‌ ಮುಖಂಡರನ್ನು ಮೆಚ್ಚಿಸುವ ಭರದಲ್ಲಿ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು 3012 ಪರ್ಸಂಟೇಜ್‌ ಸರ್ಕಾರ ಎಂಬ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ ಹೇಳಿದರು.

Advertisement

ಪಟ್ಟಣದ ಕಪ್ಪತ್ತನವರ ಸರ್ಕಲ್‌ ಹತ್ತಿರ ರಾಜಾ ಟಾಕೀಸ್‌ ನಲ್ಲಿ ಬಿಜೆಪಿ ವತಿಯಿಂದ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಮಠ ಅತ್ಯಂತ ಪುರಾತನ ಹಾಗೂ ಐತಿಹಾಸಿಕ ಕುರುಹು ಹೊಂದಿರುವ ಹಿಂದೂ-ಮುಸ್ಲಿಂ ಭಾವೈಕ್ಯ ಮಠ, ಸರ್ಕಾರದ ಮಟ್ಟದಲ್ಲಿ ಭಾವೈಕ್ಯತೆ ದಿನಾಚರಣೆ ಆಚರಿಸುವ ನಿರ್ಧಾರದ ಸಮಯದಲ್ಲಿ ನಮ್ಮ ಮಠವನ್ನು ಪರಿಗಣಿಸಬೇಕೆಂದು ನಾವು ಸಹ ವಿನಂತಿಸುತ್ತೇವೆ. ಆದರೆ ಕಾಣದ ಕೈಗಳನ್ನು ಮೆಚ್ಚಿಸಲು ಸರ್ಕಾರ ಹಾಗೂ ಸಚಿವ ಸಿಸಿ ಪಾಟೀಲ ವಿರುದ್ಧ ಆರೋಪ ಮಾಡುವುದು ಪೂಜ್ಯರ ಘನತೆಗೆ ತಕ್ಕದಲ್ಲ. ಬಿಜೆಪಿ ಸರ್ಕಾರ ಮಠ ಮಾನ್ಯಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಕಲ್ಪಿದೆ.

ಸಿಸಿ ಪಾಟೀಲರು ಸಹ ಶಿರಹಟ್ಟಿಯಲ್ಲಿ ಕೋರ್ಟ್‌ ಸ್ಥಾಪನೆ, ಬಸ್‌ ಡಿಪೋ, ವಿವಿಧ ಕೆರೆ ತುಂಬಿಸುವ ಯೋಜನೆಯಡಿ 197 ಕೋಟಿ, ರೈಲು ಯೋಜನೆಗೆ 640 ಕೋಟಿ, ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ 500 ಕೋಟಿಗಿಂತಲ್ಲೂ ಅಧಿಕ ಅನುದಾನವನ್ನು ಕಲ್ಪಿಸಿದ್ದಾರೆ. ಇಂತಹ ಜನಪರ ಸರ್ಕಾರವನ್ನು ಆಧಾರರಹಿತ ಹೇಳಿಕೆಯಿಂದ ದೂಷಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

ಬಿಜೆಪಿ ಶಿರಹಟ್ಟಿ ಮಂಡಲ ಅಧ್ಯಕ್ಷ ಫಕ್ಕೀರೇಶ ರಟ್ಟಿಹಳ್ಳಿ, ಚಂದ್ರಕಾಂತ ನೂರಶಟ್ಟರ, ರಾಮಣ್ಣ ಡಂಬಳ, ವಿರೂಪಾಕ್ಷಪ್ಪ ಅಣ್ಣಿಗೇರಿ, ನಾಗರಾಜ ಲಕ್ಕುಂಡಿ, ತಿಮ್ಮರೆಡ್ಡಿ ಮರಡ್ಡಿ ಮಾತನಾಡಿ, ದ್ವೇಷ ಬಿಡು ಪ್ರೀತಿ ಮಾಡು ಎಂಬ ದಿವ್ಯ ಸಂದೇಶದಂತೆ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು ನಡೆದುಕೊಳ್ಳಬೇಕು. ನಿಮ್ಮ ಹೇಳಿಕೆಯನ್ನು ಸಮಾಜ ಗಂಭೀರವಾಗಿ ಪರಿಗಣಿಸುತ್ತದೆ. ವಿರೋಧ ಪಕ್ಷದ ಓಲೈಕೆಗಾಗಿ ಸಮಾಜದ ಸ್ವಾಸ್ಥ ಹಾಳು ಮಾಡಬಾರದು. ಭ್ರಷ್ಟಾಚಾರ ನಿಜವಾದರೆ ದಾಖಲೆ ನೀಡಿ ಮುಖ್ಯಮಂತ್ರಿಗಳು ತನಿಖೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

Advertisement

ಅದನ್ನು ಬಿಟ್ಟು ಸಚಿವ ಸಿಸಿ ಪಾಟೀಲರ ಮನೆ ಮುಂದೆ ಧರಣಿ ನಡೆಸಲು ಮುಂದಾದರೆ ಶಿರಹಟ್ಟಿ ಮಠದ ಮುಂದೆ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಭೀಮಸಿಂಗ ರಾಠೊಡ, ಜಾನು ಲಮಾಣಿ, ಮೋಹನ ಗುತ್ತೆಮ್ಮನವರ, ದೀಪು ಕಪ್ಪತ್ತನವರ, ರಾಮಣ್ಣ ಕಂಬಳಿ, ಮೋಹನ ಗುತ್ತೇಮ್ಮನವರ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next