Advertisement

ನಕಲಿ ಮೆಡಿಕಲ್‌ ಸರ್ಟಿಫಿಕೆಟ್‌: ರೈಲ್ವೇ ಅಧಿಕಾರಿ ಸಹಿತ ಮೂವರ ಬಂಧನ

01:22 AM Jun 12, 2022 | Team Udayavani |

ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದ ಬಳಿಯ ಆರೋಗ್ಯ ಘಟಕದಲ್ಲಿ ನಿಯಮ ಬಾಹಿರವಾಗಿ ನಕಲಿ ಮೆಡಿಕಲ್‌ ಸರ್ಟಿಫಿಕೆಟ್‌ ಒದಗಿಸುತ್ತಿರುವ ಆರೋಪದಲ್ಲಿ ರೈಲ್ವೇ ಅಧಿಕಾರಿ ಸಹಿತ ಮೂವರನ್ನು ಬೆಂಗಳೂರಿನ ಸಿಬಿಐ ಭ್ರಷ್ಟಾಚಾರ ತಡೆ ದಳದವರು ಬಂಧಿಸಿದ್ದಾರೆ.

Advertisement

ಬಂಧಿತರಲ್ಲಿ ಅಸಿಸ್ಟೆಂಟ್‌ ಚೀಫ್‌ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಕೂಡ ಸೇರಿರುವುದಾಗಿ ತಿಳಿದುಬಂದಿದೆ. ಸಾಮಾನ್ಯವಾಗಿ ರೈಲ್ವೇಯಂತಹ ಇಲಾಖೆಗಳ ವಿಚಾರದಲ್ಲಿ ಸಿಬಿಐ ತನಿಖೆ ನಡೆಸುವುದು ಕಡಿಮೆ, ರೈಲ್ವೇ ವಿಚಕ್ಷಣ ದಳದವರೇ ತನಿಖೆ ನಡೆಸುತ್ತಾರೆ, ಆದರೆ ಇಲ್ಲಿ ಯಾವುದೋ ಗಂಭೀರ ದೂರಿನ ಹಿನ್ನೆಲೆಯಲ್ಲಿ ಸಿಬಿಐ ತಂಡ ಆಗಮಿಸಿರಬಹುದು ಎಂದು ಮೂಲಗಳು ತಿಳಿಸಿವೆ.

ಕಳೆದೊಂದು ವರ್ಷದಿಂದಲೇ ಈ ನಕಲಿ ಸರ್ಟಿಫಿಕೆಟ್‌ ನೀಡುವ ಜಾಲ ಕಾರ್ಯವೆಸಗುತ್ತಿತ್ತು. ದಕ್ಷಿಣ ರೈಲ್ವೇ, ನೈಋತ್ಯ ರೈಲ್ವೇಗೆ ಸೇರಿದ ಸಿಬಂದಿಗಳಿಗೆ 1,500ಕ್ಕೂ ಅಧಿಕ ನಕಲಿ ಮೆಡಿಕಲ್‌ ಸರ್ಟಿಫಿಕೆಟ್‌ ನೀಡಿದ್ದಾಗಿ ತಿಳಿದುಬಂದಿದೆ.

ಶುಕ್ರವಾರ ಬೆಂಗಳೂರಿನಿಂದ ಆಗಮಿಸಿದ ಸಿಬಿಐ ಅಧಿಕಾರಿಗಳ ತಂಡ ರಾತ್ರಿಯವರೆಗೂ ಆರೋಗ್ಯ ಘಟಕದಲ್ಲಿ ಕಾರ್ಯಾಚರಣೆ, ತಪಾಸಣೆ ನಡೆಸಿದ್ದಲ್ಲದೆ ಸಂಬಂಧಿತ ದಾಖಲೆಗಳನ್ನು ಕಲೆಹಾಕಿದೆ.

ರೈಲ್ವೇಯೊಂದಿಗೆ ಕೆಲಸ ಮಾಡುವ ನೂರಾರು ಪರವಾನಿಗೆಯುಳ್ಳ ವರ್ತಕರು, ಪೋರ್ಟರುಗಳು, ಹೌಸ್‌ಕೀಪಿಂಗ್‌ ಸಿಬಂದಿ, ಕೇಟರರ್‌ಗಳು ಕಡ್ಡಾಯವಾಗಿ ಮೆಡಿಕಲ್‌ ಫಿಟ್‌ನೆಸ್‌ ಸರ್ಟಿಫಿಕೆಟನ್ನು ವರ್ಷಕ್ಕೊಮ್ಮೆ ರೈಲ್ವೇಗೆ ನೀಡಬೇಕಾಗುತ್ತದೆ. ಅದಿದ್ದರೆ ಮಾತ್ರವೇ ಅವರಿಗೆ ರೈಲ್ವೇ ನಿಲ್ದಾಣ ಮತ್ತು ರೈಲುಗಳಲ್ಲಿ ಕೆಲಸಕ್ಕೆ ಬಿಡಲಾಗುತ್ತದೆ. ದಲ್ಲಾಳಿಗಳ ನೆರವಿನೊಂದಿಗೆ ಆರೋಗ್ಯ ಘಟಕದಲ್ಲಿರುವ ಅಧಿಕಾರಿಗಳು ಯಾರದ್ದೇ ಆದರೂ ಆಧಾರ್‌ ಕಾರ್ಡ್‌ ನೀಡಿದರೆ ಅವರಿಗೆ ವಾಟ್ಸ್‌ ಆ್ಯಪ್‌ ಮೂಲಕ ಸರ್ಟಿಫಿಕೆಟ್‌ ಒದಗಿಸುತ್ತಿದ್ದರು. ಇದಕ್ಕೆ ಅವರು 525 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕಿತ್ತು.

Advertisement

ಯಾವುದೇ ರೀತಿ ಆರೋಗ್ಯ ತಪಾಸಣೆ ನಡೆಸದೆ ಯಾರಿಗಾದರೂ ಸರ್ಟಿಫಿಕೆಟ್‌ ನೀಡುವುದು ನಿಯಮಕ್ಕೆ ವಿರುದ್ಧ. ಈ ಅಕ್ರಮ ಕಾರ್ಯವನ್ನು ಯಾರೋ ಸಿಬಿಐವರೆಗೂ ತಲಪಿಸಿದ್ದರಿಂದ ಅದರ ಭ್ರಷ್ಟಾಚಾರ ತಡೆ ಘಟಕವೇ ರಂಗಕ್ಕಿಳಿದು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next