ಬೆಂಗಳೂರು: ವಿವಿಧ ಪ್ರಕರಣಗಳಲ್ಲಿ ಬಂಧನ ಕ್ಕೊಳಗಾಗಿ ನ್ಯಾಯಾಲಯದಲ್ಲಿ ಜಾಮೀನು ಸಲ್ಲಿಸಿರುವ ಆರೋಪಿಗಳಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ಶ್ಯೂರಿಟಿ ನೀಡುತ್ತಿದ್ದ ಒಬ್ಬ ಮಹಿಳೆ ಸೇರಿ 9 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಯಚೂರು ಮೂಲದ ವೀರೇಶ್ (37), ಅಮರೇಶ್ (38), ಕೊಪ್ಪಳದ ಗಂಗಾವತಿಯ ಉಮೇಶ್ ಕುಮಾರ್ (48), ಬೆಂಗಳೂರಿನ ಮಾದವಾರ ನಿವಾಸಿ ಪ್ರಕಾಶ್ (42), ಕೊಪ್ಪಳ ಜಿಲ್ಲೆಯ ಸಂತೋಷ್ (29), ಮೈಸೂರಿನ ನಂಜನಗೂಡು ನಿವಾಸಿ ಉಮೇಶ್ (49), ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ನಾಗರಾಜ್ (46), ಮಂಜುನಾಥ (48) ಮತ್ತು ಬೆಂಗಳೂರಿನ ಆರ್.ಟಿ.ನಗರ ನಿವಾಸಿ ತಬಸಮ್ (38) ಬಂಧಿತರು. ಆರೋಪಿಗಳಿಂದ 35 ನಕಲಿ ಆಧಾರ್ ಕಾರ್ಡ್‌ಗಳು ಮತ್ತು 7 ಸ್ವತ್ತಿನ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
40-50 ಸಾವಿರಕ್ಕೆ ಜಾಮೀನು: ಆರೋಪಿಗಳು ಕೆ.ಜಿ.ರಸ್ತೆಯ ಮೈಸೂರು ಬ್ಯಾಂಕ್ ಸಮೀಪದ ಟೀ ಅಂಗಡಿ ಬಳಿಯೇ ಅಕ್ರಮ ಅಡ್ಡೆ ಮಾಡಿಕೊಂಡಿದ್ದರು. ಸಮೀಪದ ಕೋರ್ಟ್‌ಗೆ ವಿವಿಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಆರೋಪಿಗಳು ಅಥವಾ ಅವರ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಇಂತಿಷ್ಟು ಹಣ ನೀಡಿದರೆ, ಶ್ಯೂರಿಟಿ ನೀಡುವುದಾಗಿ ಹೇಳುತ್ತಿದ್ದರು. ಅದರಂತೆ 40-50 ಸಾವಿರ ರೂ. ಪಡೆದು ನಕಲಿ ಆಧಾರ್ ಕಾರ್ಡ್, ಜಮೀನಿನ ಪಹಣಿ, ಸೇಲ್ ಡೀಡ್, ಮ್ಯೂಟೇಷನ್‌ಗಳನ್ನು ಕೋರ್ಟ್‌ಗೆ ಸಲ್ಲಿಸಿ ಶ್ಯೂರಿಟಿ ನೀಡಿ ಬಿಡುಗಡೆ ಮಾಡಿಸುತ್ತಿದ್ದರು. ಈ ಮಾಹಿತಿ ಪಡೆದ ಸಿಸಿಬಿಯ ಪೂರ್ವ ವಿಭಾಗ ಎಸಿಬಿ ಪುಟ್ಟಸ್ವಾಮಿಗೌಡ ಮತ್ತು ಇನ್‌ಸ್ಪೆಕ್ಟರ್ ವಿ.ಬಾಲಾಜಿ ನೇತೃತ್ವದ ತಂಡ ಕಾರ್ಯಾಚರಣೆ ಆರೋಪಿಗಳನ್ನು ಬಂಧಿಸಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಆರೋಪಿಗಳ ವಿಚಾರಣೆಯಲ್ಲಿ ಒಂದೇ ಹೆಸರಿನ ಬೇರೆ ಬೇರೆ ನಂಬರ್ ಇರುವ ಆಧಾರ್ ಕಾರ್ಡ್, ಬೇರೆ ಬೇರೆ ವ್ಯಕ್ತಿಗಳ ಆಧಾರ್ ಕಾರ್ಡ್, ಹೆಸರು ತಿದ್ದುಪಡಿ ಮಾಡಿರುವ ಜಮೀನಿನ ಪಹಣಿ ಹಾಗೂ ಮ್ಯೂಟೇಷನ್‌ಗಳನ್ನು ಕೋರ್ಟ್‌ಗೆ ಅಸಲಿ ದಾಖಲೆಗಳೆಂದು ಸಲ್ಲಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂಬುದು ಗೊತ್ತಾಗಿದೆ.
ಐದಾರು ವರ್ಷಗಳಿಂದ ಕೋರ್ಟ್‌ಗೆ ವಂಚನೆ
ಆರೋಪಿಗಳು ಸುಮಾರು ಐದಾರು ವರ್ಷಗಳಿಂದ ಇದೇ ಮಾದರಿಯಲ್ಲಿ ಸರ್ಕಾರ ಮತ್ತು ಕೋರ್ಟ್‌ಗೆ ವಂಚಿಸುತ್ತಿರುವುದು ಪತ್ತೆಯಾಗಿದೆ. ಈ ಹಿಂದೆಯೂ ಇದೇ ಮಾದರಿಯಲ್ಲಿ ನಕಲಿ ದಾಖಲೆ ಸಲ್ಲಿಸಿ ಕೋರ್ಟ್‌ಗೆ ವಂಚಿಸುತ್ತಿರುವುದು ಪತ್ತೆಯಾಗಿತ್ತು. ಹೀಗಾಗಿ ಆ ತಂಡಕ್ಕೂ ಈ ತಂಡಕ್ಕೂ ಸಂಬಂಧ ಇದೆಯೇ ಸೇರಿ ವಿವಿಧ ಆಯಾಮಗಳಲ್ಲಿ ಹೆಚ್ಚಿನ ತನಿಖೆ ನಡೆಸಲು ಹಲಸೂರು ಗೇಟ್ ಠಾಣೆ ಪೊಲೀಸರಿಗೆ ಪ್ರಕರಣ ವರ್ಗಾಯಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು. ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.