Advertisement

ವಿವಾದ ಸೃಷ್ಟಿಸಿದ ಫ‌ಖಾರ್‌ ಝಮಾನ್‌ ರನ್ ಔಟ್: ಆಗಿದ್ದೇನು? ನಿಯಮಗಳು ಏನು ಹೇಳುತ್ತವೆ?

08:58 AM Apr 06, 2021 | Team Udayavani |

ಜೊಹಾನ್ಸ್‌ಬರ್ಗ್‌: ಪಾಕಿಸ್ತಾನ ಮತ್ತು ದ.ಆಫ್ರಿಕಾ ನಡುವೆ ಇಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯ ಭಾರೀ ವಿವಾದ ಕೆರಳಿಸಿದೆ. ಇದಕ್ಕೆ ಕಾರಣ 193 ರನ್‌ ಬಾರಿಸಿದ್ದ ಪಾಕ್‌ ಆಟಗಾರ ಫ‌ಖಾರ್‌ ಝಮಾನ್‌ ಔಟಾದ ರೀತಿ. ದ.ಆಫ್ರಿಕಾ ವಿಕೆಟ್‌ ಕೀಪರ್‌ ಕ್ವಿಂಟನ್‌ ಡಿ ಕಾಕ್‌ ಉದ್ದೇಶಪೂರ್ವಕವಾಗಿ ಝಮಾನ್‌ ಗಮನವನ್ನು ವಿಚಲಿತಗೊಳಿಸಿ ರನೌಟ್‌ ಆಗಲು ಕಾರಣರಾದರು ಎನ್ನುವುದು ಆರೋಪ.

Advertisement

ತಂಡವೊಂದು ರನ್‌ ಬೆನ್ನತ್ತುವಾಗ ಅತ್ಯಧಿಕ ರನ್‌ ಬಾರಿಸಿದ ದಾಖಲೆ ನಿರ್ಮಿಸಿದ ಝಮಾನ್‌ ದ್ವಿಶತಕ ತಪ್ಪಿಸಿಕೊಂಡರು. ಮಾತ್ರವಲ್ಲ ತಮ್ಮ ತಂಡ ಸೋಲುವುದನ್ನು ಅಸಹಾಯಕರಾಗಿ ನೋಡಬೇಕಾಯಿತು.

ಆಗಿದ್ದೇನು?: ಮೊದಲು ಬ್ಯಾಟ್‌ ಮಾಡಿದ್ದ ದ.ಆಫ್ರಿಕಾ 6 ವಿಕೆಟ್‌ಗೆ 341 ರನ್‌ ಗಳಿಸಿತ್ತು. 342 ರನ್‌ ಗುರಿ ಬೆನ್ನತ್ತಿ ಹೊರಟ ಪಾಕ್‌ ಪರ ಫ‌ಖಾರ್‌ ಝಮಾನ್‌ 192 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. ಪಾಕ್‌ ಇನಿಂಗ್ಸ್‌ನ 50ನೇ ಓವರ್‌ನ ಮೊದಲ ಎಸೆತವನ್ನು ಎನ್‌ಗಿಡಿ ಹಾಕಿದರು. ಅದನ್ನು ಲಾಂಗ್‌ಆಫ್ಗೆ ಬಡಿದಟ್ಟಿ ಝಮಾನ್‌ ಎರಡನೇ ರನ್‌ ಪೂರೈಸಲು ಓಡಿದರು. ಈ ವೇಳೆ ಕೀಪರ್‌ ಕ್ವಿಂಟನ್‌ ಡಿ ಕಾಕ್‌, ಚೆಂಡನ್ನು ಇನ್ನೊಂದು ತುದಿಯತ್ತ ಎಸೆಯಲಾಗುತ್ತಿದೆ ಎಂದು ಪದೇ ಪದೇ ಹೇಳುತ್ತ ಝಮಾನ್‌ರನ್ನು ವಿಚಲಿತಗೊಳಿಸಿದರು. ಇದರಿಂದ ಹಿಂದೆ ತಿರುಗಿ ನೋಡಿದ ಝಮಾನ್‌ ಓಟವನ್ನು ನಿಧಾನಗೊಳಿಸಿದರು.

ಇದನ್ನೂ ಓದಿ:ಫ‌ಕಾರ್‌ ಜಮಾನ್‌: ಏಕದಿನ ಪಂದ್ಯದ ಚೇಸಿಂಗ್‌ ವೇಳೆ ಅತ್ಯಧಿಕ ರನ್‌

ಕ್ಷೇತ್ರರಕ್ಷಕ ಮಾಕ್ರಮ್‌ ಎಸೆದ ಚೆಂಡು ನೇರವಾಗಿ ವಿಕೆಟ್‌ಗೆ ಅಪ್ಪಳಿಸಿತು. ಅನಗತ್ಯವಾಗಿ ಝಮಾನ್‌ ರನೌಟಾದರು! ಇದು ಕ್ರೀಡಾಸ್ಫೂರ್ತಿಗೆ ವಿರುದ್ಧ, ಇದರ ವಿರುದ್ಧ ಕ್ರಿಕೆಟ್‌ ನಿಯಮಗಳ ಪ್ರಕಾರ ಕ್ರಮತೆಗೆದುಕೊಳ್ಳಬೇಕೆಂದು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಯಿತು.

Advertisement

ನಿಯಮಗಳು ಏನು ಹೇಳುತ್ತವೆ?

45.1.1ರ ನಿಯಮದನ್ವಯ ಯಾವುದೇ ಕ್ಷೇತ್ರ ರಕ್ಷಕ, ಬ್ಯಾಟ್ಸ್‌ ಮನ್‌ ಗಮನವನ್ನು ಉದ್ದೇಶ ಪೂರ್ವಕವಾಗಿ ಸೆಳೆದರೆ, ಅಡ್ಡಿ ಮಾಡಿದರೆ ಅದನ್ನು ಶಿಕ್ಷಾರ್ಹ ತಪ್ಪೆಂದು ಪರಿಗಣಿಸಲಾಗುತ್ತದೆ. ಪರಿಣಾಮ ಬ್ಯಾಟ್ಸ್‌ಮನ್‌ ನಾಟೌಟ್‌ ಆಗುತ್ತಾನೆ, ಹಾಗೆಯೇ ತಂಡಕ್ಕೆ 5 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅಂದರೆ ಎದುರಾಳಿ ತಂಡಕ್ಕೆ 5 ರನ್‌ ದಂಡ ಹಾಕಲಾಗುತ್ತದೆ. ಈ ಅಧಿಕಾರ ಅಂಪೈರ್‌ಗಿದೆ ಎಂದು ಎಂಸಿಸಿ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next