ಮೈಸೂರು: ಕನ್ನಡ ಭಾಷೆ ಅಡುಗೆ ಮನೆಯ ಹೊಸ್ತಿಲು ದಾಟಿ ಹೊರಗೆ ಬಾರದ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಗಂಭೀರ ಚರ್ಚೆ ನಡೆಸುವಲ್ಲಿ ವಿಫಲರಾಗಿದ್ದೇವೆ ಎಂದು ನಾಡೋಜ ಪಂಡಿತ್ ರಾಜೀವ್ ತಾರಾನಾಥ್ ವಿಷಾದ ವ್ಯಕ್ತಪಡಿಸಿದರು.
ಮೈಸೂರು ಸಾಹಿತ್ಯ ಸಂಘದ ವತಿಯಿಂದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಸಾಹಿತ್ಯ ಹಬ್ಬ-2018 ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ತನ್ನದೇ ಇತಿಹಾಸ ಹೊಂದಿದ್ದರೂ, ಕನ್ನಡ ಭಾಷೆಯಲ್ಲಿ ಹೊಸ ಪದಗಳ ಬಳಕೆ ಸೃಷ್ಟಿಸುವಲ್ಲಿ ಸೋತಿದ್ದೇವೆ.
ಇದರಿಂದಾಗಿ ಕನ್ನಡ ಭಾಷೆ ಇಂದಿಗೂ ಅಡುಗೆ ಮನೆಯ ಹೊಸ್ತಿಲನ್ನು ದಾಟಿ ಹೊರಗೆ ಬಂದಿಲ್ಲ. ಹೀಗಾಗಿ ಕನ್ನಡದಲ್ಲಿ ಯಾವುದೇ ವಿಷಯದ ಕುರಿತು ಗಂಭೀರ ಚರ್ಚೆ ನಡೆಸುವಲ್ಲಿ ನಾವು ಇಂದಿಗೂ ಅಸಮರ್ಥರಾಗಿದ್ದೇವೆ. ಆದರೆ ತಮಿಳು ಭಾಷೆ ತನ್ನದೇ ಆದ ಸ್ವಂತಿಕೆ ಮೆರೆದಿದೆ.
ಇನ್ನು ಸಂಸ್ಕೃತ ಮತ್ತು ಕನ್ನಡ ಸಹೋದರ ಭಾಷೆಗಳಲ್ಲ, ಬದಲಿಗೆ ಇಂಗ್ಲಿಷ್ ಮತ್ತು ಸಂಸ್ಕೃತ ಸಹೋದರ ಭಾಷೆಗಳಾಗಿದೆ ಎಂದ ಅವರು, ಇಂದು ಇಂಗ್ಲಿಷ್ ಅಧ್ಯಯನ ಕುಸಿದಿದ್ದರೆ ಅದಕ್ಕೆ ಪ್ರಾಧ್ಯಾಪಕರೂ ಕಾರಣರಾಗುತ್ತಾರೆ ಎಂದರು. ಸಾಹಿತ್ಯ ವಿಮರ್ಶಕ ಗಣೇಶ್ ಎನ್.ದೇವಿ ಮಾತನಾಡಿ, ಇಡೀ ಪ್ರಪಂಚವೇ ಒಂದು ರೀತಿಯ ಆತಂಕಕಾರಿ ಹೆಜ್ಜೆಯನ್ನಿಡುತ್ತಿದೆ.
ಈ ರೀತಿಯ ಹತ್ಯೆಗಳಿಂದ ಭಯದ ವಾತಾವರಣ ಸೃಷ್ಟಿಯಾಗಿದ್ದು, ಪ್ರತಿ ಸರ್ಕಾರ ಯಾವುದಕ್ಕಾಗಿ ಇಂತಹ ದೊಂಬಿ, ಹತ್ಯೆ ಘಟನೆಗಳಿಗೆ ಸಹಕರಿಸುತ್ತಿದೆ ತಿಳಿಯುತ್ತಿಲ್ಲ ಎಂದರು. ಇನ್ನು ದೇಶದಲ್ಲಿ 1961-2011 ರವರೆಗೆ 250ಕ್ಕೂ ಹೆಚ್ಚು ಭಾಷೆಗಳು ಅಸ್ತಿತ್ವ ಕಳೆದುಕೊಂಡಿದ್ದು, ಪ್ರತಿ ವರ್ಷ ಕನಿಷ್ಠ 5ರಿಂದ 6 ಭಾಷೆಗಳು ಕಾಣೆಯಾಗುತ್ತಿವೆ. ಹೀಗೆ ನಮ್ಮ ವೈವಿಧ್ಯತೆ ಹಾಳಾದರೆ ಆವಿಷ್ಕಾರಗಳು ನಿಂತು ಹೋಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಂಗವಾಗಿ ಭಾಷಾಂತರದ ಸವಾಲುಗಳು, ನಮ್ಮದು ಕ್ರೀಡಾಸ್ಪೂರ್ತಿಯ ದೇಶವೇ? ಎಂಬ ವಿಷಯದ ಕುರಿತು ಚರ್ಚಾಗೋಷ್ಠಿಗಳು ನಡೆಯಿತು. ಲೇಖಕ ಪವನ್ ವರ್ಮಾ, ಸಂಘದ ಅಧ್ಯಕ್ಷ ಪೊ›.ಕೆ.ಸಿ.ಬೆಳ್ಳಿಯಪ್ಪ, ಉಪಾಧ್ಯಕ್ಷ ಡಾ.ಎಚ್.ಎಸ್. ಶಿವಣ್ಣ, ಕಾರ್ಯದರ್ಶಿ ರೆಜಿನಾಲ್ಡ್ ವೆಸ್ಲಿ ಇನ್ನಿತರರು ಹಾಜರಿದ್ದರು.