ಬೆಂಗಳೂರು: ನಕಲಿ ಫೇಸ್‌ಬುಕ್ ಪೋಸ್ಟ್ ಆರೋಪದಲ್ಲಿ ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್ ಕುಮಾರ್ ವಿರುದ್ಧ ಪೂರ್ವಾಗ್ರಹ ಕ್ರಮ ಆಗಬಾರದು ಎಂದು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಸದ್ಯ ಸೌದಿ ಅರೇಬಿಯಾ ಜೈಲಿನಲ್ಲಿರುವ ಮೂಲತಃ ಮಂಗಳೂರಿನ ಬಿಕರ್ನಕಟ್ಟೆ ನಿವಾಸಿ ಶೈಲೇಶ್ ಕುಮಾರ್ ಅವರ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಈ ವೇಳೆ ಕೇಂದ್ರ ಸರಕಾರದ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ತನಿಖಾ ಪ್ರಗತಿಯನ್ನು ನ್ಯಾಯಪೀಠಕ್ಕೆ ವಿವರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಕೇಂದ್ರ ಸರಕಾರದ ಪರ ವಕೀಲರು ಹೇಳಿದ್ದಕ್ಕೆ, “ಕೇವಲ ಪತ್ರ ವ್ಯವಹಾರ ನಡೆಸಿದರೆ ಸಾಲದು. ನಮ್ಮ ಪೊಲೀಸರು ಸ್ಕಾಟ್ಲೆಂಡ್ ಮತ್ತು ಮೊಸಾದ್ ಪೊಲೀಸರ ಚಾಣಾಕ್ಷಣತೆ ಹಾಗೂ ಕೌಶಲವನ್ನು ಪ್ರದರ್ಶಿಸಬೇಕು. ಇದು ವಿದೇಶಿ ನೆಲದಲ್ಲಿ ಭಾರತೀಯ ಪ್ರಜೆಯೊಬ್ಬರ ಜೀವ ಅಪಾಯದಲ್ಲಿದೆ ಎಂಬುದಕ್ಕೆ ಉದಾಹರಣೆ. ಹೀಗಾದರೆ ನಾಳೆ ವಿದೇಶಗಳಲ್ಲಿ ಇರುವ ಭಾರತೀಯರ ಪರಿಸ್ಥಿತಿಯೇನು?’ ಎಂದು ಪ್ರಶ್ನಿಸಿತು.
ಜೀವಕ್ಕೆ ಅಪಾಯವಾಗಬಾರದು
ಸೌದಿ ಅರೇಬಿಯಾ ಭಾರತದ ನೆಚ್ಚಿನ ವಿದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಹೀಗಿರುವಾಗ ಮುಗ್ಧ ಪ್ರಜೆ ಶೈಲೇಶ್ ಕುಮಾರ್ ಪ್ರಕರಣವನ್ನು ಕುಲಭೂಷಣ ಪ್ರಕರಣದಲ್ಲಿ ಕೈಗೊಂಡಿದ್ದ ರಾಜತಾಂತ್ರಿಕ ಕ್ರಮ ಯಾಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿತು. ಇಂತಹ ಪ್ರಕರಣಗಳಲ್ಲಿ ವಿಯೆನ್ನಾ ಒಪ್ಪಂದದ ಅನುಸಾರ ನಮ್ಮ ವ್ಯವಹಾರಗಳು ಜರಗಬೇಕು. ನಮ್ಮ ದೇಶದ ಪ್ರಜೆಯೊಬ್ಬ ವಿದೇಶದಲ್ಲಿ ಅಪಾಯದಲ್ಲಿ ಸಿಲುಕಿದ್ಧಾನೆ ಎಂದಾಗ ರಾಜ್ಯದ ಹೈಕೋರ್ಟ್ ಆ ಕುರಿತು ಕಾಳಜಿ ವಹಿಸಿದೆ ಎಂಬುದು ವಿದೇಶೀಯರ ಗಮನಕ್ಕೂ ಬರಬೇಕು. ಹಾಗಾಗಿ, ಶೈಲೇಶ್ ಕುಮಾರ್ ಅವರ ಜೀವಕ್ಕೆ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಳ್ಳಲು ಅಲ್ಲಿನ ಸರಕಾರಕ್ಕೆ ಮನವಿ ಮಾಡಿ ಎಂದು ಕೇಂದ್ರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಜು. 17ಕ್ಕೆ ಮುಂದೂಡಿತು.