Advertisement

ನಕಲಿ ನೋಟು ಮುದ್ರಣ ಜಾಲ ಬಲೆಗೆ

12:50 AM May 04, 2019 | Team Udayavani |

ಬೆಂಗಳೂರು: ಖೋಟಾ ನೋಟು ದಂಧೆಯಲ್ಲಿ ಕಳೆದುಕೊಂಡಿದ್ದ ಹಣ ಸಂಪಾದಿಸಲು “ಖೋಟಾ ನೋಟು’ ಪ್ರಿಂಟ್‌ ಮಾಡಿ, ಚಲಾವಣೆಗೆ ಯತ್ನಿಸಿದ ಬಿಎಂಟಿಸಿ ಚಾಲಕರಿಬ್ಬರು ಸೇರಿ ಮೂವರು ಜೈಲು ಸೇರಿದ್ದಾರೆ.

Advertisement

ಬಿಎಂಟಿಸಿ ಚಾಲಕ ಹಾಗೂ ಕಂಡಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೋಮನಗೌಡ (38), ಚಾಲಕ ನಂಜೇಗೌಡ (32) ಹಾಗೂ ಫೋಟೋಗ್ರಾಫ‌ರ್‌ ಕಿರಣ್‌ಕುಮಾರ್‌ ಬಂಧಿತ ಆರೋಪಿಗಳು.

ಖೋಟಾ ನೋಟು ಚಲಾವಣೆ ಯತ್ನ ಮಾಹಿತಿ ಮೇರೆಗೆ ಏ.26ರಂದು ಕಾರ್ಯಾಚರಣೆ ನಡೆಸಿರುವ ಯಲಹಂಕ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿ ಎರಡು ಸಾವಿರ ರೂ. ಮುಖಬೆಲೆಯ 81.30 ಲಕ್ಷ ರೂ. ಖೋಟಾ ನೋಟು ಜಪ್ತಿ ಮಾಡಿದ್ದರು.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ತನಿಖಾ ತಂಡ, ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ರಾಮಕೃಷ್ಣ ಬಂಧನಕ್ಕೆ ಬಲೆಬೀಸಿದೆ. ಖೋಟಾ ನೋಟು ದಂಧೆಯಲ್ಲಿ ತೊಡಗಿಸಿಕೊಂಡಿರುವ ಚಿತ್ರದುರ್ಗ ಮೂಲದ ರಾಮಕೃಷ್ಣ ಎಂಬಾತನಿಗೆ ಈ ಹಿಂದೆ ಒಂದು ಲಕ್ಷ ರೂ. ನೀಡಿದ್ದ ಸೋಮನಗೌಡ, ಆತನಿಂದ ಉಡುಗೊರೆ ಪಡೆದುಕೊಂಡಿದ್ದ.

ಇದಾದ ಬಳಿಕ ಕಳೆದ ವರ್ಷ 7 ಲಕ್ಷ ರೂ. ನೀಡಿದ್ದ. ಈ ವೇಳೆ ವಂಚಿಸಿದ ರಾಮಕೃಷ್ಣ, ಹಣವನ್ನೂ ವಾಪಸ್‌ ನೀಡಿರಲಿಲ್ಲ. ಅದರ ಬದಲಿಗೆ ಖೋಟಾ ನೋಟು ಮುದ್ರಿಸಲು ಸಲಹೆ ನೀಡಿದ್ದ. ಆತನ ಮಾತು ನಂಬಿದ ಸೋಮನಗೌಡ, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಸ್ನೇಹಿತರ ಜತೆಗೂಡಿ ಖೋಟಾನೋಟು ಮುದ್ರಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

Advertisement

ಬಾಡಿಗೆ ಕೊಠಡಿಯಲ್ಲಿ ಪ್ರಿಂಟ್‌!: ಖೋಟಾ ನೋಟು ಮುದ್ರಿಸುವ ಯೋಜನೆ ಕುರಿತು ನಂಜೇಗೌಡ ಹಾಗೂ ಕಿರಣ್‌ಕುಮಾರ್‌ಗೆ ತಿಳಿಸಿದ್ದ ಸೋಮನಗೌಡ, ಗಾರೆಬಾವಿ ಪಾಳ್ಯದಲ್ಲಿ ಕೊಠಡಿ ಬಾಡಿಗೆಗೆ ಪಡೆದು, ಅಲ್ಲೇ ನೋಟು ಮುದ್ರಣ ಆರಂಭಿಸಿದ್ದ. ಫೋಟೋಶಾಪ್‌, ಸ್ಕ್ಯಾನಿಂಗ್‌ ಕೌಶಲ್ಯ ಹೊಂದಿರುವ ಡಿಪ್ಲೊಮಾ ಪದವೀಧರ ಕಿರಣ್‌,

ಎರಡು ಸಾವಿರ ರೂ. ಅಸಲಿ ನೋಟು ಸ್ಕ್ಯಾನ್‌ ಮಾಡಿ, ಫೋಟೋಶಾಪ್‌ನಲ್ಲಿ ನೋಟಿನ ನಂಬರ್‌ಗಳನ್ನು ಬದಲಿಸಿ ಕಲರ್‌ ಪ್ರಿಂಟ್‌ ತೆಗೆಯುತ್ತಿದ್ದ. ಇದೇ ರೀತಿ ಆರೋಪಿಗಳು ಲಕ್ಷಾಂತರ ರೂ. ನಕಲಿ ನೋಟು ಮುದ್ರಿಸಿದ್ದರು. ಮಾರ್ಚ್‌ ತಿಂಗಳಲ್ಲಿ ನೋಟುಗಳ ಮುದ್ರಣ ಆಗಿರುವ ಆಗಿರುವ ಸಾಧ್ಯತೆಯಿದೆ ಎಂದು ಅಧಿಕಾರ ಮಾಹಿತಿ ನೀಡಿದರು.

ಕಿಂಗ್‌ಪಿನ್‌ ಬಂಧನಕ್ಕೆ ಶೋಧ: ಈ ಜಾಲ ಆಳವಾಗಿ ಬೇರು ಬಿಟ್ಟಿರುವ ಅಂಶ ಆರೋಪಿಗಳ ವಿಚಾರಣೆ ವೇಳೆ ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ರಾಮಕೃಷ್ಣನ ನಿಜ ಹೆಸರು ಬೇರೆಯೇ ಇದೆ. ಆತ ಬೇರೆ ಬೇರೆ ಹೆಸರುಗಳಲ್ಲಿ ಹಲವರಿಗೆ ವಂಚಿಸಿರುವ ಮಾಹಿತಿಯಿದೆ. ಆತನ ಬಂಧನಕ್ಕೆ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಆತ ಬಳಸುತ್ತಿದ್ದ ಮೊಬೈಲ್‌ ಸಂಖ್ಯೆಯೂ ಸ್ಥಗಿತಗೊಂಡಿದೆ. ಆತನ ಬಂಧನದ ಬಳಿಕ ಜಾಲದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next