ಬೆಂಗಳೂರು: ಕಳೆದ ಒಂಬತ್ತು ದಿನಗಳಿಂದ ಸರಕು ಸಾಗಣೆದಾರರ ಮುಷ್ಕರ ಮುಂದುವರಿದಿರುವ ಬೆನ್ನಲ್ಲೇ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಶುಕ್ರವಾರ ನಡೆಸಿದ ಸುದೀರ್ಘ ಸಭೆಯೂ ವಿಫಲಗೊಂಡ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಲು ಸರಕುಸಾಗಣೆದಾರರು ಮುಂದಾಗಿದ್ದಾರೆ.
ಕೇಂದ್ರ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ನಾನಾ ಸಾರಿಗೆ ಸಂಘಟನೆಗಳು ಹೋರಾಟ ಬೆಂಬಲಿಸಲಾರಂಭಿಸಿವೆ. ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳಾದ ಓಲಾ, ಉಬರ್ ಸಂಸ್ಥೆಗಳು ಶನಿವಾರದಿಂದಲೇ ವಾಹನ ಸ್ಥಗಿತಗೊಳಿಸಿ ಹೋರಾಟಕ್ಕಿಳಿಯಲಿವೆ. ಮ್ಯಾಕ್ಸಿಕ್ಯಾಬ್ ಮಾಲೀಕರು ಸೋಮವಾರದಿಂದ ಮುಷ್ಕರಕ್ಕಿಳಿಯಲು ಚಿಂತಿಸಿದ್ದು, ಹೋರಾಟ ಇನ್ನಷ್ಟು ಉಗ್ರ ಸ್ವರೂಪ ಪಡೆಯುವ ಲಕ್ಷಣ ಕಾಣುತ್ತಿದೆ.
ಸ್ಪಂದಿಸದ ಕೇಂದ್ರ ಸರ್ಕಾರ: ಏಪ್ರಿಲ್ 30ರ ಮಧ್ಯರಾತ್ರಿ ಆರಂಭವಾದ ಮುಷ್ಕರ ಕೆಲ ಸಂಧಾನ ಸಭೆಗಳ ಬಳಿಕವೂ ಮುಂದುವರಿದಿದ್ದ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿರುವ ಐಆರ್‌ಡಿಎ ಕಚೇರಿಯಲ್ಲಿ ಶುಕ್ರವಾರ ನಡೆದ ಎರಡನೇ ಸಭೆಯಲ್ಲೂ ವಿಮಾ ಶುಲ್ಕ ಸಂಬಂಧ ಸರಕು ಸಾಗಣೆದಾರರ ಬೇಡಿಕೆಗೆ ಪ್ರಾಧಿಕಾರ ಒಪ್ಪದ ಕಾರಣ ಸಭೆ ವಿಫಲವಾಯಿತು.
ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿಯಾಗದಂತೆ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಸರಕುಸಾಗಣೆದಾರರು ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ಸಜ್ಜಾಗಿದ್ದಾರೆ. ಹೈದರಾಬಾದ್‌ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಐಆರ್‌ಡಿಎ ಅಧಿಕಾರಿಗಳು ವಿಮಾ ಶುಲ್ಕ ಇಳಿಕೆ ಮಾಡಲು ಒಪ್ಪದ ಕಾರಣ ಸಭೆ ವಿಫಲವಾಯಿತು. ಹಾಗಾಗಿ ಸೋಮವಾರ ಅಖೀಲ ಭಾರತ ಮೋಟಾರ್ ಟ್ರಾನ್ಸ್‌ಪೊರ್ಟ್ ಕಾಂಗ್ರೆಸ್ ಕೂಡ ಹೋರಾಟಕ್ಕಿಳಿ ಯಲಿದ್ದು,
ರಾಷ್ಟ್ರವ್ಯಾಪ್ತಿ ಹೋರಾಟ ತೀವ್ರಗೊಳಿಸ ಲಾಗುವುದು ಎಂದು ದಕ್ಷಿಣ ವಲಯ ಮೋಟಾರು ಸಾಗಣೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ಹೇಳಿದರು. ಸರಕು ಸಾಗಣೆದಾರರ ಹೋರಾಟ ಬೆಂಬಲಿಸಿ ಸೋಮವಾರದಿಂದ ಎಲ್ಲ ಬಗೆಯ ಕ್ಯಾಬ್ ಸೇವೆಗಳನ್ನು ಸ್ಥಗಿತಗೊಳಿಸಲು ಚಿಂತಿಸಲಾಗಿದೆ. ಶನಿವಾರ ಪದಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.
ಸಹಜ ಸ್ಥಿತಿಗೆ ಆಹಾರ ಪೂರೈಕೆ: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಆಹಾರಧಾನ್ಯ ಪೂರೈಕೆ ಬಹುತೇಕ ಸಹಜ ಸ್ಥಿತಿಗೆ ಮರಳಿದೆ. ಹಗಲು ರಾತ್ರಿ ಸರಕು ಪೂರೈಕೆಯಾಗುತ್ತಿರುವುದರಿಂದ ವ್ಯಾಪಾರ- ವಹಿವಾಟು ಸಹ ಸಾಮಾನ್ಯ ಸ್ಥಿತಿಗೆ ಬಂದಂತಾಗಿದೆ. ಉಳಿದಂತೆ ಯಾವುದೇ ಧಾನ್ಯ, ಬೇಳೆಕಾಳಿನ ಕೊರತೆ ಕಂಡುಬಂದಿಲ್ಲ ಎಂದು ಯಶವಂತಪುರ ಎಪಿಎಂಸಿ ಆಹಾರಧಾನ್ಯ ಮತ್ತು ಬೇಳೆಕಾಳು ವರ್ತಕರ ಸಂಘದ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಹೇಳಿದ್ದಾರೆ.
ಕಲಾಸಿಪಾಳ್ಯ ಸಗಟು ಮಾರುಕಟ್ಟೆ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಗೆ ಅಗತ್ಯ ಪ್ರಮಾಣದಲ್ಲಿ ಹಣ್ಣು- ತರಕಾರಿ ಪೂರೈಕೆಯಾಗುತ್ತಿದೆ. ನಿರಂತರವಾಗಿ ಸಭೆಗಳು ವಿಫಲವಾಗುತ್ತಿರುವುದರಿಂದ ಮುಷ್ಕರ ತೀವ್ರಗೊಂಡರೆ ಅಗತ್ಯ ವಸ್ತುಗಳ ಪೂರೈಕೆಯಲ್ಲೂ ವ್ಯತ್ಯಯವಾಗುವ ಆತಂಕ ಮೂಡಿದೆ.