Advertisement

ಫಸಲ್‌ ಬಿಮಾ ಯೋಜನೆಯತ್ತ ಒಲವು ತೋರದ ಅನ್ನದಾತ

01:41 PM Jun 12, 2017 | |

ದಾವಣಗೆರೆ: ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಹೆಸರಲ್ಲಿ ಅನುಷ್ಠಾನಕ್ಕೆ ಬಂದಿರುವ ಕೇಂದ್ರ ಸರ್ಕಾರದ ಅತಿ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ ಕಳೆದ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ತೀವ್ರ ನಿರಾಶದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ. 

Advertisement

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಇಟ್ಟುಕೊಂಡಿತ್ತು. ಯೋಜನೆ ಘೋಷಣೆಯ ಮುನ್ನ, ಆನಂತರ ಬಹು  ದೊಡ್ಡದ್ದಾಗಿ ಯೋಜನೆಯ ಮಹತ್ವ ಬಿಂಬಿಸಿತ್ತು. ಆದರೂ, ಒಂದು ಕಡೆ ನೀರಾವರಿ ಇನ್ನೊಂದು ಕಡೆ ಬೆದ್ದಲು ಪ್ರದೇಶ ಹೊಂದಿರುವ ದಾವಣಗೆರೆ ಜಿಲ್ಲೆಯ ರೈತರು ಬಿಮಾ ಯೋಜನೆಯತ್ತ ಆಸಕ್ತಿ ತೋರಲೇ ಇಲ್ಲ. 

ಒಟ್ಟಾರೆ 5,97,597 ಹೆಕ್ಟೇರ್‌ ಭೌಗೋಳಿಕ ವಿಸೀ¤ರ್ಣದ ದಾವಣಗೆರೆ ಜಿಲ್ಲೆಯಲ್ಲಿ ಸಾಗುವಳಿ ಪ್ರದೇಶ 4,26,658 ಹೆಕ್ಟೇರ್‌. ಮುಂಗಾರು ಹಂಗಾಮಿನಲ್ಲಿ 3.40 ಲಕ್ಷ ಹೆಕ್ಟೇರ್‌, ಹಿಂಗಾರಲ್ಲಿ 27,100 ಹೆಕ್ಟೇರ್‌ನಲ್ಲಿ ಸಾಗುವಳಿ ಮಾಡಲಾಗುತ್ತದೆ. 62 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. 

ಜಿಲ್ಲೆಯಲ್ಲಿ ಶೇ. 75.67ರಷ್ಟು ಪ್ರಮಾಣದಲ್ಲಿ 2,00,720 ಸಣ್ಣ ಮತ್ತು ಅತೀ ಸಣ್ಣ ರೈತರು, ಶೇ. 24.33ರ ಪ್ರಮಾಣದಲ್ಲಿ 64,519 ದೊಡ್ಡ ರೈತರು ಒಳಗೊಂಡಂತೆ ಒಟ್ಟು 2,62,539 ರೈತರಿದ್ದರೂ  ಫಸಲ್‌ ಬಿಮಾ ಯೋಜನೆಗೆ ಮುಂಗಾರು ಹಂಗಾಮಿನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ 23,552 ರೈತರು ಮಾತ್ರ.

ಅವರಲ್ಲಿ ಸಹಕಾರ ಸಂಘ, ಬ್ಯಾಂಕ್‌ಗಳಲ್ಲಿ ಸಾಲ ಪಡೆಯದೇ ಸ್ವಂತಕ್ಕೆ ಬಿಮಾ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದು 1,735 ರೈತರು ಅಷ್ಟೇ. ದಾವಣಗೆರೆ ತಾಲೂಕಿನಲ್ಲಿ 3,613, ಚನ್ನಗಿರಿ 2,025, ಹರಪನಹಳ್ಳಿ 5,204, ಹರಿಹರ 1,921, ಹೊನ್ನಾಳಿ 8,816 ಹಾಗೂ ಜಗಳೂರು ತಾಲ್ಲೂಕಲ್ಲಿ 4,083 ರೈತರು ಫಸಲ್‌ ಬಿಮಾ ಯೋಜನೆ ನೋಂದಣಿ ಮಾಡಿಸಿಕೊಂಡಿದ್ದರು.

Advertisement

ವಿವಿಧ ಸಹಕಾರ ಸಂಘ, ಬ್ಯಾಂಕ್‌ಗಳಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದವರು ಬೆಳೆ ವಿಮೆ ಮಾಡಿಸುವುದು ಕಡ್ಡಾಯ ವಿಮೆ ಮಾಡಿಸಿಕೊಳ್ಳಬೇಕಾದ ಕಾರಣಕ್ಕೆ ಮಾತ್ರ 23,152 ರೈತರು ಬೆಳೆ ವಿಮೆದಾರರಾಗಿದ್ದಾರೆ. ಆದರೆ, ಸಾಲ ಪಡೆಯದೇ ಇದ್ದ ರೈತರು ಮಾತ್ರ ಫಸಲ್‌ ಬಿಮಾ ಯೋಜನೆಯತ್ತ ಮುಖ ಮಾಡದೇ ಇರುವುದು ರೈತರು ಯೋಜನೆಯತ್ತ ಹೊಂದಿದ್ದ ನಿರಾಸಕ್ತಿಯನ್ನು ತೋರಿಸುತ್ತದೆ. 

ಮುಂಗಾರು ಹಂಗಾಮಿನಲ್ಲಿ ಮಾತ್ರವಲ್ಲ ಹಿಂಗಾರು ಹಂಗಾಮಿನಲ್ಲೂ ರೈತರು ಫಸಲ್‌ ಬಿಮಾ ಯೋಜನೆಯತ್ತ ಕಣ್ಣು ಹಾಯಿಸಲೇ ಇಲ್ಲ. ಹಿಂಗಾರು ಹಂಗಾಮಿನಲ್ಲಿ ಫಸಲ್‌ ಬಿಮಾ ಯೋಜನೆಯಲ್ಲಿ ನೋಂದಣಿಯಾದ ರೈತರ ಸಂಖ್ಯೆ 3,026. ಚನ್ನಗಿರಿಯಲ್ಲಿ ಮೂವರು, ಹರಿಹರದಲ್ಲಿ ಇಬ್ಬರು,

-ದಾವಣಗೆರೆಯಲ್ಲಿ 56, ಹರಪನಹಳ್ಳಿಯಲ್ಲಿ 371, ಹೊನ್ನಾಳಿಯಲ್ಲಿ 962, ಜಗಳೂರಿನಲ್ಲಿ 1,632 ರೈತರು ನೋಂದಣಿ ಮಾಡಿಸಿದ್ದರು. ಅವರಲ್ಲಿ ಸಾಲ ಪಡೆಯದೇ  ಇದ್ದವರು 889 ರೈತರು. ಅಲ್ಲಿಗೆ ಅತಿ ಮಹತ್ವಾಕಾಂಕ್ಷಿತ ಯೋಜನೆಗೆ ನಿರೀಕ್ಷಿತ ಪ್ರತಿಕ್ರಿಯೆ ರೈತರಿಂದ ವ್ಯಕ್ತವಾಗಲೇ ಇಲ್ಲ. 

* ರಾ.ರವಿಬಾಬು  

Advertisement

Udayavani is now on Telegram. Click here to join our channel and stay updated with the latest news.

Next