ಬೆಂಗಳೂರು: ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ವಿಫಲ ಯತ್ನ ನಡೆಸಿದ ವಿದೇಶಿ ಪ್ರಜೆಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಂಗಾಡ ಮೂಲದ ನೈರೋ ಇಸ್ಮಿಲ್ ಬಂಧಿತ. ಆರೋಪಿ ಶುಕ್ರವಾರ ಬೆಳಗ್ಗೆ ರಾಜಾಜಿನಗರದ ಎಚ್‌ಡಿಎಫ್ಸಿ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಕೃತ್ಯವೆಸಗಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ಜೆಮ್ಸ್ ಎಂಬಾತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ನವರಂಗ್ ಚಿತ್ರ ಮಂದಿರದ ಸಮೀಪದ ಡಾ ರಾಜ್‌ಕುಮಾರ್ ರಸ್ತೆಯಲ್ಲಿರುವ ಎಚ್‌ಡಿಎಫ್ಸಿ ಎಟಿಎಂ ಕೇಂದ್ರಕ್ಕೆ ಕ್ಲಿಯರ್ ಸೆಕ್ಯೂರ್x ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಭದ್ರತೆ ನೀಡಲಾಗಿದೆ. ಶುಕ್ರವಾರ ಬೆಳಗ್ಗೆ ಇಬ್ಬರು ಆರೋಪಿಗಳು ಎಟಿಎಂ ಕೇಂದ್ರದ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಕೆಲ ಹೊತ್ತಿನ ಬಳಿಕ ಗ್ರಾಹಕರು ಇಲ್ಲದ ವೇಳೆ ಎಟಿಎಂ ಕೇಂದ್ರ ಬಳಿ ಬಂದಿದ್ದಾರೆ.
ನಂತರ ಬಂಧಿತ ನೈರೋ ಎಟಿಎಂ ಕೇಂದ್ರದ ಒಳಗೆ ಪ್ರವೇಶಿ, ಯಂತ್ರಕ್ಕೆ ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಆರೋಪಿಯನ್ನು ಹಿಡಿದುಕೊಂಡಿದ್ದಾರೆ. ಎಟಿಎಂ ಕೇಂದ್ರದ ಹೊರಗಡೆ ನಿಂತಿದ್ದ ಮತ್ತೂಬ್ಬ ಆರೋಪಿ ಜೆಮ್ಸ್ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಭದ್ರತಾ ಸಿಬ್ಬಂದಿ ಆರೋಪಿ ನೈರೋನನ್ನು ರಾಜಾಜಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈತನಿಂದ 2 ನಕಲಿ ಎಟಿಎಂ ಕಾರ್ಡ್‌ಗಳು, 2 ಸ್ಕಿಮ್ಮಿಂಗ್ ಯಂತ್ರ, 1 ರಹಸ್ಯ ಕ್ಯಾಮೆರಾ, 1 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ರಾಮಮೂರ್ತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈತನ ವೀಸಾ ಅವಧಿ ಮುಕ್ತಾಯಗೊಂಡಿದ್ದು, ಅಕ್ರಮವಾಗಿ ವಾಸವಾಗಿದ್ದಾನೆ ಎಂದು ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಯ ಪ್ರಾಥಮಿಕ ವಿಚಾರಣೆ ವೇಳೆ ಎಟಿಎಂ ಕೇಂದ್ರಕ್ಕೆ ಬರುವ ಗ್ರಾಹಕರು ಹಣ ಡ್ರಾ ಮಾಡಲು ಬಂದು ಸ್ವೆ„ಪ್ ಮಾಡಿದಾಗ ಅದರ ಪಿನ್ ನಂಬರ್ ಟೈಪ್ ಮಾಡುತ್ತಿದ್ದಂತೆ ಈ ಸ್ಕಿಮ್ಮಿಂಗ್ ಯಂತ್ರದಲ್ಲಿ ಆ ದಾಖಲೆಗಳು ಸಂಗ್ರಹವಾಗುವಂತೆ ಸಿದ್ಧಪಡಿಸಿಕೊಂಡಿದ್ದರು. ನಂತರ ನಕಲಿ ಕಾರ್ಡ್‌ಗಳಿಗೆ ಈ ಸಂಖ್ಯೆಗಳನ್ನು ದಾಖಲಿಸಿ ಆನ್‌ಲೈನ್ ಮೂಲಕ ಹಣ ಡ್ರಾ ಮಾಡಿಕೊಳ್ಳಲು ಸಂಚು ರೂಪಿಸಿದ್ದರು ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.