Advertisement

Fadnavis; ತಾಳ್ಮೆ, ನಾಯಕತ್ವಕ್ಕೆ ನಿಷ್ಠ ಕುಶಾಗ್ರಮತಿಗೆ ಮತ್ತೆ ಹುದ್ದೆ ಒಲಿಯಿತು

04:46 PM Dec 04, 2024 | ವಿಷ್ಣುದಾಸ್ ಪಾಟೀಲ್ |

ಮಹಾರಾಷ್ಟ್ರದಲ್ಲಿ ಮಾಹಾಯುತಿ ಮೈತ್ರಿಕೂಟ ನಿರೀಕ್ಷೆ ಮೀರಿ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೇರಿದ್ದರೂ ಸಿಎಂ ಯಾರಾಗಲಿದ್ದಾರೆ ಎನ್ನುವುದು ಗೊಂದಲಕಾರಿಯಾಗಿಯೇ ಉಳಿದಿತ್ತು. ಹೆಚ್ಚು ಸ್ಥಾನ ಗೆದ್ದಿದ್ದ ಬಿಜೆಪಿಯೇ ಸಿಎಂ ಸ್ಥಾನ ತನ್ನದಾಗಿಸುವುದು ಖಚಿತವಾಗಿದ್ದರೂ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರಿಗೆ ಜಾತಿ ಲೆಕ್ಕಾಚಾರದಿಂದ ಉನ್ನತ ಹುದ್ದೆ ಕೈತಪ್ಪಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ,ತಾಳ್ಮೆ, ನಾಯಕತ್ವಕ್ಕೆ ನಿಷ್ಠೆ ತೋರಿದ ಕುಶಾಗ್ರಮತಿ, ಕಳಂಕ ರಹಿತ ನಾಯಕ ಫಡ್ನವಿಸ್ ಅವರಿಗೆ ಜಾತಿ ಲೆಕ್ಕಾಚಾರ ಮೀರಿ ಉನ್ನತ ಹುದ್ದೆ ಮೂರನೇ ಬಾರಿಗೆ ಒಲಿದು ಬಂದಿದೆ.

Advertisement

ಸಣ್ಣ ವಯಸ್ಸಿಗೆ ಕೇಸರಿ ಪಾಳಯದಲ್ಲಿ ಮುಂಚೂಣಿಯಲ್ಲಿ ನಿಂತ ಫಡ್ನವಿಸ್ ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಏರಿದ್ದು ವಿಶೇಷ. ಹಿಂದೆ ಎರಡು ಬಾರಿ ನಿರ್ವಹಿಸಿದ ಸ್ಥಾನವನ್ನು ಮತ್ತೆ ನಿರ್ವಹಿಸಲು 54 ರ ಹರೆಯದ ಅನುಭವಿ ಮತ್ತೆ ಸಿದ್ಧರಾಗಿದ್ದಾರೆ.

ರಾಜಕೀಯ ವೃತ್ತಿಜೀವನದ ಸ್ಥಿತಿಸ್ಥಾಪಕತ್ವ ಮತ್ತು ಕಾರ್ಯತಂತ್ರದ ತಂತ್ರಗಳ ಮಿಶ್ರಣದಿಂದ ಗುರುತಿಸಲ್ಪಟ್ಟಿದ್ದು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ನಿರ್ಣಾಯಕ ಪ್ರದರ್ಶನದಲ್ಲಿ ಫಡ್ನವಿಸ್ ಅವರ ತಾಳ್ಮೆ ಭಾರೀ ಪ್ರಮಾಣದಲ್ಲಿ ಕೆಲಸ ಮಾಡಿದೆ. ಅನೇಕರು ನೀವು ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿ ಯಾರು ಎಂದು ಕೇಳಿದಾಗ, ನಮ್ಮ ಮುಖ್ಯಮಂತ್ರಿ ಇವರೇ, ಏಕನಾಥ್ ಶಿಂಧೆ ಎಂದು ಹೇಳಿ ಮರಾಠ ಮತಗಳು ಮೈತ್ರಿಕೂಟದಿಂದ ತಪ್ಪಿ ಹೋಗದಂತೆ ಪ್ರಮುಖ ಪಾತ್ರ ವಹಿಸಿದ್ದರು.

ಫಡ್ನವಿಸ್ ಅವರ ರಾಜಕೀಯ ಪಯಣವು ಗಮನಾರ್ಹವಾದುದೇನೂ ಅಲ್ಲ. ಆರ್ ಎಸ್ ಎಸ್ ನಂಟು, ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ನಾಯಕನಾಗಿ ಗುರುತಿಸಿಕೊಂಡು 22 ರ ಹರೆಯದಲ್ಲೇ ಕಾರ್ಪೊರೇಟರ್ ಆಗಿ ರಾಜಕೀಯ ಆರಂಭಿಸಿ ಹಿಂತಿರುಗಿ ನೋಡಿಯೇ ಇಲ್ಲ. 27 ರ ಹರೆಯದಲ್ಲೇ ದೇಶದಲ್ಲೇ ಕಿರಿಯ ಮೇಯರ್ ಎನಿಸಿಕೊಂಡು ನಾಗ್ಪುರದ ಆಗಿ ಗಮನ ಸೆಳೆದವರು.ಪಕ್ಷದೊಳಗೆ ತಮ್ಮ ಸ್ಥಾನಮಾನವನ್ನು ಬಲಪಡಿಸಿಕೊಂಡು ಗಮನಾರ್ಹವಾಗಿ, ಶಿವಸೇನೆಯ ಮನೋಹರ್ ಜೋಶಿ ಅವರ ಬಳಿಕ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಎರಡನೇ ಬ್ರಾಹ್ಮಣ ಸಮುದಾಯದ ನಾಯಕ ಎನಿಸಿಕೊಂಡಿದ್ದಾರೆ.

