ಬೆಂಗಳೂರು: ನಕಲಿ ಆಯುರ್ವೇದ ಔಷಧಿಗಳನ್ನು ಮಾರಾಟ ಮಾಡಿ ವೃದ್ಧರಿಂದ ಹಣ ಪಡೆದು ವಂಚಿಸುತ್ತಿದ್ದ ತಂಡವನ್ನು ಬಂಧಿಸುವಲ್ಲಿ ತಿಲಕ್‌ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಜಿತ್ (30) ಮಂಜುನಾಥ (40) ಶಿವಲಿಂಗ ಗೌತಮ್ (42) ರಮಾಕಾಂತ್ ಅಮಿತ್ (37) ಕಿಶನ್ ( 23) ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಕಲ್ಲೋಳಪ್ಪ ಗುರಪ್ಪ ಬಾಗಲಕೋಟಿ ಎಂಬಾತ ಮತ್ತೂಂದು ಪ್ರಕರಣದಲ್ಲಿ ಬಾಗಲಕೋಟೆ ಪೊಲೀಸರ ವಶದಲ್ಲಿದ್ದಾನೆ. ಆತನನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದರು.
ಆರೋಪಿಗಳು ತಂಡ ಆಸ್ಪತ್ರೆಗಳ ಬಳಿ ಬರುವ ವೃದ್ಧರನ್ನು ಟಾರ್ಗೆಟ್ ಮಾಡಿಕೊಂಡು ಅವರನ್ನು ಪರಿಚಯಿಸಿಕೊಳ್ಳುತ್ತಿದ್ದರು. ಮಂಡಿ ನೋವು ಸೇರಿ ವಯೋಸಹಜ ಕಾಯಿಲೆಗಳಿಗೆ ಆಯುರ್ವೇದಿಕ್ ಔಷಧಿಗಳನ್ನು ನೀಡುತ್ತೇವೆ. ಶೇ. 100 ರೋಗಗಳು ವಾಸಿಯಾಗಲಿವೆ. ರೋಗ ವಾಸಿಯಾಗದಿದ್ದರೆ ಹಣ ವಾಪಾಸ್ ಕೊಡುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದರು. ಬಳಿಕ ವೃದ್ಧರಿಂದ ಹಣ ಪಡೆದು ನಕಲಿ ಆಯುರ್ವೇದಿ ಔಷಧಿಗಳನ್ನು ನೀಡಿ ವಂಚಿಸುತ್ತಿದ್ದರು. ಒಂದೇ ಏರಿಯಾದಲ್ಲಿ ತಿಂಗಳು, ಎರಡು ತಿಂಗಳು ಇದ್ದು ಪುನಃ ಕಚೇರಿಯನ್ನು ಮುಚ್ಚಿಕೊಂಡು ಮತ್ತೂಂದು ಏರಿಯಾಕ್ಕೆ ಸ್ಥಳಾಂತರಗೊಳ್ಳುತ್ತಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಕೆಲವು ತಿಂಗಳ ಹಿಂದೆ ಜಯನಗರದ ಅಥ್ರೋಪೆಡಿಕ್ ಸೆಂಟರ್ ವೊಂದರ ಮುಂಭಾಗ ರವಿ ಬಿ.ಆರ್ ಅನುಕರ್ ಎಂಬುವವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿಗಳು ಅವರ ಸೊಂಟ, ಕಾಲು ನೋವಿಗೆ ಔಷಧಿ ನೀಡುತ್ತೇವೆ ಎಂದು ನಂಬಿಸಿದ್ದರು. ಬಳಿಕ ರಾಜಾಜಿನಗರದಲ್ಲಿರುವ “ಧನ್ವಂತರಿ ಅಥೋìಪೆಡಿಕ್’ ಹೆಸರಿನ ಸೆಂಟರ್‌ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆರೋಪಿ ಕಲ್ಲೋಳಪ್ಪ ತಾನೇ ವೈದ್ಯ ಎಂದು ಬಿಂಬಿಸಿಕೊಂಡು ನಮ್ಮ ಚಿಕಿತ್ಸೆಗೆ 2.59 ಲಕ್ಷ ರೂ. ಖರ್ಚಾಗಲಿದೆ. ಅಷ್ಟು ಹಣ ನೀಡಿದರೆ ಚಿಕಿತ್ಸೆ ಹಾಗೂ ಔಷಧಿ ನೀಡುತ್ತೇವೆ ಎಂದು ನಂಬಿಸಿದ್ದರು. ಸೊಂಟ, ಕಾಲು ನೋವು ವಾಸಿಯಾಗದಿದ್ದರೆ ಹಣ ವಾಪಸ್ ಕೊಡುವುದಾಗಿ ತಿಳಿಸಿದ್ದರು. ಇದನ್ನು ನಂಬಿದ್ದ ರವಿ ಅವರು 2.59 ಲಕ್ಷ ರೂ. ನೀಡಿ ಔಷಧಿ ಪಡೆದಿದ್ದರು.
ಆರೋಪಿಗಳು ನೀಡಿದ್ದ ಔಷಧಿ ಪಡೆದುಕೊಂಡರೂ ನೋವು ಕಡಿಮೆಯಾಗಿರಲಿಲ್ಲ. ಹೀಗಾಗಿ ರವಿ ಅವರು ಧನ್ವಂತರಿ ಅಥ್ರೋಪೆಡಿಕ್ ಹತ್ತಿರ ಹೋದಾಗ ಕ್ಲಿನಿಕ್ ಬಾಗಿಲು ಮುಚ್ಚಿರುವುದು ಗೊತ್ತಾಗಿದೆ. ಹೀಗಾಗಿ ತಾವು ಮೋಸ ಹೋಗಿರುವುದನ್ನು ಅರಿತು ಫೆ.10ರಂದು ಪ್ರಕರಣ ದಾಖಲಿಸಿದ್ದರು. ಈ ದೂರಿನ ಅನ್ವಯ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಜಿ.ಎಸ್ ಅನಿಲ್ ಕುಮಾರ್ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸಿ 50 ಸಾವಿರ ರೂ.ನಗದು ಜಪ್ತಿ ಮಾಡಿಕೊಂಡಿದೆ. ಆರೋಪಿಗಳ ವಿಚಾರಣೆ ವೇಳೆ ಐದು ಮಂದಿಗೆ ವಂಚಿಸಿರುವುದು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.