Advertisement

ಮಂಗಳೂರು: “ದಂಡ’ವಸೂಲಿಗೆ ನಕಲಿ ಪೊಲೀಸರ “ಚಾಟಿಂಗ್‌’ಅಸ್ತ್ರ ! 

11:22 PM Oct 27, 2022 | Team Udayavani |

ಮಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ನಾನಾ ರೂಪದಲ್ಲಿ ವಂಚಿಸಿ ಹಣ ಗಳಿಸುತ್ತಿರುವ ಖದೀಮರು ಈಗ ಸೈಬರ್‌ ಪೊಲೀಸರ ಹೆಸರಿನಲ್ಲಿ ವಂಚನೆಗೆ ದಾಳ ಎಸೆದಿದ್ದಾರೆ.

Advertisement

ವಂಚಕರು ಈಗ ಪೊಲೀಸ್‌ ವೇಷದಲ್ಲಿ “ದಂಡ’ ವಸೂಲಿಗೆ ಮುಂದಾಗಿದ್ದಾರೆ. ನೇರವಾಗಿ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ ಬಲೆಗೆ ಕೆಡವುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ರೊಂದಿಗಿನ “ಚಾಟಿಂಗ್‌’ (ಸಂಭಾಷಣೆ) ವಿಚಾರ ಮುಂದಿಟ್ಟು ವಂಚಿಸಲಾಗುತ್ತಿದೆ. ಹೆಚ್ಚಾಗಿ ಯುವಜನರನ್ನೇ ಗುರಿ ಮಾಡಲಾಗುತ್ತಿದೆ.

ರಶೀದಿಯೂ ಸಿದ್ಧ:

ದಂಡದ ಮೊತ್ತ ಪಾವತಿಸುವವರಿಗೆ ಪೊಲೀಸ್‌ ಇಲಾಖೆಯದ್ದು ಎಂದು ಬಿಂಬಿಸುವ ನಕಲಿ ರಶೀದಿಯನ್ನು ಕೂಡ ನೀಡಲಾಗುತ್ತದೆ. ಈ ರೀತಿ ಸಂದೇಶ ಕಳುಹಿಸುವವರ ವಾಟ್ಸ್‌ಆ್ಯಪ್‌ ಅಥವಾ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಪೊಲೀಸ್‌ ಅಧಿಕಾರಿಗಳ ಪೊಟೋ ಇರುತ್ತದೆ. ಜತೆಗೆ ಸರಕಾರಿ ಅಧಿಕಾರಿ ಎಂದು ಉಲ್ಲೇಖೀಸಲಾಗುತ್ತದೆ ಎಂದು ಸೈಬರ್‌ ಭದ್ರತಾ ತಜ್ಞರು ಹಾಗೂ ಈ ರೀತಿಯ ಸಂದೇಶಗಳನ್ನು ಸ್ವೀಕರಿಸಿದವರು ತಿಳಿಸಿದ್ದಾರೆ.

ಪೋರ್ನ್’ ಹೆಸರಲ್ಲೂ ದೋಖಾ!:

Advertisement

ಇನ್ನು ಕೆಲವರಿಗೆ ಪೋರ್ನ್ ವೀಡಿಯೋ (ಅಶ್ಲೀಲ ದೃಶ್ಯಗಳು) ಹೆಸರಿನಲ್ಲಿ ಹೆದರಿಸಿ ಹಣ ಪಡೆಯಲಾಗುತ್ತಿದೆ. “ನೀವು ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ್ದೀರಿ. ನಿಮ್ಮ ವಾಟ್ಸ್‌ ಆ್ಯಪ್‌ನಲ್ಲಿ ಅಶ್ಲೀಲ ದೃಶ್ಯ ರವಾನೆಯಾಗಿದೆ’ ಎಂಬಿತ್ಯಾದಿ ಸಂದೇಶ ಕಳುಹಿಸಲಾಗುತ್ತದೆ. ಅಲ್ಲದೆ “ನಿಮ್ಮ ವಿರುದ್ಧ ಪ್ರಕರಣ ದಾಖಲಾಗುವುದನ್ನು ತಪ್ಪಿಸಬೇಕಾದರೆ ಹಣ ನೀಡಬೇಕು’ ಎಂದು ಹೆದರಿಸಲಾಗುತ್ತದೆ. ಇದು ಕೂಡ ಪೊಲೀಸರ ಹೆಸರಿನಲ್ಲಿ ನಡೆಯುವ ಮೋಸ.