Advertisement

ಮಹಾರಾಷ್ಟ್ರದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮರಾಠ ಮತಗಳು ಮತ್ತು ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಬಿಜೆಪಿ ಈ ಬಾರಿ ನಾಯಕತ್ವ ಬದಲಾವಣೆ ಮಾಡುತ್ತದೆ ಎಂಬ ಲೆಕ್ಕಾಚಾರದ ನಡುವೆ ಮತ್ತೆ ಅವಿರೋಧವಾಗಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.

2014 ರ ವಿಧಾನಸಭಾ ಚುನಾವಣೆಯ ಮುಂಚೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಬಿಜೆಪಿ ನಾಯಕ ಅಮಿತ್ ಶಾ ಅವರ ಬಲವಾದ ಬೆಂಬಲವನ್ನು ಪಡೆದ ಫಡ್ನವಿಸ್ ಅವರಿಗೆ ನಾಯಕತ್ವ ನೀಡುವ ವಿಶ್ವಾಸವನ್ನು ಒತ್ತಿಹೇಳಿದ್ದರು.”ದೇಶಕ್ಕೆ ನಾಗ್ಪುರದ ಕೊಡುಗೆ” ಎಂದು ಉಲ್ಲೇಖಿಸಿ ಫಡ್ನವಿಸ್ ಪರ ಬಲವಾದ ಸಂದೇಶ ರವಾನಿಸಿದ್ದರು.

2014 ರ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಲೆಯಲ್ಲೇ ಇದ್ದರೂ ಚುನಾವಣೆಯಲ್ಲಿ ಪಕ್ಷದ ಅಭೂತಪೂರ್ವ ವಿಜಯಕ್ಕಾಗಿ ಶ್ರೇಯಸ್ಸಿನ ಒಂದು ಭಾಗ ಆಗಿನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಫಡ್ನವಿಸ್‌ಗೆ ಸಂದಿತ್ತು.

ಜನಸಂಘ ಮತ್ತು ನಂತರದ ಬಿಜೆಪಿ ನಾಯಕ ದಿವಂಗತ ಗಂಗಾಧರ್ ಫಡ್ನವಿಸ್ ಅವರ ಪುತ್ರ, ದೇವೇಂದ್ರ ಅವರಿಗೆ ನಿತಿನ್ ಗಡ್ಕರಿ ಅವರು “ರಾಜಕೀಯ ಗುರು”. 1999 ರಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ನಂತರದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ನಿರಂತರ ಗೆಲುವು ಸಾಧಿಸಿ ಹಿಂತಿರುಗಿ ನೋಡಲೇ ಇಲ್ಲ. ನಾಗ್ಪುರ ಸೌತ್ ವೆಸ್ಟ್ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ರಾಜಕೀಯ ವಲಯದಾದ್ಯಂತದ ಅನೇಕ ನಾಯಕರಂತಲ್ಲದೆ, ಫಡ್ನವಿಸ್ ಭ್ರಷ್ಟಾಚಾರದ ಆರೋಪಗಳಿಂದ ಕಳಂಕರಹಿತರಾಗಿ ಕಂಡು ಬಂದಿದ್ದಾರೆ. ಹೋರಾಟಕ್ಕೂ ಧೈರ್ಯ ತೋರುವ ನಾಯಕನಾಗಿ ಹಿಂದಿನ ಕಾಂಗ್ರೆಸ್-ಎನ್‌ಸಿಪಿ ಸರಕಾರವನ್ನು ಮೂಲೆಗೆ ತಳ್ಳಿದ ಕೀರ್ತಿ ಫಡ್ನವಿಸ್‌ಗೆ ಅವರಿಗೆ ಸಲ್ಲುತ್ತದೆ.

