ಬೆಂಗಳೂರು: ಜಮೀನುವೊಂದರ ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಭೂ ನ್ಯಾಯಮಂಡಳಿ ಮಾಜಿ ಸದಸ್ಯ ಎಂ. ನಾರಾಯಣ ಸ್ವಾಮಿ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸಲು ಗುರುವಾರ ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದ ಹೈಕೋರ್ಟ್, ಆರೋಪಿ ವಿರುದ್ಧ ದೂರು ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತು.
ನ್ಯಾಯಮೂರ್ತಿಗಳ ನಿರ್ದೇಶನದ ಮೇರೆಗೆ ಕೋರ್ಟ್ ಹಾಲಿನಲ್ಲಿಯೇ ನಾರಾಯಣ ಸ್ವಾಮಿ ಅವರನ್ನು ವಶಕ್ಕೆ ಪಡೆದ ಪೊಲೀಸರು, ಒಂದೆರಡು ಗಂಟೆ ನಂತರ ಬಿಡುಗಡೆಗೊಳಿಸಿದರು. ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಹೊಸಕೋಟೆಯ ಇಂಜಿನಹಳ್ಳಿ ನಿವಾಸಿ ವಿ. ರಾಜಣ್ಣ ಹಾಗೂ ಇತರರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಎನ್. ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.
ಇದಕ್ಕೂ ಮೊದಲು ಅರ್ಜಿಗೆ ನಾರಾಯಣ ಸ್ವಾಮಿ ಆಕ್ಷೇಪಣೆ ಸಲ್ಲಿಸಿದ್ದರು. ಹಾಗೆಯೇ, ಆಕ್ಷೇಪಣೆಯಲ್ಲಿನ ಎಲ್ಲ ಅಂಶಗಳು ಸತ್ಯದಿಂದ ಕೂಡಿವೆ ಎಂದು ಪ್ರಮಾಣೀಕರಿಸಿ ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ತಮ್ಮ ಆಕ್ಷೇಪಣೆ ಪತ್ರದೊಂದಿಗೆ ಸಲ್ಲಿಸಿದ್ದ ದಾಖಲೆ (ಗೇಣಿ)ಯಲ್ಲಿನ ಮಾಹಿತಿಯನ್ನು ನಾರಾಯಣ ಸ್ವಾಮಿ ತಿರುಚಿದ್ದರು. ನ್ಯಾಯಮೂರ್ತಿಗಳ ಮುಂದೆ ಇದು ಬಹಿರಂಗವಾಯಿತು.
ನಕಲಿ ದಾಖಲೆ ಸಲ್ಲಿಸಿರುವ ನಾರಾಯಣ ಸ್ವಾಮಿ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸುವಂತೆ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದರು. ಸಂಜೆಗೆ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಭದ್ರತೆ ಕಾತರಿ ಪಡೆದು ಬಿಡುಗಡೆ ಮಾಡಿದರು.
ಪ್ರಕರಣ ಏನು?: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಅಪ್ಪಸಂದ್ರ ಗ್ರಾಮದ ಸರ್ವೆ ನಂಬರ್ 29ರ 5 ಎಕರೆ ಜಮೀನು ಮಾಲಿಕತ್ವದ ಬಗ್ಗೆ ಅರ್ಜಿದಾರ ವಿ. ರಾಜಣ್ಣ ಮತ್ತು ಕರ್ನಾಟಕ ಭೂ ನ್ಯಾಯಮಂಡಳಿಯ ಮಾಜಿ ಸದಸ್ಯ ನಾರಾಯಣ ಸ್ವಾಮಿ ನಡುವೆ ವಿವಾದ ಇದೆ. ಈ ಸಂಬಂಧ ವಿ. ರಾಜಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.