ತುರ್ತು ಪಾವತಿಗೂ ಉಪಾಯ:

ಈ ರೀತಿಯಾಗಿ ಮೋಸದ ಜಾಲಕ್ಕೆ ಒಡ್ಡುವ ವಂಚಕರು ಹಣ ಪಾವತಿಗೆ ತುರ್ತು ಸ್ಥಿತಿ (ಸೆನ್ಸ್‌ ಆಫ್ ಅರ್ಜೆನ್ಸಿ) ಸೃಷ್ಟಿ ಮಾಡುತ್ತಾರೆ. “ನೀವು ಈಗಲೇ ದಂಡದ ಮೊತ್ತ ಅಥವಾ ಹಣ ಪಾವತಿಸಿದರೆ ಮೊತ್ತದಲ್ಲಿ ಕಡಿಮೆ ಮಾಡುತ್ತೇವೆ. ವಿಳಂಬವಾದರೆ ಹೆಚ್ಚು ನೀಡಬೇಕಾಗುತ್ತದೆ’ ಎಂದು ಹೇಳುತ್ತಾರೆ. ಹಾಗಾಗಿ ಕೆಲವು ಮಂದಿ ಕೂಡಲೇ ಪಾವತಿಸಲು ಮುಂದಾಗಿ ವಂಚನೆಗೊಳಗಾಗುತ್ತಾರೆ.

ಅಶ್ಲೀಲ ಚಿತ್ರದ ಭಯ:

ವಂಚಕರು ತಮಗೆ ಸಿಗುವ ಮೊಬೈಲ್‌ ನಂಬರ್‌ಗಳಿಗೆ ಇಂತಹ ಸಂದೇಶಗಳನ್ನು ಕಳುಹಿಸುತ್ತ ಹೋಗುತ್ತಾರೆ. ಕೆಲವು ಮಂದಿ ಅವರ ಬಲೆಗೆ ಬಿದ್ದರೂ ಉದ್ದೇಶ ಈಡೇರುತ್ತದೆ. ಕೆಲವರು ಹಲವು ವಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳಲ್ಲಿರುತ್ತಾರೆ. ಆಗ ಯಾವುದಾದರೊಂದು ಗ್ರೂಪ್‌ನಿಂದ ಅವರಿಗೆ ಗೊತ್ತಿಲ್ಲದಂತೆಯೇ ಅಶ್ಲೀಲ ಚಿತ್ರ, ವೀಡಿಯೋ ಅವರ ಮೊಬೈಲ್‌ ಸೇರಿರಬಹುದು. ಇಂತಹ ಸಂದರ್ಭದಲ್ಲಿ ಪೊಲೀಸರೆಂದು ಹೇಳಿ ಯಾರಾದರೂ ಕರೆ ಮಾಡಿ “ನಿಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳಿವೆ’ ಎಂದು ಹೆದರಿಸಿದರೆ ಆತಂಕ ಹೆಚ್ಚಾಗಿ ಮೋಸ ಹೋಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು.

ಡಾಟಾಬೇಸ್‌ ಸೇಲ್‌ :

ಮೊಬೈಲ್‌ ಬಳಕೆದಾರರ ನಂಬರ್‌ಗಳು ಕೆಲವು ಖದೀಮರಿಗೆ ಸುಲಭವಾಗಿ ಸಿಗುತ್ತದೆ. ಬಳಕೆದಾರರ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸಿ ಮಾರಾಟ ಮಾಡುವವರೂ ಇದ್ದಾರೆ. ವಿದ್ಯಾರ್ಥಿಗಳು, ಕಾರು ಮಾಲಕರು ಹೀಗೆ ವಿವಿಧ ವರ್ಗಗಳ ಗ್ರಾಹಕರ ಮೊಬೈಲ್‌ ಸಂಖ್ಯೆ (ಡಾಟಾ ಬೇಸ್‌) ಮಾರಾಟ ಮಾಡುವ ಸಂಸ್ಥೆಗಳು ಕೂಡ ಇವೆ.

