Advertisement

ಅನ್ನದಾತರಿಗೆ ಕಂಟಕವಾಗಿರುವ ನಕಲಿ ಗೊಬ್ಬರ ಔಷಧಿ ದಂಧೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ

11:53 AM Jul 19, 2022 | Team Udayavani |

ಗಂಗಾವತಿ: ತುಂಗಭದ್ರಾ ಅಚ್ಚು ಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಭತ್ತವನ್ನು ಬೆಳೆಯಲಾಗುತ್ತದೆ. ಸತತ ಭತ್ತದ ಬೆಳೆ ಬೆಳೆಯುವುದರಿಂದ ಭೂಮಿ ಬರಡಾಗಿದೆ. ಕೃತಕ ಗೊಬ್ಬರ ಹಾಕುವ ಮೂಲಕ ರೈತರು ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಈ ಮಧ್ಯೆ ನಕಲಿ ಗೊಬ್ಬರ ಔಷಧಿ ಸೇರಿದಂತೆ ಕೃಷಿ ಆಧಾರಿತ ಪರಿಕರಗಳ ಮಾರಾಟದಿಂದ ಅನ್ನದಾತರ ಬದುಕು ಮೂರಾಬಟ್ಟೆಯಾಗಿದೆ. ಎಕರೆಗೆ 40-50 ಕ್ವಿಂಟಾಲ್ ಭತ್ತವನ್ನು ಬೆಳೆಯುವ ರೈತರು ಪ್ರತಿ ವರ್ಷ ಆದಾಯಕ್ಕಿಂತ ಸಾಲಗಾರರಾಗುತ್ತಿದ್ದಾರೆ.

Advertisement

ಕಳೆದ 20 ವರ್ಷಗಳಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರಾಯಚೂರು ಕೊಪ್ಪಳ ಬಳ್ಳಾರಿ ಹೊಸಪೇಟೆ ತಾಲ್ಲೂಕುಗಳಲ್ಲಿ ವ್ಯಾಪಕವಾದಂತಹ ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟವಾಗುತ್ತಿದ್ದು, ಹಣದ ಆಸೆಗೆ ಕೆಲ ವ್ಯಾಪಾರಿಗಳು ನಕಲಿ ಗೊಬ್ಬರ ಕ್ರಿಮಿನಾಶಕ ಮಾರಾಟ ಮಾಡುವ ಮೂಲಕ ಹಣ ವಂಚಿತರಾಗುತ್ತಿದ್ದು, ಇದರಿಂದ ಅನ್ನದಾತನಿಗೆ ಸಾಲದ ಹೊರೆ ಹೆಚ್ಚಾಗುತ್ತಿದೆ.

ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಸಂದರ್ಭದಲ್ಲಿ ರೈತರಿಗೆ ರಾಸಾಯನಿಕ ಗೊಬ್ಬರ ಕ್ರಿಮಿನಾಶಕ ಅವಶ್ಯಕವಾಗಿದ್ದು, ಇದನ್ನು ಸಾಲ ಸೋಲ ಮಾಡಿ ಖರೀದಿ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ನಕಲಿ ಗೊಬ್ಬರ ಮತ್ತು ಕ್ರಿಮಿನಾಶಕಗಳ ಅಧಿಕ ಮಾರಾಟವಾಗುತ್ತವೆ. ಕೃಷಿ ಇಲಾಖೆ ಕೃಷಿ ಜಾಗೃತ ದಳದವರು ದಾಳಿ ಮಾಡಿ ಪ್ರಕರಣವನ್ನು ದಾಖಲು ಮಾಡಿದರಾದರೂ ತಾರ್ಕಿಕ ಹಂತ ತಲುಪಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಅಕ್ರಮ ದಂಧೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮುಂದೆ ಅಕ್ರಮ ದಂಧೆ ಮಾಡದಂತೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬರುತ್ತಿದೆ.

ಕಳೆದ ವರ್ಷ ಗಂಗಾವತಿ, ಸಿಂಧನೂರು, ಕಾರಟಗಿ, ದೇವದುರ್ಗ, ಮಸ್ಕಿ ಮಾನ್ವಿ, ಬಳಗಾನೂರು  ಅನೇಕ ಕಡೆಗಳಲ್ಲಿ ನಕಲಿ ರಸಗೊಬ್ಬರ ಮಾರಾಟ ದಂಧೆ ಪತ್ತೆ ಮಾಡಿದ ಇಲಾಖೆಯವರು ನಕಲಿ ದಂಧೆಯ  ಮೂಲವನ್ನು ಗಂಗಾವತಿಯಲ್ಲಿ ಕಂಡುಹಿಡಿದರು .ಆದರೆ ಕೆಲ ಪ್ರಭಾವಿಗಳ ಮಧ್ಯ ಪ್ರವೇಶದಿಂದ ನಕಲಿ ದಂಧೆ ಮಾಡುವವರು ಬೆಳೆಯುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ.

