ಅರಕಲಗೂಡು: ಕೋವಿಡ್-19 ಸೋಂಕಿತರ ಹೆಚ್ಚಳಕ್ಕೆ ತಾಲೂಕು ಆಡಳಿತದ ವೈಫಲ್ಯವೇ ಕಾರಣ, ಸರ್ಕಾರದ ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಕೋವಿಡ್-19 ಜಾಗೃತಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಸೋಂಕು ಸಮುದಾಯಲ್ಲಿ ಬೇರು ಬಿಟ್ಟಿರುವ ಫಲಶ್ರುತಿಯೇ ಕುಟುಂಬಗಳು ಸೋಂಕಿಗೆ ತುತ್ತಾಗುತ್ತಿರುವುದು. ಇಂತಹ ಪರಿಸ್ಥಿತಿಗೆ ಅಧಿಕಾರಿಗಳ ಅಜಾಗರೂಕತೆಯೇ ಕಾರಣ ಎಂದರು.
ತಾಲೂಕಿನಲ್ಲಿ ಸಾರ್ವಜನಿಕರು ಮನ ಬಂದತೆ ಸಾವಿರಾರು ಜನಗಳೊಂದಿಗೆ ಸಭೆ ಸಮಾರಂಭಗಳಲ್ಲಿ ಮುಂದಾಗುತ್ತಿರುವುದು, ಸಾವಿನ ಮನೆಯಲ್ಲಿ ತ್ವರಿತವಾಗಿ ಅಂತ್ಯಸಂಸ್ಕಾರಕ್ಕೆ ಮುಂದಾಗದೆ ವಿಳಂಬ ಮಾಡುತ್ತಿದ್ದರು ಅಧಿಕಾರಿಗಳು ಮಾತ್ರ ಪ್ರಶ್ನಿಸದೆ ಕಾನೂನು ಕ್ರಮ ಜರುಗಿಸದೆ ಮೌನವಾಗಿರುವುದಕ್ಕೆ ಕೋವಿಡ್ ಆರ್ಭಟ ಅಧಿಕವಾಗುತ್ತಿದೆ. ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಹಶೀಲ್ದಾರ್ ರೇಣುಕುಮಾರ ಅವರಿಗೆ ಎಚ್ಚರಿಸಿದರು.
ಕಾನೂನು ಪ್ರಕಾರ ಮದುವೆ ಸಮಾರಂಭದಲ್ಲಿ 50ಕ್ಕು ಹೆಚ್ಚು ಜನರು ಸೇರದಂತೆ ಜಾಗೃತಿವಹಿಸಿ ಸಹಜ ಸಾವುಗಳಾದರು ಅಂತ್ಯಸಂಸ್ಕಾರವನ್ನು ತ್ವರಿತವಾಗಿ ಮುಗಿಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಒಂದು ವೇಳೆ ಆದೇಶಕ್ಕೆ ಬಗ್ಗದಿದ್ದರೆ ಅಂತವರ ವಿರುದ್ಧ ಕಾನೂನುಕ್ರಮ ಜರುಗಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಗಿರೀಶ್ ಮಾತನಾಡಿ, ದಿನ ದಿನಕ್ಕೆ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ, ಈಗಾಗಲೆ 50 ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು 100 ಹಾಸಿಗೆಗೆ ಏರಿಸುವಂತೆ ಆದೇಶಿಸಿ ತಾಲೂಕಿನಲ್ಲಿ ಪ್ರತಿಯೊಬ್ಬ ಸೋಂಕಿತನ ಜೊತೆ ಸಂಪರ್ಕದಲ್ಲಿರುವವರ ಬಗ್ಗೆ ಜಾಗೃತಿವಹಿಸುವಂತೆ ತಿಳಿಸಿದರು.