Advertisement

ಖಾಸಗಿ ಆಸ್ಪತ್ರೆಗಳ ಜತೆಗಿನ ಸರ್ಕಾರದ ಮಾತುಕತೆ ವಿಫ‌ಲ

12:29 PM Jan 17, 2017 | Team Udayavani |

ಬೆಂಗಳೂರು: ಸರ್ಕಾರದ ವಿಮಾ ಯೋಜನೆಗಳ ಆರೋಗ್ಯ ಸೇವೆ ಕುರಿತಂತೆ ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವಿನ ಸಂಘರ್ಷ ಮುಂದುವರಿದಿದೆ.  ಆಸ್ಪತ್ರೆಗಳಿಗೆ ನೀಡಬೇಕಿರುವ ಬಾಕಿ ಹಣ 60 ಕೋಟಿ ರೂ.ಗಳನ್ನು ಎರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್‌ ನೀಡಿದ ಭರವಸೆ ಹೊರತಾಗಿಯೂ ಬೇಡಿಕೆಗಳು ಈಡೇರುವವರೆಗೆ ಆರೋಗ್ಯ ಸೇವೆ ಕೊಡಲು ಸಾಧ್ಯವಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಹಠ ಹಿಡಿದಿವೆ.

Advertisement

ಆಸ್ಪತ್ರೆಗಳ ಅಸಮಾಧಾನ: ವಿಧಾನಸೌಧದಲ್ಲಿ ಸೋಮವಾರ ಖಾಸಗಿ ಆಸ್ಪತ್ರೆ ಮಾಲೀಕರ ಜತೆ ಸಭೆ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್‌, ಬಾಕಿ ಹಣ ಪಾವತಿ ಹಾಗೂ ಚಿಕಿತ್ಸಾ ದರ ಪಟ್ಟಿ ಪರಿಷ್ಕರಣೆ ಕುರಿತು ಭರವಸೆ ನೀಡಿದರಾದರೂ ಖಾಸಗಿ ಆಸ್ಪತ್ರೆಗಳು ಸಮಾಧಾನಗೊಂಡಿಲ್ಲ. ಎರಡು ಸೇವೆ ಹೊರತುಪಡಿಸಿ ಉಳಿದ ಸೇವೆಗಳನ್ನು ಕೊಡುವುದಿಲ್ಲ ಎಂದು ಘೋಷಿಸಿವೆ. ಮಂಗಳವಾರ ಮತ್ತೂಂದು ಸುತ್ತಿನ ಮಾತುಕತೆ ನಡೆಯಲಿದೆ.

ಈ ಮಧ್ಯೆ ಸುದ್ದಿಗಾರರ ಜತೆ ಮಾತನಾಡಿದ ರಮೇಶ್‌ಕುಮಾರ್‌, ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೆ 35 ಕೋಟಿ ರೂ.ಸಂದಾಯವಾಗಿದೆ. ಒಂದೆರಡು ದಿನಗಳಲ್ಲಿ ಮತ್ತೆ 12.5 ಕೋಟಿ ರೂ.ನೀಡಲಾಗುವುದು. ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಿ ಇನ್ನೆರಡು ವಾರಗಳಲ್ಲಿ ಬಾಕಿ ಉಳಿಸಿಕೊಂಡಿರುವ 60 ಕೋಟಿ ರೂ.ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಸೇವಾ ದರ ಪರಿಷ್ಕರಣೆಗೆ ಸಮ್ಮತಿ: ಖಾಸಗಿ ಆಸ್ಪತ್ರೆಗಳ ಮತ್ತೂಂದು ಬೇಡಿಕೆಯಾದ ಚಿಕಿತ್ಸಾ ಸೇವಾ ಶುಲ್ಕ ದರ ಪರಿಷ್ಕರಣೆಗೆ ಸರ್ಕಾರ ಸಮ್ಮತಿಸಿದ್ದು,  ಈ ಸಂಬಂಧ ಪ್ರಧಾನ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಲಾಗುವುದು. ಎಂಟು ವರ್ಷಗಳ ಹಿಂದೆ ಸೇವಾ ಶುಲ್ಕ ದರ ನಿಗದಿ ಮಾಡಲಾಗಿದೆ. ಅದರ ಪರಿಷ್ಕರಣೆ ಅಗತ್ಯವಿರುವುದರಿಂದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ನುರಿತ ವೈದ್ಯರು ಮತ್ತು ಸರ್ಕಾರಿ ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದು, ಅವರು ಸಭೆ ನಡೆಸಿ 15 ದಿನದಲ್ಲಿ ವರದಿ ಸಲ್ಲಿಸಲಿದ್ದಾರೆ. ಈ ವರದಿ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಆರೋಗ್ಯ ಕವಚ 108 ಆ್ಯಂಬುಲೆನ್ಸ್‌ ಚಾಲಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೊಳಿಸಲು ಹಾಗೂ ಹೆಚ್ಚುವರಿ ಸಮಯದ ಭತ್ಯೆ ನೀಡಲು ಜಿವಿಕೆ ಕಂಪನಿ ಒಪ್ಪಿದೆ. ಹೀಗಾಗಿ, 108 ಆ್ಯಂಬುಲೆನ್ಸ್‌ ವಾಹನಗಳ ಚಾಲಕರು ನಡೆಸಬೇಕೆಂದಿದ್ದ ಮುಷ್ಕರ ಹಿಂದಕ್ಕೆ ಪಡೆದಿದ್ದಾರೆ ಎಂದು ಹೇಳಿದರು.

