ಬೆಂಗಳೂರು: ಕಡಿಮೆ ಗುಣಮಟ್ಟದ ಚಿನ್ನಾಭರಣಗಳ ಮೇಲೆ ನಕಲಿ ಹಾಲ್ಮಾರ್ಕ್ ‘916’ ಮುದ್ರೆ ಹಾಕಿಕೊಡುತ್ತಿದ್ದ ವ್ಯಕ್ತಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಸುದರ್ಶನ್ ಜೈನ್ ( 28) ಬಂಧಿತ. ಆರೋಪಿಯಿಂದ ನಕಲಿ ಹಾಲ್ಮಾರ್ಕ್ ಚಿಹ್ನೆ ಮುದ್ರಿಸಲು ಇಟ್ಟುಕೊಂಡಿದ್ದ 60 ಗ್ರಾಂ ತೂಕದ ಚಿನ್ನದ ತಾಳಿ ಬೊಟ್ಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿ, ನಗರ್ತ ಪೇಟೆಯಲ್ಲಿ ಆರ್.ಟಿ.ಎನ್. ಟೆಸ್ಟಿಂಗ್ ಮತ್ತು ಹಾಲ್ಮಾರ್ಕಿಂಗ್ ಸೆಂಟರ್ ನಡೆಸುತ್ತಿದ್ದು, ಕಡಿಮೆ ಗುಣಮಟ್ಟದ ಚಿನ್ನದ ಆಭರಣಗಳಿಗೆ ಅನಧಿಕೃತವಾಗಿ ಹಾಲ್ಮಾರ್ಕ್ ‘916’ ಮುದ್ರಿಸಿಕೊಡುತ್ತಿದ್ದ.
ಈ ಕುರಿತು ಖಚಿತ ಮಾಹಿತಿ ಆಧರಿಸಿ ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದ ತಂಡ ಮಳಿಗೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಅನಧಿಕೃತವಾಗಿ ಹಾಲ್ ಮಾರ್ಕ್ ಚಿಹ್ನೆ ಮುದ್ರಿಸಿರುವುದು ಕಂಡು ಬಂದಿದೆ. ಕೂಡಲೇ ಆರೋಪಿ ಸುದರ್ಶನ್‌ನನ್ನು ಬಂಧಿಸಿ ಚಿನ್ನಾಭರಣ ಹಾಗೂ ನಕಲಿ ಮುದ್ರೆಯ ಲೋಗೋ ಜಪ್ತಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಾಲ್ಮಾರ್ಕ್ 916 ಚಿಹ್ನೆ ಮುದ್ರಿಸಲು 48 ಅಂಗಡಿಗಳು ಮಾತ್ರ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್‌ನಿಂದ ಪರವಾನಗಿ ಪಡೆದಿವೆ. ಆದರೆ, ಸುದರ್ಶನ್ ಪರವಾನಗಿ ಪಡೆಯದೇ ಕಡಿಮೆ ಗುಣಮಟ್ಟದ ಚಿನ್ನಾಭರಣಗಳಿಗೆ ಚಿಹ್ನೆ ಮುದ್ರಿಸಿಕೊಡುತ್ತಿದ್ದ. ಇದರಿಂದ ಚಿನ್ನ ಖರೀದಿಸಿದ ಗ್ರಾಹಕರಿಗೆ ವಂಚನೆಯಾಗುತ್ತಿತ್ತು.
ಆರೋಪಿ ಸುದರ್ಶನ್ ಆರು ತಿಂಗಳಿನಿಂದ ವಂಚನೆ ನಡೆಸುತ್ತಿರುವ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆತನಿಂದ ಮುದ್ರೆ ಹಾಕಿಸಿಕೊಳ್ಳುತ್ತಿದ್ದ ಚಿನ್ನದ ವ್ಯಾಪಾರಿಗಳು ಯಾರು ಎಂದು ಮಾಹಿತಿ ನೀಡುತ್ತಿಲ್ಲ. ಅವರ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.