ಅರೆಸ್ಟ್‌ಗೆ ಬರುತ್ತಿದ್ದೇವೆ… ! :

“ನಾವು ಸೈಬರ್‌ ಪೊಲೀಸರು. ನಿನ್ನೆ ರಾತ್ರಿ ನೀವು ಒಂದು ಹುಡುಗಿಯೊಂದಿಗೆ ವಾಟ್ಸ್‌ ಆ್ಯಪ್‌ನಲ್ಲಿ ಮಾತನಾಡಿದ್ದೀರಿ, ಅವಳೊಂದಿಗೆ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಚಾಟ್‌ ಮಾಡಿದ್ದೀರಿ. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಮೊಬೈಲ್‌ನಲ್ಲಿ ನಿಮ್ಮ ನಂಬರ್‌ ಇತ್ತು. ನಿಮ್ಮಂತಹ 8 ಮಂದಿಯನ್ನು ಬಂಧಿಸಲಾಗಿದೆ. ನಿಮ್ಮ ವಿರುದ್ಧ ಕೂಡ ಎಫ್ಐಆರ್‌ ದಾಖಲಿಸಲಾಗಿದ್ದು, ಕೂಡಲೇ ಬಂಧಿಸಲಾಗುವುದು. ಒಂದು ವೇಳೆ ಇದರಿಂದ ಬಚಾವ್‌ ಆಗಬೇಕಾದರೆ ದಂಡದ ಹಣ ನೀಡಬೇಕು’ ಎಂಬ ಸಂದೇಶ ಕಳುಹಿಸಲಾಗುತ್ತದೆ. ಅಲ್ಲದೆ ಕೂಡಲೇ ಕರೆ ಮಾಡುವಂತೆ ಒಂದು ಮೊಬೈಲ್‌ ಸಂಖ್ಯೆಯನ್ನು ಕೂಡ ಕಳುಹಿಸಲಾಗುತ್ತದೆ. ಕರೆ ಸ್ವೀಕರಿಸಿದರೆ ಇನ್ನಷ್ಟು ಹೆದರಿಸಲಾಗುತ್ತದೆ. ಆನ್‌ಲೈನ್‌ ಮೂಲಕ ಹಣ ಪಾವತಿಸಿಕೊಳ್ಳಲಾಗುತ್ತದೆ.

ಪೊಲೀಸರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿರುವುದು ಕಂಡುಬಂದಿದೆ. ಆದರೆ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ, ನೋಟಿಸ್‌ ಕಳುಹಿಸುವುದಿಲ್ಲ. ಆತಂಕಕ್ಕೊಳಗಾಗಿ ಹಣ ಪಾವತಿಸುವ ಅಗತ್ಯವಿಲ್ಲ. ಡಾ| ಅನಂತ ಜಿ. ಪ್ರಭು, ಸೈಬರ್‌ ಭದ್ರತಾ ತಜ್ಞ, ಮಂಗಳೂರು

ಈ ಹಿಂದೆ ಲೋನ್‌ ನೀಡಿ ಅನಂತರ ಮರುಪಾವತಿಸುವಂತೆ ಸತಾಯಿಸಿ ಸಾಲ ಗಾರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದ “ಲೋನ್‌ ಆ್ಯಪ್‌’ಗಳನ್ನು ಸರಕಾರ ನಿಷೇಧಿ

ಸಿದೆ. ಇದೇ ರೀತಿ ಅಶ್ಲೀಲ ಚಿತ್ರಗಳ ವಿಷಯ ಮುಂದಿಟ್ಟು ಬೇರೆ ಬೇರೆ ರೀತಿಯಲ್ಲಿ ವಂಚಿಸುವ ಸಾಧ್ಯತೆಗಳಿವೆ. ಆಮಿಷ, ಬೆದರಿಕೆ ಬಗ್ಗೆ ಪ್ರತಿಕ್ರಿಯಿಸದೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಸತೀಶ್‌, ಇನ್‌ಸ್ಪೆಕ್ಟರ್‌, ಸೆನ್‌ ಠಾಣೆ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next