ಕನಕಪುರ: ಅಕ್ರಮವಾಗಿ ಗುರುತಿನ ಚೀಟಿ ಮಾಡುತ್ತಿದ್ದ ಹಲವು ಸೈಬರ್ ಸೆಂಟರ್‌ಗಳ ಮೇಲೆ ದಿಢೀರ್ ದಾಳಿನಡೆಸಿರುವ ತಹಶೀಲ್ದಾರ್ ವರ್ಷಾ ಒಡೆಯರ್, ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದು ಮಳಿಗೆಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ.
ನಗರದ ಅಂಚೆ ಕಚೇರಿ ರಸ್ತೆಯ ನಗರಸಭೆ ವಾಣಿಜ್ಯ ಸಂಕೀರ್ಣದಲ್ಲಿರುವ ಎಸ್‌ಎಲ್‌ವಿ ಜೆರಾಕ್ಸ್ ಅಂಗಡಿ, ಕೆಎನ್‌ಎಸ್ ವೃತ್ತದ ಬಳಿ ಇರುವ ನಂಜುಂಡೇಶ್ವರ ಸೈಬರ್ ಸೆಂಟರ್‌ಮೇಲೆ ದಾಳಿ ನಡೆಸಿ 100 ನಕಲಿ ಗುರುತಿನಚೀಟಿ ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಸೈಬರ್ ಸೆಂಟರ್‌ಗಳನ್ನು ಜಪ್ತಿ ಮಾಡಿದ್ದಾರೆ.
ಶೀಘ್ರ ಪರಿಶೀಲನೆ ನಡೆಸಿ ಕಾನೂನುಕ್ರಮ: “ಉದಯವಾಣಿ’ಯೊಂದಿಗೆ ಮಾತನಾಡಿದ ತಹಶೀಲ್ದಾರ್ ವರ್ಷಾ ಒಡೆಯರ್, ಚುನಾವಣೆ ಮುಗಿದ ಬಳಿಕ ಮಳಿಗೆಯಲ್ಲಿ ಎಷ್ಟು ನಕಲಿ ಗುರುತಿನಚೀಟಿ ವಿತರಣೆ ಮಾಡಲಾಗಿದೆ ಎಂಬುದನ್ನು ತನಿಖೆಮಾಡಲಾಗುವುದು. ಬೇರೆ ಯಾವ ಮಳಿಗೆಗಳಲ್ಲಿ ಈರೀತಿ ಅಕ್ರಮವಾಗಿ ನಕಲು ಚುನಾವಣಾ ಗುರುತಿನ ಚೀಟಿ ವಿತರಣೆ ಮಾಡುತ್ತಿದ್ದಾರೆ ಎಂಬುದನ್ನುಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಲಾಗುವುದು.ಈ ಬಗ್ಗೆ ಸುಳಿವು ಕಂಡು ಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ದಾಳಿಯಲ್ಲಿ ಚುನಾವಣೆ ಇಲಾಖೆಯ ಸುರೇಶ್, ಸಿಬ್ಬಂದಿ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ… :
ಮಂಗಳವಾರ ಮಧ್ಯಾಹ್ನ ಮತದಾರರೊಬ್ಬರು ಅಕ್ರಮವಾಗಿ ಪಡೆದ ನಕಲು ಚುನಾವಣಾ ಗುರುತಿನ ಚೀಟಿಯನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಚುನಾವಣಾ ಅಧಿಕಾರಿಗಳಿಗೆ ನೀಡಿದಾಗ ಅಧಿಕಾರಿಗಳೇ ಅಚ್ಚರಿ ಪಟ್ಟಿದ್ದಾರೆ. ಇದು ಅಸಲಿಯಲ್ಲ ನಕಲಿ ಎಂದು ಖಾತರಿ ಪಡಿಸಿಕೊಂಡ ಅವರು, ತಹಶೀಲ್ದಾರ್ ಗಮನಕ್ಕೆ ತಂದಿದ್ದಾರೆ. ಚುನಾವಣಾ ಪೂರ್ವ ತಯಾರಿಯಲ್ಲಿದ್ದ ತಹಶೀಲ್ದಾರ್ ವರ್ಷ ಒಡೆಯರ್ ಮತ್ತು ಚುನಾವಣಾ ಅಧಿಕಾರಿಗಳ ತಂಡ, ಸಂಜೆ7ರ ಸಮಯದಲ್ಲಿ ಅಂಚೆ ಕಚೇರಿ ರಸ್ತೆಯ ಎಸ್‌ಎಲ್‌ವಿ ಜೆರಾಕ್ಸ್ ಮಳಿಗೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ, ನಕಲಿ ಚುನಾವಣಾ ಗುರುತಿನ ಚೀಟಿಗಳು ಸಿಕ್ಕಿವೆ. ಚುನಾವಣಾ ನೋಂದಣಾಧಿಕಾರಿಗಳ ಸಹಿಯ ಜಾಗದಲ್ಲಿ ಬೇರೊಂದು ಸಹಿ ಮಾಡಿರುವ ನಕಲುಕಾರ್ಡ್ ವಶಕ್ಕೆ ಪಡೆದಿರುವ ತಹಶೀಲ್ದಾರ್ ವರ್ಷಾ ಒಡೆಯರ್ ಮಳಿಗೆ ಮಾಲೀಕರಿಗೆ ನೋಟಿಸ್ ನೀಡಿ, ಜಪ್ತಿ ಮಾಡಲುಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.