2019 ರ ವಿಧಾನಸಭಾ ಚುನಾವಣೆಯ ನಂತರ ಫಡ್ನವಿಸ್ ಅನಿವಾರ್ಯವಾಗಿ ಹಿನ್ನಡೆಯನ್ನು ಅನುಭವಿಸಬೇಕಾಗಿ ಬಂತು. ಆಗಿನ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರು ಸಿಎಂ ಹುದ್ದೆ ಹಂಚಿಕೆಯ ಬಗ್ಗೆ ಚುನಾವಣ ಪೂರ್ವ ಮೈತ್ರಿಯಿಂದ ಹೊರಬಂದು ಕಾಂಗ್ರೆಸ್ ಮತ್ತು ಎನ್ ಸಿಪಿಯೊಂದಿಗೆ ಕೈಜೋಡಿಸಿದರು. ಬಿಜೆಪಿ ನಾಯಕರ “(ಮೀ ಪುನ್ಹಾ ಯೇಯೀನ್) ನಾನು ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂಬ ಘೋಷಣೆ ಗಮನ ಸೆಳೆದಿತ್ತು. ಫಡ್ನವಿಸ್ ವಿಪಕ್ಷ ನಾಯಕರಾಗಿ ಕೆಲಸ ಮಾಡಿದರು. ಅದೀಗ ಮತ್ತೆ ಕಾರ್ಯ ರೂಪಕ್ಕೆ ಬಂದಿದೆ.

ಏಕನಾಥ್ ಶಿಂಧೆ ಅವರು ಶಿವಸೇನೆಯಿಂದ ಸಿಡಿದು ಶಾಸಕರೊಂದಿಗೆ ಹೊರ ಬಂದಾಗ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷದ ನಾಯಕರ ಆದೇಶದ ಮಾತಿಗೆ ಮರು ಮಾತಾಡದೆ ಉಪಮುಖ್ಯಮಂತ್ರಿ ಹುದ್ದೆ ಒಪ್ಪಿಕೊಂಡು ಹೊಂದಾಣಿಕೆಯಲ್ಲಿ ಕೆಲಸ ಮಾಡಿದ್ದರು.

2024 ರ ಲೋಕಸಭಾ ಚುನಾವಣೆಯಲ್ಲಿ ಮಾಹಾಯುತಿ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆಯಾದ ಬೆನ್ನಲ್ಲೇ ತೀವ್ರವಾಗಿ ನೊಂದಿದ್ದ ಫಡ್ನವಿಸ್ ಡಿಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರು. ಆದರೆ, ಕೇಂದ್ರ ನಾಯಕರು ಅವರ ಮನವೊಲಿಸಿ ಹುದ್ದೆಯಲ್ಲಿ ಮುಂದುವರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ರಾಜಕೀಯವಾಗಿ ಸಕ್ರಿಯವಾಗಿರುವ ಕುಟುಂಬದಿಂದ ಬಂದವರಾಗಿದ್ದರೂ, (ತಂದೆ ಮತ್ತು ಚಿಕ್ಕಮ್ಮ ಇಬ್ಬರೂ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾಗಿದ್ದವರು) ಫಡ್ನವಿಸ್ ತಮ್ಮದೇ ಆದ ವಿಶಿಷ್ಟ ರಾಜಕೀಯ ಗುರುತನ್ನು ಮಾಡಿಕೊಂಡವರು.

ಮುಖ್ಯಮಂತ್ರಿಯಾಗಿ ಮೊದಲ ಅಧಿಕಾರಾವಧಿಯಲ್ಲಿ ಉತ್ತಮ ಆಡಳಿತ ಮತ್ತು ಪರಿಣಾಮಕಾರಿ ರಾಜಕೀಯ ತಂತ್ರಗಳ ಸಂಯೋಜನೆಯಿಂದ ಗಮನ ಸೆಳೆದಿದ್ದರು. ಮೂಲಸೌಕರ್ಯ ಯೋಜನೆಗಳನ್ನು ಚುರುಕುಗೊಳಿಸುವ ಅವರ ಪ್ರಯತ್ನಕ್ಕಾಗಿ ಪ್ರಶಂಸೆಯನ್ನು ಗಳಿಸಿದ್ದರು, ವಿಶೇಷವಾಗಿ ನಗರ ಮತದಾರರಲ್ಲಿ ಒಲವು ಗಳಿಸಲು ಯಶಸ್ವಿಯಾಗಿದ್ದರು.

ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಸಾಮಾಜಿಕವಾಗಿ ಸಕ್ರಿಯವಾಗಿದ್ದು, ಬ್ಯಾಂಕರ್, ನಟಿ, ಗಾಯಕಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ತನ್ನದೇ ಆದ ಜನಪ್ರಿಯತೆ ಹೊಂದಿದ್ದಾರೆ. ದಂಪತಿಗೆ ಓರ್ವ ಪುತ್ರಿ ಇದ್ದಾಳೆ.

ಶಿಕ್ಷಣ

ನಾಗ್ಪುರ ವಿವಿಯ ಸರಕಾರಿ ಕಾನೂನು ಕಾಲೇಜಿನಲ್ಲಿ ಕಾನೂನಿನಲ್ಲಿ ಪದವಿ ಪಡೆದಿರುವ ಫಡ್ನವಿಸ್, ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ, ಬರ್ಲಿನ್ ನ DSE-ಜರ್ಮನ್ ಫೌಂಡೇಶನ್ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ನ ವಿಧಾನಗಳು ಮತ್ತು ತಂತ್ರಗಳಲ್ಲಿ ಡಿಪ್ಲೊಮಾವನ್ನೂ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next