Advertisement
ಬದುಕಿನಲ್ಲಿ ನಂಬಿಕೆ ಮತ್ತು ಶಕ್ತಿ ಹೇಗಿರಬೇಕು ಎಂಬುದನ್ನು ತಮ್ಮ ಮಾತುಗಳ ಮೂಲಕ ಹೇಳಿ,ತಮ್ಮ ಬದುಕಿನ ಮೂಲಕ ನಿರೂಪಿಸಿ ಉಕ್ಕಿನ ಮನುಷ್ಯ ಎಂದೇ ಹೆಸರು ಗಳಿಸಿದವರು ಸರ್ದಾರ್ ವಲ್ಲಭಭಾಯ್ ಪಟೇಲ್. 1875ರ ಅಕ್ಟೋಬರ್ 31 ರಂದು ಗುಜರಾತಿನಲ್ಲಿ ಜನಿಸಿದ ಅವರ ಬದುಕಿನ ಹಾದಿ ಸುಗಮವಾಗಿರಲ್ಲಿಲ್ಲ. ಒಂದು ಕಡೆ ಮನೆಯಲ್ಲಿ ಆರ್ಥಿಕ ಸಂಕಷ್ಟ ಮತ್ತೊಂದು ಕಡೆ ಕಣ್ತುಂಬ ಕನಸುಗಳು ಜತೆಗೆ ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸುವ ಛಲವನ್ನು ತಮ್ಮ ಬದುಕಿನಲ್ಲಿ ತುಂಬಿಕೊಂಡವರು ಪಟೇಲರು.
Related Articles
Advertisement
ಅಂದು ಕೊಂಡಂತೆಯೇ ಆಗಿದ್ದರೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಭಾರತದ ಮೊದಲ ಪ್ರಧಾನಿಯಾಗಬೇಕಿತ್ತು. ಆದರೆ ಮಹಾತ್ಮಾ ಗಾಂಧೀಜಿ ಅವರಿಗೆ ಜವಾಹರಲಾಲ್ ನೆಹರೂ ಮೇಲಿದ್ದ ಮಮಕಾರ ಪ್ರಧಾನಿ ಹುದ್ದೆಯನ್ನು ಪಟೇಲ್‌ರಿಂದ ತ್ಯಾಗ ಮಾಡಿಸಿತು. ಪಟೇಲ್ ಅವರು ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ದೇಶದ ಅಭಿವೃದ್ಧಿ ಕಡೆ ಸದಾ ಚಿಂತನೆ ಮಾಡುತ್ತಿದ್ದರು. ದೇಶ ಸದೃಢವಾಗಬೇಕಾದರೆ ಭಾಷಾವಾರು ಪ್ರಾಂತ್ಯಗಳು ಗಟ್ಟಿ ನೆಲೆಯಲ್ಲಿ ರೂಪಗೊಳ್ಳಬೇಕು. ಭಾರತ ಅನ್ನುವ ಭವ್ಯ ಸೌಧಕ್ಕೆ ಭಾಷಾವಾರು ಪ್ರಾಂತ್ಯಗಳು ಆಧಾರ ಸ್ತಂಭಗಳಿದ್ದಂತೆ ಎಂಬುದನ್ನು ನಾಯಕರಿಗೆ ಮನವರಿಕೆ ಮಾಡಿಕೊಟ್ಟರು. ಈ ಮೂಲಕ ಬದುಕಿನಲ್ಲಿ ಏನೇ ಸಾಧಿಸಬೇಕಿದ್ದರೂ ಅಧಿಕಾರ ಮುಖ್ಯವಲ್ಲ. ಬದಲಿಗೆ ದೃಢ ನಿಶ್ಚಯ ಹಾಗೂ ನಂಬಿಕೆ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟರು. ತಮ್ಮ ಬದುಕಿನಲ್ಲಿ ಉತ್ತಮ ಆಲೋಚನ ಕ್ರಮಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಅವರಿಗೆ ಉಕ್ಕಿನ ಮನುಷ್ಯ ಎಂಬ ಹೆಸರು ಬಂತು.
