Advertisement

5 ಲಕ್ಷಕ್ಕಾಗಿ ಯುವಕನಿಂದಲೇ ಅಪಹರಣ ಹೈಡ್ರಾಮ: ಹೋಂ ವರ್ಕ್ ಇಷ್ಟವಿಲ್ಲದೆ ಸಿನಿಮಾ ಕಥೆ ಕಟ್ಟಿದ

12:09 PM Nov 09, 2020 | keerthan |

ಕನಕಪುರ: ಹಣಕ್ಕಾಗಿ ಅಪಹರಣಗೊಂಡಂತೆ ಯುವಕನೋರ್ವ ನಡೆಸಿದ ಹೈಡ್ರಾಮಾ ಬಯಲಾಗಿದ್ದು, ಪ್ರಕರಣ ಭೇದಿಸಿದ ಪೊಲೀಸರು ಯುವಕನನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಹಣಕ್ಕಾಗಿ ಅಪಹರಣಗೊಂಡವನಂತೆ ನಾಟಕವಾಡಿ, ಪೊಲೀಸರಿಗೆ ಸಿಕ್ಕಿ ಬಿದ್ದಿ ಯುವಕ ಸರ್ವೇಶ್‌.

Advertisement

ಈತ ಬಟ್ಟೆ ವ್ಯಾಪಾರಿ ಮನೋಹರ್‌ ಅವರ ಪುತ್ರ. ನಗರದ ಬೂದಿಕೆರಿಯ ಬಟ್ಟೆ ಅಂಗಡಿ ಮಾಲಿಕ ತಮಿಳುನಾಡು ಮೂಲದ ಮನೋಹರ್‌ ಸಾರ್ವಜನಿಕ ಆಸ್ಪತ್ರೆ ಹಿಂಭಾಗದ ರಸ್ತೆಯಲ್ಲಿ ವಾಸವಾಗಿದ್ದಾರೆ. ಇವರ ಮಗ ಸರ್ವೇಶ್‌ ಹಣಕ್ಕಾಗಿ, ತನ್ನನ್ನು ಯಾರೋ ಅಪಹರಣ ಮಾಡಿದ್ದಾರೆಂದು ತಮ್ಮ ಪಕ್ಕದ ಮನೆಗೆ ಅರೆಬೆತ್ತಲೆ ಫೋಟೋ ರವಾನಿಸಿ 5 ಲಕ್ಷ ರೂ. ಹಣ ಕೊಟ್ಟರೆ ಮಾತ್ರ ಬಿಡುಗಡೆ ಮಾಡುವುದಾಗಿ ವಾಟ್ಸ್‌ ಆ್ಯಪ್‌ನಲ್ಲಿ ತಿಳಿಸಿದ್ದನು. ಈ ಸಂದೇಶ ಸರ್ವೇಶ್‌ ಪೋಷಕರನ್ನು ಕಂಗಾಲಾಗಿಸಿತ್ತು.

ಕಳೆದ ಶುಕ್ರವಾರ ಸಂಜೆ 6ರ ಸಮಯದಲ್ಲಿ ಸೈಬರ್‌ ಸೆಂಟರ್‌ಗೆ ಹೋಗಿ ಬರುವುದಾಗಿ ಪೋಷಕರ ಬಳಿ ಹೇಳಿ ಬೈಕ್‌ನಲ್ಲಿ ಹೋದ ಯುವಕ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಪೋಷಕರು ಆತಂಕಗೊಂಡು ಶನಿವಾರ ಠಾಣೆಯಲ್ಲಿ ಅಪಹರಣದ ಪ್ರಕರಣ ದಾಖಲು ಮಾಡಿದ್ದರು.

ಇದನ್ನೂ ಓದಿ:“ಮಹಾ ರಾಜಕೀಯ” ಜಾರಕಿಹೊಳಿ ಸುಳಿ!

ಎಎಸ್‌ಪಿ ರಾಮರಾಜನ್‌, ನಗರ ಠಾಣೆ ಎಸ್‌ಐ ಲಕ್ಷ್ಮಣ್‌ ಗೌಡ, ಗ್ರಾಮಾಂತರ ಠಾಣೆ ಎಸ್‌ಐ ಅನಂತ್‌ ರಾಮ್‌ ಪ್ರಕರಣ ಭೇದಿಸಲು ಕಾರ್ಯಾಚರಣೆಗಿಳಿದಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ತಾನು ಅಪಹರಣವಾಗಿದ್ದೇನೆ ಎಂದು ಇದೇ ರೀತಿ ಹಣಕ್ಕಾಗಿ ಯುವಕ ನಾಟಕವಾಡಿದ್ದ ಬಗ್ಗೆ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Advertisement

