Advertisement

ನಕಲಿ ಮತ ಹಾಕಿದರೆ ಕಠಿಣ ಕ್ರಮ

12:21 PM Apr 22, 2018 | Team Udayavani |

ಬೆಂಗಳೂರು: ನಕಲಿ ಮತದಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ.

Advertisement

ಚುನಾವಣಾ ಆಯೋಗ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಚಿತ್ರಕಲಾ ಪರಿಷತ್‌ ಹಾಗೂ ವ್ಯಂಗ್ಯಚಿತ್ರಕಾರರ ಸಂಘದ ಸಹಯೋಗದಲ್ಲಿ ಮತದಾರರ ಜಾಗೃತಿಗೆ ಚಿತ್ರಕಲಾ ಪರಿಷತ್ತಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವ್ಯಂಗ್ಯಚಿತ್ರಗಳು ಮತ್ತು ಪ್ರಚಾರ ಸಾಮಾಗ್ರಿಗಳ ಪ್ರದರ್ಶನ ಹಾಗೂ ವ್ಯಂಗ್ಯಚಿತ್ರ ರಚನೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಂತಿಮ ಮತದಾರರ ಪಟ್ಟಿ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 89 ಲಕ್ಷ ಮತದಾರರಿದ್ದಾರೆ. ಆದರೆ, ಇದರಲ್ಲಿ ನಕಲಿ ಮತದಾರರು ಇರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಮತದಾರರ ಪಟ್ಟಿಯ ಪರಿಪೂರ್ಣತೆ ಮತ್ತು ಪಾವಿತ್ರ್ಯತೆ ಕಾಪಾಡಿಕೊಳ್ಳಲು ಆಯೋಗ ಬದ್ಧವಾಗಿದೆ.

ಸಾಕಷ್ಟು ಸಂಖ್ಯೆಯಲ್ಲಿ ನಕಲಿ ಮತದಾರರ ನೋಂದಣಿಯಾಗಿದೆ, ಒಂದು ಧರ್ಮ ಮತ್ತು ಸಮುದಾಯದ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬ ದೂರು ಮತ್ತು ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪು ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಮತದಾರರಲ್ಲಿ ಜಾಗೃತಿ ಮೂಡಿಸಲು ಆಯೋಗದಿಂದ ಜನರಿಗೆ ತಕ್ಷಣ ಅರ್ಥಮಾಡಿಸುವಂತಹ ಮತ್ತು ಆಕರ್ಷಕ ಮಾಧ್ಯಮಗಳನ್ನು ಬಳಸಲಾಗುತ್ತಿದೆ. ವ್ಯಂಗ್ಯಚಿತ್ರಗಳಿಗೆ ತನ್ನದೇ ಆದ ಮಹತ್ವವಿದೆ. ಇವುಗಳಿಗೆ ಜನ ಬೇಗ ಮಾರುಹೋಗುತ್ತಾರೆ. ದೊಡ್ಡ ಲೇಖನ, ಅಂಕಣಗಳು ಹೇಳುವುದನ್ನು ಸಣ್ಣ ಗೆರೆಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ವ್ಯಂಗ್ಯಚಿತ್ರಗಳ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರದರ್ಶನ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ಖ್ಯಾತನಾಮ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರಗಳ ಪ್ರದರ್ಶನ ಏರ್ಪಡಿಸಲಾಯಿತು. ಅಲ್ಲದೇ ಕೆಲವು ವ್ಯಂಗ್ಯಚಿತ್ರಕಾರರ ಮತದಾರರ ಜಾಗೃತಿ ಬಗ್ಗೆ ಸ್ಥಳದಲ್ಲೇ ವ್ಯಂಗ್ಯಚಿತ್ರಗಳನ್ನು ಬರೆದರು. ಇದನ್ನು ವೀಕ್ಷಿಸಿದ ಮುಖ್ಯ ಚುನಾವಣಾಧಿಕಾರಿ, ಇವುಗಳಲ್ಲಿ ಆಯ್ದ ವ್ಯಂಗ್ಯಚಿತ್ರಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಮತದಾರರ ಜಾಗೃತಿಗೆ ಬಳಸಿಕೊಳ್ಳಲಾಗುವುದು ಎಂದರು. 

ಈ ವೇಳೆ ಅಪರ ಮುಖ್ಯ ಚುನಾವಣಾಧಿಕಾರಿ ಡಾ. ಬಿ.ಆರ್‌. ಮಮತಾ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next