Advertisement

ಒಂದು ದಿನದ ಮಟ್ಟಿಗೆ ಉಚಿತ ಸೇವೆ ಸ್ಥಗಿತ
ಬೆಂಗಳೂರು:
ಬಿಪಿಎಲ್‌ ಕುಟುಂಬಗಳಿಗೆ ಸರ್ಕಾರಿ ವಿಮಾ ಯೋಜನೆಗಳ ಮೂಲಕ ನೀಡುತ್ತಿರುವ ಉಚಿತ ಆರೋಗ್ಯ ಸೇವೆಗಳ ಪೈಕಿ ಎರಡು ಸೇವೆಗಳನ್ನು ಹೊರತು ಪಡಿಸಿ ಇನ್ನುಳಿದ ಸೇವೆಗಳನ್ನು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಿದೆ.

 ಆರೋಗ್ಯ ಸಚಿವ ರಮೇಶ್‌ ಕುಮಾರ್‌ ಅವರೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ಬಾಕಿ ಹಣ ನೀಡುವುದು ಬಿಟ್ಟರೆ ಇತರೆ ಬೇಡಿಕೆಗಳ ಈಡೇರಿಕೆ ಸಂಬಂಧ ಸಕಾರಾತ್ಮಕ ಸ್ಪಂದನೆ ಸಿಗದ ಕಾರಣ ಒಂದು ದಿನದ ಮಟ್ಟಿಗೆ ಸೇವೆ ಸ್ಥಗಿತಗೊಳಿಸಲಾಗಿದೆ. ಮಂಗಳವಾರ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಸಭೆ ನಡೆಯಲಿದ್ದು, ಸ್ಥಗಿತಗೊಳಿಸಿರುವ ಸೇವೆಯನ್ನು ಮುಂದುವರಿಸಬೇಕೇ? ಅಥವಾ ಬೇಡವೇ? ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಮುಖ್ಯಮಂತ್ರಿ ಹರೀಶ್‌ ಸಾಂತ್ವನ ಯೋಜನೆಯಡಿ ಸೇವೆಯನ್ನು ಯಾವುದೇ ಖಾಸಗಿ ಆಸ್ಪತ್ರೆಗಳು ನಿಲ್ಲಿಸಿಲ್ಲ. ಆದರೆ, ಇನ್ನುಳಿದ ವಾಜಪೇಯಿ ಆರೋಗ್ಯಶ್ರೀ, ರಾಜೀವ್‌ ಆರೋಗ್ಯ ಭಾಗ್ಯ ಮತ್ತು ಜ್ಯೋತಿ ಸಂಜೀವಿನಿ ಯೋಜನೆಯಡಿ ಸೇವೆಗಳನ್ನು ಸ್ಥಗಿತಗೊಳಿಸಿವೆ. ಒಂದು ದಿನದ ಮಟ್ಟಿಗೆ ಸೇವೆ ಸ್ಥಗಿತಗೊಳಿಸಿದ್ದರಿಂದ ಜನರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ, ಸೇವೆ ಸ್ಥಗಿತ ಮುಂದುವರಿದ್ದಲ್ಲಿ ಉಚಿತ ಆರೋಗ್ಯ ಸೇವೆ ಸಮಸ್ಯೆಯನ್ನು ಜನರು ಎದುರಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next