Advertisement

ನಕಲಿ ಅಂಚೆ ಚೀಟಿಯ ಮತಯಾಚನೆ!

03:32 PM Jun 06, 2018 | Harsha Rao |

ಮಂಗಳೂರು: ಮತದಾರರಿಗೆ ಬೇರೆ ಬೇರೆ ರೀತಿಯ ಆಮಿಷಗಳನ್ನು ಒಡ್ಡಿ ಮತ ಪಡೆಯುವುದನ್ನು ನೋಡಿದ್ದೇವೆ. ವಿಧಾನ ಪರಿಷತ್‌ ನೈಋತ್ಯ ಶಿಕ್ಷಕ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಿಂತಿರುವ ಅಭ್ಯರ್ಥಿಯೊಬ್ಬರು ಅಂಚೆ ಇಲಾಖೆಯನ್ನೇ ಯಾಮಾರಿಸಿ ಮತದಾರರನ್ನು ತಲುಪಲು ಪ್ರಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ!

Advertisement

ಈ ಅಭ್ಯರ್ಥಿಯು ಮತದಾರರಿಗೆ ಕಳುಹಿಸಿದ ಮನವಿ ಪತ್ರಗಳಿಗೆ ನಕಲಿ ಅಂಚೆ ಚೀಟಿಗಳನ್ನು ಬಳಸಿದ್ದು, ಈ ಕುರಿತು ಮಂಗಳವಾರ ಬಲ್ಮಠದ ಅಂಚೆ ವಿಭಾಗೀಯ ಕಚೇರಿಗೆ ಬೆಂಗಳೂರಿನ ಪ್ರಾದೇಶಿಕ ಕಚೇರಿಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅವರ ಎಲ್ಲ ಮನವಿ ಪತ್ರಗಳನ್ನು ತಡೆಹಿಡಿಯಲಾಗಿದೆ. 

ಆಗಿರುವುದೇನು?
ವಿಧಾನ ಪರಿಷತ್‌ ನೈಋತ್ಯ ಶಿಕ್ಷಕ- ಪದವೀಧರ ಕ್ಷೇತ್ರಕ್ಕೆ ಜೂ. 8ರಂದು ಚುನಾವಣೆ ನಡೆಯಲಿದ್ದು, ಮತದಾರರನ್ನು ತಲುಪಲು ಹೆಚ್ಚಿನ ಅಭ್ಯರ್ಥಿಗಳು ಅಂಚೆ ಇಲಾಖೆಯನ್ನೇ ಆಶ್ರಯಿಸಿದ್ದಾರೆ. ನೈಋತ್ಯ ಶಿಕ್ಷಕ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಶಿವಮೊಗ್ಗ ಜಿಲ್ಲೆಯ ಡಿ.ಕೆ. ತುಳಸಪ್ಪ ಕೂಡ ಅಂಚೆ ಮೂಲಕ ಮನವಿ ಪತ್ರಗಳನ್ನು ಕಳುಹಿಸಿದ್ದು, ಅವುಗಳಿಗೆ ಝೆರಾಕ್ಸ್‌ ಮಾಡಲಾದ ನಕಲಿ ಅಂಚೆಚೀಟಿಗಳನ್ನು ಬಳಸಿದ್ದಾರೆ ಎಂದು ಅಂಚೆ ಇಲಾಖೆ ಆರೋಪಿಸಿದೆೆ. ಕಳೆದ ಕೆಲವು ದಿನಗಳಿಂದ ಇಂತಹ ಅಂಚೆ ಚೀಟಿ ಬಳಸಿರುವ ಮನವಿ ಪತ್ರಗಳು ಬರುತ್ತಿದ್ದು, ಇಲಾಖೆಯ ಗಮನಕ್ಕೆ ಬಾರದೆ ಮತದಾರರಿಗೆ ಬಟವಾಡೆಯಾಗಿವೆ ಎಂದು ಅಂಚೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆೆ. 

ಖರ್ಚು ಉಳಿಸಲು ವಾಮಮಾರ್ಗ?
ಒಂದು ಮನವಿ ಪತ್ರಕ್ಕೆ 10 ರೂ. ಮುಖಬೆಲೆಯ ಅಂಚೆ ಚೀಟಿ ಬಳಸ ಬೇಕಾಗುತ್ತದೆ. ಇದಕ್ಕಾಗಿ ಹಣ ಖರ್ಚು ಮಾಡುವ ಬದಲು ಅಭ್ಯರ್ಥಿಯು ಈ ವಾಮಮಾರ್ಗವನ್ನು ಹಿಡಿದಿದ್ದಾರೆ ಎನ್ನಲಾಗಿದೆ. ಇವರು ಅಸಲಿ ಅಂಚೆ ಚೀಟಿಯನ್ನೇ ಹೋಲುವ ನಕಲಿ ಅಂಚೆ ಚೀಟಿ ಮುದ್ರಿಸಿ  ಮನವಿ ಪತ್ರಕ್ಕೆ ಅಂಟಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರದಿಂದ ಈ ಪತ್ರಗಳು ಪೋಸ್ಟ್‌ ಆಗಿದ್ದು, ಮಂಗಳವಾರ ಪಾಂಡೇಶ್ವರ ಪ್ರಧಾನ ಅಂಚೆ ಕಚೇರಿಗೆ ಸುಮಾರು 130 ಇಂಥ ನಕಲಿ ಅಂಚೆಚೀಟಿ ಇರುವ ಪತ್ರಗಳು ಬಂದಿವೆ. ವಿಭಾಗೀಯ ಕಚೇರಿಯಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಅವನ್ನು ತಡೆಹಿಡಿಯಲಾಗಿದೆ. ಮುಂದೆ ಅವುಗಳನ್ನು ವಾಪಸ್‌ ಕಳುಹಿಸಿ ಕೊಟ್ಟು ಮುಂದಿನ ಕ್ರಮ ಕೈಗೊಳ್ಳ ಲಾಗು ವುದು. ಆದರೆ ಈ ಕುರಿತು ಅಭ್ಯರ್ಥಿಯ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ಇಲ್ಲ ಎಂದು ಅಂಚೆ ಇಲಾಖೆ ಅಧಿ ಕಾರಿ ಗಳು “ಉದಯವಾಣಿ’ಗೆ ತಿಳಿಸಿದ್ದಾರೆೆ. 

ನಿರ್ದಿಷ್ಟ  ಕಾರಣ ತಿಳಿದಿಲ್ಲ
ನಮಗೆ ಬೆಂಗಳೂರು ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಕಚೇರಿಯಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಈ ಅಂಚೆ ಪತ್ರಗಳನ್ನು ಬಟವಾಡೆ ಮಾಡದಂತೆ ಅಂಚೆ ಕಚೇರಿಗಳಿಗೆ ಸೂಚನೆ ನೀಡಿದ್ದೇವೆ. ನಿರ್ದಿಷ್ಟ ಕಾರಣ ತಿಳಿದಿಲ್ಲ. ಅಂಚೆ ಚೀಟಿ ಸರಿಯಿಲ್ಲ ಎಂಬ ಕಾರಣಕ್ಕೂ ಈ ರೀತಿಯ ಸೂಚನೆ ನೀಡಿರಬಹುದು.
– ಲಕ್ಷ್ಮೀನಾರಾಯಣ, ಸಹಾಯಕ ಅಂಚೆ ಅಧೀಕ್ಷಕರು, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next