ಅಪಹರಣವೇ ನಡೆದಿಲ್ಲ: ಅಸಲಿಗೆ ಯುವಕನನ್ನು ಯಾರೂ ಅಪಹರಣ ಮಾಡಿರಲಿಲ್ಲ. ಯುವಕನಿಗ ಓದಿನಲ್ಲಿ ಆಸಕ್ತಿ ಮತ್ತು ಶಾಲೆಗಳಲ್ಲಿಕೊಡುವ ಹೋಂ ವರ್ಕ್‌ ಮಾಡಲು ಇಷ್ಟವಿರಲಿಲ್ಲ. ಜತೆಗೆ ಪೋಷಕರಿಂದ ಹಣ ಕೀಳಲು ಯುವಕನೇ ಸೃಷ್ಟಿಸಿರುವ ಡ್ರಾಮಾ ಎಂಬ ಅನುಮಾನ ಪೊಲೀಸರಿಗೆ ಕಾಡಿತ್ತು.

ವಾಟ್ಸ್‌ ಆ್ಯಪ್‌ನಲ್ಲಿ ಬಂದ ಫೋಟೋದಲ್ಲಿ ಯುವಕ ಅಪಹರಣವಾಗಿದ್ದೇನೆ ಎಂಬ ಆತಂಕವಾಗಲಿ, ಭಯದ ಲಕ್ಷಣಗಳಾಗಲಿ ಇರಲಿಲ್ಲ. ಆತನ ಮೊಬೈಲ್‌ ಲೊಕೇಷನ್‌ ಜಾಡು ಹಿಡಿದ ಪೊಲೀಸರಿಗೆ ಆತ ತಿರುಪತಿಯಲ್ಲಿರುವ ಸುಳಿವು ಸಿಕ್ಕಿತ್ತು.

ಕಾರ್ಯಾಚರಣೆ: ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ತಿರುಪತಿ ಕಡೆಗೆ ಪ್ರಯಾಣ ಬೆಳೆಸಿ ಯುವಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಹಣಕ್ಕಾಗಿ ಹೀಗೆಮಾಡಿರುವುದಾಗಿ ಯುವಕ ಒಪ್ಪಿಕೊಂಡಿದ್ದಾನೆ. ಯುವಕನನ್ನು ಪೋಷಕರ ವಶಕ್ಕೆ ಒಪ್ಪಿಸಿರುವ ಪೊಲೀಸರು ಸೋಮವಾರ ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.

ತಿರುಪತಿಗೆ ಹೋಗಿ ರೂಂ ಬಾಡಿಗೆ ಪಡೆದಿದ್ದ

ಸೈಬರ್‌ಗೆ ಹೋಗಿ ಬರುವುದಾಗಿ ಬೈಕ್‌ನಲ್ಲಿ ಹೊರಟು ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಬೈಕ್‌ ಬಿಟ್ಟು ರೈಲಿನಲ್ಲಿ ತಿರುಪತಿಗೆ ಪ್ರಯಾಣ ಮಾಡಿದ್ದನು. ಅಲ್ಲಿ ಒಂದು ರೂಂ ಬಾಡಿಗೆ ಪಡೆದು ರೂಮಿನ ಶೌಚಾಲಯದಲ್ಲಿ ತನ್ನ ಮೈ ಮೇಲಿನ ವಸ್ತ್ರ ಬಿಚ್ಚಿ ತನ್ನ ಕಾಲುಗಳನ್ನು ತಾನೇ ಕಟ್ಟಿ ಹಾಕಿಕೊಂಡು ತನ್ನ ಎರಡು ಕೈಗಳನ್ನು ಅಪಹರಣಕಾರರು ಕಟ್ಟಿ ಹಾಕಿದ್ದಾರೆ ಎಂಬಂತೆ ಬಿಂಬಿಸಿ ತನ್ನ ಮೊಬೈಲ್ ‌ಕ್ಯಾಮೆರಾದಲ್ಲಿ ಸ್ವಯಂ ಚಾಲಿತ ಕ್ಯಾಮರಾ ಟೈಮರ್‌ ನಿಂದ ಫೋಟೋ ಕ್ಲಿಕ್ಕಿಸಿ ಅದನ್ನು ತಮ್ಮ ಮನೆ ಪಕ್ಕದ ಮನೆ ಮಾಲಿಕರಿಗೆ ವ್ಯಾಟ್ಸ್‌ ಆ್ಯಪ್‌ ಮೂಲಕ ಫೋಟೋ ರವಾನಿಸಿ 5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದನು. ಹಣ ಕೊಟ್ಟರೆ ಮಾತ್ರ ಯುವಕನನ್ನು ಬಿಡುಗಡೆ ಮಾಡುವುದಾಗಿ ಶನಿವಾರ ಬೆಳಗ್ಗೆ ತಾನೇ ಸಂದೇಶ ರವಾನಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next