ಕಳೆದ ತಿಂಗಳು ಶಹಾಪುರ, ಬಿಜಾಪುರ, ಬಾಗಲಕೋಟೆ, ಸಿಂದಗಿ ಪ್ರದೇಶದಲ್ಲಿ ನಕಲಿ ರಸಗೊಬ್ಬರ ಮಾರಾಟ ಪ್ರಕರಣಗಳು ದಾಖಲಾಗಿದ್ದರೂ, ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಕೃಷಿ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಯವರು ವಿಫಲವಾಗಿತ್ತು. ಪೊಲೀಸರ ತನಿಖೆಗೆ ಕೆಲವರು ಅಡ್ಡಿಪಡಿಸುವ ಮೂಲಕ ಪ್ರಕರಣವನ್ನು ಬೇರೆಡೆ ತಿರುಗಿಸುತ್ತಾರೆ ಎಂಬ ಆರೋಪ ವ್ಯಾಪಕವಾಗಿದೆ.

Advertisement

ಅಕ್ರಮ ದಂಧೆ ನಡೆಸುವವರಿಗೆ ಪಕ್ಷಾತೀತವಾಗಿ ಮುಖಂಡರು ಬೆಂಬಲ ನೀಡುವ ಮೂಲಕ ಅಕ್ರಮ ದಂಧೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿ ರೈತ ಮುಖಂಡರು ವ್ಯಕ್ತಪಡಿಸಿದ್ದಾರೆ.

ನಕಲಿ ದಂಧೆಕೋರರ ವಿರುದ್ಧ ಕ್ರಮವಾಗಲಿ: ಅನ್ನದಾತರ ಹೊಟ್ಟೆಯನ್ನು ಒಡೆಯುವ ನಕಲಿ ಗೊಬ್ಬರ ಕ್ರಿಮಿನಾಶಕ ಮಾರಾಟ ಮಾಡಲು ಕೃಷಿ ಇಲಾಖೆ ಪೋಲಿಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮಟ್ಟ ಹಾಕಬೇಕಿದೆ. ರಾಜಕೀಯ ಅದರ ಪ್ರಭಾವದ ಹಿನ್ನೆಲೆಯಲ್ಲಿ ನಕಲಿ ಗೊಬ್ಬರ ಕ್ರಿಮಿನಾಶಕ ದಂಧೆಕೋರರು ಬೆಳೆಯುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ ಆದ್ದರಿಂದ ಸರಕಾರ ರಾಜ್ಯ ಮಟ್ಟದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡುವ ಮೂಲಕ ಇಡೀ ರಾಜ್ಯದಲ್ಲಿ ನಕಲಿ ಗೊಬ್ಬರ ಕ್ರಿಮಿನಾಶಕ ಬೀಜ ಮಾರಾಟ ಮಾಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಐಟಿಯು ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ನಿರುಪಾದಿ ಬೆಣಕಲ್ ಆಗ್ರಹಿಸಿದ್ದಾರೆ.

ಅಕ್ರಮ ತಡೆಗೆ ಕ್ರಮ: ನಕಲಿ ರಸಗೊಬ್ಬರ ಕ್ರಿಮಿನಾಶಕ ಮಾರಾಟ ಮಾಡುವ ಮಾಹಿತಿ ಬಂದ ತಕ್ಷಣ ಕೃಷಿ ಇಲಾಖೆ ಮತ್ತು ಕೃಷಿ ಜಾಗೃತ ದಳದ ಅಧಿಕಾರಿಗಳ ಸಮೇತ ದಾಳಿ ಮಾಡಿ ಅಕ್ರಮ ತಡೆಗೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು ಮಾಡಲಾಗುತ್ತಿದೆ. ರೈತರು ಇಂತಹ ಸಮಸ್ಯೆ ಬಂದಾಗ ಕೂಡಲೇ ಕೃಷಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಜೊತೆಗೆ ಸಾಕ್ಷಿ ಸಮೇತ ಇಲಾಖೆ ಜತೆ ಸಹಕರಿಸಬೇಕು ಅಂದಾಗ ಮಾತ್ರ ನಕಲಿ ದಂಧೆಕೋರರ ವಿರುದ್ಧ ಕಾನೂನು ಕ್ರಮಕ್ಕೆ ನೆರವಾಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಂತೋಷ್ ಪಟ್ಟದಕಲ್ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next