ಯಾದಗಿರಿ: ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಪರಿಸ್ಥಿತಿಯನ್ನು ವೈಮಾನಿಕ ವೀಕ್ಷಣೆ ಮಾಡಿ ಇದುವರೆಗೆ ನಯಾಪೈಸೆಯೂ ಪರಿಹಾರ ಘೋಷಿಸಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.
ಸೋಮವಾರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದು 13 ತಿಂಗಳು ಕಳೆದಿದ್ದು, ಸರ್ಕಾರ ಕೋವಿಡ್ ವೈರಸ್ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರ ಕೋವಿಡ್ ವೈರಸ್ ನಿಯಂತ್ರಣಕ್ಕೆ 1.30 ಲಕ್ಷ ಕೋಟಿ ಸಾಲ ತೆಗೆದುಕೊಂಡಿದೆ. ಆದರೆ ಖರ್ಚು ಮಾಡಿದ್ದು 4300 ಕೋಟಿ ರೂ. ಅದರಲ್ಲೂ ಕೂಡ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ದಾಖಲೆ ಸಮೇತ ಪ್ರಶ್ನಿಸಿದರೆ ಅದಕ್ಕೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಸೂಕ್ತ ಉತ್ತರ ನೀಡಿಲ್ಲ. ಇದರಿಂದ ಅವರು ಭ್ರಷ್ಟಾಚಾರ ನಡೆಸಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದರು. ರಾಜ್ಯದ ಉತ್ತರ ಕರ್ನಾಟಕದ 23 ಜಿಲ್ಲೆಗಳಲ್ಲಿ ಅಧಿ ಕ ಮಳೆಯಾಗಿದೆ. ಎರಡು ಬಾರಿ ಭೀಕರ ಪ್ರವಾಹದಿಂದ ಜನರ ಬದುಕು ಬೀದಿಗೆ ಬಿದ್ದಿದೆ. ಯಾದಗಿರಿ ರೈತರ ಮುಂಗಾರು ಓಟ್ಟು 70 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಹಿಂಗಾರು ಬಿತ್ತನೆ ಮಾಡಲಾಗದ ಪರಿಸ್ಥಿತಿಯಿದೆ, ಸಾವಿರಾರು ಮನೆಗಳು ನೀರಿನಲ್ಲಿ ಮುಳುಗಿದೆ ಎಂದರು.
ಬೆಂಗಳೂರಿನಲ್ಲಿ ನೀರು ನುಗ್ಗಿದ ಮನೆಗಳ ಮಾಲೀಕರಿಗೆ 25 ಸಾವಿರ ಪರಿಹಾರ ನೀಡಿದ್ದಾರೆ. ಆದರೆ ಇಲ್ಲಿ 10 ಸಾವಿರ ರೂ. ನೀಡಿದ್ದು ತಾರತಮ್ಯ ಸರಿಪಡಿಸಲು ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಮ್ಮ ಕರ್ತವ್ಯನಿಭಾಯಿಸುವಲ್ಲಿ ಎಡವಿದ್ದಾರೆ. ಬೀದರ್ ಹಾಗೂ ಯಾದಗಿರಿ ಜಿಲ್ಲೆ ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಇಂಥವರಿಂದ ಯಾವ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಸಂತ್ರಸ್ತರಿಗೆ ಪರಿಹಾರ ನೀಡಲು ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಯಾವ ಸಂತ್ರಸ್ತರನ್ನು ಭೇಟಿಯಾಗಿ ಸಮಸ್ಯೆ ಆಲಿಸಿಲ್ಲ, ಹೀಗಾಗಿ ಇವರಿಗೆ ಜನರ ಮೇಲಿರುವ ಕಾಳಜಿ ವ್ಯಕ್ತವಾಗುತ್ತದೆ ಎಂದು ಹೇಳಿದರು. ಹಿಂದೆ 2016 ರಲ್ಲಿ ನಾನು ಅಧಿ ಕಾರದಲ್ಲಿದ್ದ ಸಂದರ್ಭದಲ್ಲಿಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದೆ ಎಂದು ಸಮರ್ಥಿಸಿಕೊಂಡರು.
ಶಾಸಕರಾದ ಶರಣಬಸಪ್ಪ ದರ್ಶನಾಪುರ, ಅಜಯಸಿಂಗ್, ಮಾಜಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಜಿ.ಪಂ ಉಪಾಧ್ಯಕ್ಷೆ ಗಿರಿಜಮ್ಮಪಾಟೀಲ್ ರೊಟ್ನಡಗಿ, ರವಿ ಭೋಸರಾಜ್, ಚಿದಾನಂದಪ್ಪ ಕಾಳಬೆಳಗುಂದಿ, ಸುದರ್ಶನ ನಾಯಕ, ಮಂಜುಳಾ ಗೂಳಿ, ಮರೆಪ್ಪ ಬಿಳ್ಹಾರ, ಮಾಣಿಕರೆಡ್ಡಿ ಕುರಕುಂದಿ, ಬಸುಗೌಡ ಬಿಳಾØರ ಸೇರಿದಂತೆ ಇತರರು ಇದ್ದರು.