ಬೆಂಗಳೂರು: ಚಿಂದಿ ಆಯುವ ವ್ಯಕ್ತಿಯೊಬ್ಬ ತನಗೆ ಸಿಕ್ಕ 30 ಲಕ್ಷ ರೂ. ಅಮೆರಿಕನ್ ಡಾಲರ್ ಮೌಲ್ಯದ ಕರೆನ್ಸಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ, ಅದನ್ನು ಪರಿಶೀಲಿಸಿದಾಗ ಅದು ನಕಲಿ ನೋಟುಗಳು ಎಂಬುದು ಗೊತ್ತಾಗಿದೆ. ಆದರೂ ಅವುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕಳುಹಿಸಲಾಗಿದ್ದು, ಸ್ಪಷ್ಟತೆ ಬಗ್ಗೆ ಮಾಹಿತಿ ಕೇಳಲಾಗಿದೆ ಎಂದು ಪೊಲೀಸರು ಹೇಳಿದರು.
ಪಶ್ಚಿಮ ಬಂಗಾಳ ಮೂಲದ ಸಲೇಮಾನ್ ಶೇಕ್(39) ಚಿಂದಿ ಆಯುವವ.
ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿರುವ ಸಲೇಮಾನ್ ಶೇಕ್, ಹೆಬ್ಟಾಳ, ನಾಗವಾರ ಸುತ್ತ-ಮುತ್ತ ತ್ಯಾಜ್ಯವಸ್ತುಗಳನ್ನು ಆಯ್ದುಕೊಂಡು ಜೀವನ ಸಾಗಿಸುತ್ತಿದ್ದಾನೆ. ನ.3ರಂದು ವೀರಣ್ಯಾಪಾಳ್ಯದ ರೈಲ್ವೆ ಗೇಟ್ ಬಳಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲವೊಂದು ಪತ್ತೆಯಾಗಿದೆ. ಆ ಚೀಲದಲ್ಲಿ ಭಾರೀ ಪ್ರಮಾಣದಲ್ಲಿ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ.
ಅದರ ಬಗ್ಗೆ ತಿಳಿಯದ ಸಲೇಮಾನ್ ಶೇಕ್, ತನಗೆ ಆಶ್ರಯ ನೀಡಿರುವ ಟೇಕೆದಾರ್ ಎಂಬುವರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಟೇಕೆದಾಸ್ ಆ ಚೀಲ ತೆಗೆದು ಪರಿಶೀಲಿಸಿದಾಗ, ನೋಟಿನ ಮೇಲೆ ವಿಶ್ವಸಂಸ್ಥೆ ಹೊಂದಿರುವ ಮುದ್ರೆಯ ಪತ್ರ ದೊರೆತಿದೆ. ತನ್ನ ಮನೆಯಲ್ಲಿ ಇಷ್ಟು ಪ್ರಮಾಣದ ನೋಟುಗಳನ್ನು ಇಟ್ಟುಕೊಳ್ಳುವುದು ಬೇಡ ಎಂದು ಸ್ಥಳೀಯ ಸಂಘಟನೆಯೊಂದರ ಮುಖಂಡ ಆರ್.ಕಲೀಂ ಉಲ್ಲಾಗೆ ಎಲ್ಲಾ ಮಾಹಿತಿ ನೀಡಿದ್ದಾರೆ.
ಈ ವಿಚಾರವನ್ನು ಕಲೀಂ ಉಲ್ಲಾ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದರು. ಕೂಡಲೇ ನೋಟುಗಳ ಬಗ್ಗೆ ಪರಿಶೀಲಿಸುವಂತೆ ಹೆಬ್ಟಾಳ ಪೊಲೀಸರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಲೇಮಾನ್ ಶೇಕ್‌ನನ್ನು ಕರೆಸಿ ಪ್ರಶ್ನಿಸಿದಾಗ ರೈಲ್ವೆ ಹಳಿ ಬಳಿ ಸಿಕ್ಕಿರುವುದಾಗಿ ಹೇಳಿಕೆ ನೀಡಿದ್ದಾನೆ. ರೈಲು ಪ್ರಯಾಣಿಕರು ಅಥವಾ ಸ್ಥಳೀಯರು ನೋಟುಗಳನ್ನು ತುಂಬಿದ ಚೀಲ ಎಸೆದಿರುವ ಸಾಧ್ಯತೆಯಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ನೋಟುಗಳನ್ನು ಪರಿಶೀಲಿಸಿದಾಗ ಮೇಲ್ನೊಟಕ್ಕೆ ಕಲರ್ ಜೆರಾಕ್ಸ್ ಗಳಂತೆ ಕಾಣುತ್ತವೆ. ಅವುಗಳ ನೈಜತೆ ಪರೀಕ್ಷೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ ಎಂದುಪೊಲೀಸರು ಹೇಳಿದರು. ಈ ಸಂಬಂಧ ಹೆಬ್ಟಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.