ಬೆಂಗಳೂರು: ನಕಲಿ ಚಿನ್ನದ ಗಟ್ಟಿಯನ್ನು ಅಸಲಿ ಎಂದು ನಂಬಿಸಿ ವಂಚಿಸಿದ್ದ ಆರೋಪಿಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಕೆಂಗೇರಿ ನಿವಾಸಿ ಗುಂಜಿ ಶಿವಶಂಕರ್ ರಾವ್ ಅಲಿಯಾಸ್ ಗೋಲ್ಡ್ ಶಿವ (39) ಬಂಧಿತ. ಈತನಿಂದ 8 ಲಕ್ಷ ರೂ. ನಗದು, ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ದೂರುದಾರ ನಿಕಿತ್ ಮೂಲ್ಯ ಗಿರಿನಗರದ ಟಿ ಬ್ಲಾಕ್ 50 ಅಡಿ ರಸ್ತೆ, 20ನೇ ಮುಖ್ಯರಸ್ತೆಯಲ್ಲಿ ನ್ಯೂ ಮಂಗಳೂರು ಸ್ಟೋರ್ ಅಂಗಡಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಇವರ ಅಂಗಡಿಗೆ ಬಂದಿದ್ದ ಆರೋಪಿಯು ಕೆಲ ವಸ್ತುಗಳನ್ನು ಖರೀದಿಸಿ ಪರಿಚಯ ಮಾಡಿಕೊಂಡಿದ್ದ. ಫೆ.5ರಂದು ಚಿನ್ನದ ಗಟ್ಟಿಯೊಂದಿಗೆ ಬಂದಿದ್ದ ಆರೋಪಿಯು ಅದರ ಸ್ವಲ್ಪ ಭಾಗ ಕತ್ತರಿಸಿ ಸ್ಯಾಂಪಲ್ ಪರಿಶೀಲಿಸುವಂತೆ ಸೂಚಿಸಿದ್ದ. ಆತ ಕೊಟ್ಟಿದ್ದ ಚಿನ್ನದ ಗಟ್ಟಿಯನ್ನು ನಿಕಿತ್ ಅಕ್ಕಸಾಲಿಗರ ಬಳಿ ಪರಿಶೀಲಿಸಿದಾಗ ಚಿನ್ನವೆಂಬುದು ತಿಳಿದು ಬಂದಿತ್ತು.
ಫೆ.17ರಂದು ಮತ್ತೆ ಇವರ ಅಂಗಡಿ ಬಳಿ ಬಂದ ಆರೋಪಿ ಶಿವಶಂಕರ್, 440 ಗ್ರಾಂ ತೂಕದ ಚಿನ್ನದ ಗಟ್ಟಿ ತೋರಿಸಿ 13 ಲಕ್ಷ ರೂ. ಗಳಿಗೆ ಮಾರಾಟ ಮಾಡುವುದಾಗಿ ನಿಕಿತ್‌ಗೆ ಹೇಳಿದ್ದ. ನಿಕಿಲ್ ಈ ಚಿನ್ನ ಖರೀದಿಸಲು ಒಪ್ಪಿಕೊಂಡು ಹಣ ನೀಡಲು ಸ್ವಲ್ಪ ಸಮಯವಕಾಶ ಕೇಳಿದ್ದ. ಫೆ.21ರಂದು ಅಂಗಡಿಗೆ ಬಂದ ಶಿವಶಂಕರ್‌ಗೆ 13 ಲಕ್ಷ ರೂ. ಕೊಟ್ಟು, ಆತನಿಂದ ಚಿನ್ನದ ಗಟ್ಟಿ ಪಡೆದುಕೊಂಡಿದ್ದ. ಆತ ಕೊಟ್ಟ ಚಿನ್ನದ ಗಟ್ಟಿಯನ್ನು ನಿಕಿತ್ ಅಕ್ಕಸಾಲಿಗರ ಬಳಿ ಪರಿಶೀಲಿಸಿದಾಗ ನಕಲಿ ಚಿನ್ನ ಎಂಬದು ಗೊತ್ತಾಗಿದೆ.
ಕೂಡಲೇ ಗಿರಿನಗರ ಠಾಣೆ ಪೊಲೀಸರಿಗೆ ನಿಕಿತ್ ದೂರು ನೀಡಿದ್ದರು. ಗಿರಿನಗರ ಇನ್‌ಸ್ಪೆಕ್ಟರ್ ಸಂದೀಪ್ ಕುಮಾರ್, ಪಿಎಸ್‌ಐ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಭೂಮಿಯೊಳಗೆ ಚಿನ್ನದ ಗಟ್ಟಿ ಸಿಕ್ಕಿತು ಎಂದು ನಂಬಿಸುತ್ತಿದ್ದ: ಆರೋಪಿಯು ಮೊದಲು ಚಿನ್ನ ದಂತೆ ಕಾಣುವ ತಾಮ್ರದ ಗಟ್ಟಿ ಮಾಡಿಸಿಕೊಂಡು ಬೆಂಗಳೂರಿಗೆ ಬಂದು ಕೆಲ ಅಂಗಡಿಗಳಿಗೆ ಭೇಟಿ ಕೊಡುತ್ತಿದ್ದ. ಅಂಗಡಿ ಮಾಲೀಕರ ಪರಿಚಯ ಮಾಡಿಕೊಂಡು ವಿಶ್ವಾಸಗಳಿಸಿಕೊಳ್ಳುತ್ತಿದ್ದ. ಇದಾದ ನಂತರ ಮತ್ತೂಮ್ಮೆ ಅಂಗಡಿಗೆ ಭೇಟಿ ಕೊಟ್ಟು ತನಗೆ ಭೂಮಿ ಅಗೆಯುವಾಗ ಚಿನ್ನದ ಗಟ್ಟಿ ಸಿಕ್ಕಿದೆ ಎಂದು ಮಾಲೀಕರನ್ನು ನಂಬಿಸುತ್ತಿದ್ದ. ಮೊದಲು ಪರಿಶೀಲಿಸಲೆಂದು ಅಸಲಿ ಚಿನ್ನದ ಗಟ್ಟಿ ಕೊಡುತ್ತಿದ್ದ. ಆರೋಪಿಯಿಂದ ಚಿನ್ನ ಖರೀದಿಸಲು ಒಪ್ಪಿದರೆ ತಾಮ್ರದ ಗಟ್ಟಿಯಿಂದ ತಯಾರಿಸಿದ ನಕಲಿ ಚಿನ್ನದ ಗಟ್ಟಿ ಕೊಟ್ಟು ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಸಂಗತಿ ತನಿಖೆಯಲ್ಲಿ ತಿಳಿದು ಬಂದಿದೆ.