ಉತ್ತಮ ಆಲೋಚನೆ, ವಿಷಯವಸ್ತುವನ್ನಿಟ್ಟುಕೊಂಡರೆ ಜೀವನದಲ್ಲಿ ಪ್ರಗತಿ ಸಾಧಿಸಬಹುದು ಎಂಬುವುದು ಅವರ ಅಚಲ ನಂಬಿಕೆಯಾಗಿತ್ತು. ಯಾವುದೇ ಒಂದು ಕೆಲಸ ಪೂರ್ಣಗೊಳ್ಳಲು ಒಗ್ಗಟ್ಟು ಅಗತ್ಯ ಎಂಬುದನ್ನು ಹೇಳಿರುವ ಅವರು, ಬದುಕಿನಲ್ಲಿ ಯಾವುದೇ ಕಾರ್ಯ ಮಾಡಬೇಕಿದ್ದರೂ ಮೊದಲಿಗೆ ಉತ್ತಮ ಆಲೋಚನೆ ಅತ್ಯಗತ್ಯ. ನಮ್ಮ ಆಲೋಚನೆ ಉತ್ತಮವಾಗಿದ್ದರೆ ಅದು ಎಲ್ಲರಿಗೂ ಮಾದರಿಯಾಗುತ್ತದೆ. ಇದು ನಿಮ್ಮನ್ನು ಮಹಾನ್ ವ್ಯಕ್ತಿಯನ್ನಾಗಿ ಮಾಡುತ್ತದೆ ಎನ್ನುವುದು ಅವರ ಮಾತಿನಲ್ಲಿ ಅಡಕವಾಗಿತ್ತು.
ಪ್ರತಿಯೊಬ್ಬರು ಬದುಕಿನಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ನಿಸ್ವಾರ್ಥ ಮನೋಭಾವನೆ ಇಟ್ಟು ಇತರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುವುದು ಅವರ ಇಚ್ಛೆಯಾಗಿತ್ತು. ಪ್ರತಿಯೊಬ್ಬರಲ್ಲೂ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಅರಿವಿರಬೇಕು. ಯಾವುದಕ್ಕೂ ಭಯಪಡುವ ಅಗತ್ಯ ಇರುವುದಿಲ್ಲ ಎನ್ನುತ್ತಾರೆ ವಲ್ಲಭಭಾಯ್ ಪಟೇಲ್. ನಮ್ಮ ಸುತ್ತಮುತ್ತ ಇರುವವರಿಗೆ ಆತ್ಮವಿಶ್ವಾಸದ ಮಾತುಗಳಿಂದ ಸ್ಫೂರ್ತಿ ತುಂಬಬೇಕು. ಈ ಮೂಲಕ ಅವರಲ್ಲೂ ದೇಶಸೇವೆಯ ಕಲ್ಪನೆ ಬಿತ್ತಬಹುದು. ನೂರು ಪುಟಗಳ ದಾಖಲೆಗಿಂತ ಶ್ರೇಷ್ಠ ಹತ್ತು ಸಾಲು ಗಳು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸುತ್ತದೆ ಎಂದಿರುವ ಪಟೇಲರು, ತಾವು ಇತರರಿಂದ ಪ್ರೇರಣೆ ಪಡೆದು, ತಮ್ಮ ಮಾತುಗಳಿಂದ ಇತರಲ್ಲೂ ಸ್ಫೂರ್ತಿ ತುಂಬುತ್ತಿದ್ದರು. ಒಟ್ಟಿನಲ್ಲಿ ಅವರ ಬದುಕಿನಲ್ಲಿ ತಮ್ಮ ಕನಸು ಈಡೇರಿಸಿಕೊಳ್ಳಲಾಗದಿದ್ದರೂ, ತಮ್ಮನ್ನು ತಾವು ದೇಶಕ್ಕಾಗಿ ಮುಡಿಪಾಗಿಟ್ಟು ಎಲ್ಲರಿಗೂ ಆದರ್ಶವಾದರು.
ಒಳ್ಳೆಯತನ ನೀವು ನಡೆಯುವ ದಾರಿಯಲ್ಲಿದೆ. ಆದ್ದರಿಂದ ನಿಮ್ಮ ಕಣ್ಣುಗಳು ಕೋಪದಿಂದ ಕೆಂಪಗಾಗಲು ಅವಕಾಶ ಮಾಡಿಕೊಡದಿರಿ. ಅನ್ಯಾಯವನ್ನು ಪ್ರಶ್ನಿಸಿ.
ಒಗ್ಗಟ್ಟು ಇಲ್ಲದಿದ್ದರೆ ಮಾನವ ಶ್ರಮ ವ್ಯರ್ಥ.
ಜೀವನದಲ್ಲಿ ನಂಬಿಕೆ ಮತ್ತು ಶಕ್ತಿ ಎರಡೂ ಅಗತ್ಯ. ಇದರಲ್ಲಿ ಒಂದನ್ನು ಕಳೆದುಕೊಂಡರೂ ಬದುಕಿನಲ್ಲಿ ಯಶಸ್ಸು ಸಾಧಿಸುವುದು ಅಸಾಧ್ಯ.– ಸರ್ದಾರ್ ವಲ್ಲಭ ಭಾಯ್ ಪಟೇಲ್ ಪುನೀತ್ ಸಾಲ್ಯಾನ್