ಮುಂಬಯಿ, ಜು. 12: ನಟಿ ಕಂಗನಾ ರಾವತ್ ಅವರ ಕಚೇರಿ ಉರುಳಿಸುವಿಕೆಯ ವಿಷಯದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಅವರ ಮನೆಯನ್ನು ಸರಕಾರ ಏಕೆ ಉಳಿಸಿ ಕೊಂಡಿದೆ ಎಂದು ಪ್ರಶ್ನಿಸಿದ್ದಾರೆ.
ಶುಕ್ರವಾರ ಬಿಹಾರಕ್ಕೆ ತೆರಳುವ ಮೊದಲು, ಫಡ್ನವೀಸ್ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಸಂವಹನ ನಡೆಸಿದರು. ಮಹಾರಾಷ್ಟ್ರ ಸರಕಾರವು ಕಂಗನಾ ವಿರುದ್ಧ ಹೋರಾಡುವ ಬದಲು ಕೋವಿಡ್ ವಿರುದ್ಧ ಹೋರಾಡಿದ್ದರೆ ಇಷ್ಟರವರೆಗೆ ಸೋಂಕು ಹತೋಟಿಗೆ ಬರುತ್ತಿತ್ತು ಎಂದು ಟೀಕಿಸಿದ್ದಾರೆ. ನಟಿ ಕಂಗನಾ ಅವರ ಹೇಳಿಕೆ ದೊಡ್ಡ ವಿಷಯವಲ್ಲ.
ಆದರೆ ರಾಜ್ಯ ಸರಕಾರ ಅದನ್ನು ದೊಡ್ಡದಾಗಿಸಿದ್ದೀರಿ. ಅವರ ಮನೆ(ಕಚೇರಿ) ಯನ್ನು ನೆಲಸಮಗೊಳಿಸಿದವರು ಯಾರು? ಅದು ನೀವಲ್ಲವೆ ಎಂದು ಉದ್ಧವ್ ಠಾಕ್ರೆಗೆ ನೇರವಾಗಿ ಪ್ರಶ್ನಿಸಿದ್ದಾರೆ.
ಭೇಂಡಿ ಬಜಾರ್ ನಲ್ಲಿರುವ ಭೂಗತ ಪಾತಕಿ ದಾವೂದ್ ಮನೆಯನ್ನು ನೆಲಸಮಗೊಳಿಸುವ ಆದೇಶದ ಬಳಿಕವೂ, ಇದಕ್ಕಾಗಿ ಸಾಕಷ್ಟು ಮಾನವಶಕ್ತಿ ಇಲ್ಲ ಎಂದು
ನೀವು ಅಫಿಡವಿಟ್ ಸಲ್ಲಿಸಿದ್ದೀರಿ. ಕಂಗನಾ ಅವರ ಕಟ್ಟಡವನ್ನು ನೆಲಸಮಗೊಳಿಸಲು ನಿಮಗೆ ಎಲ್ಲಿಂದ ಕಾರ್ಮಿಕರು ಸಿಕ್ಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು. ನೀವು ಕಂಗನಾ ಅವರ ಮನೆ ಧ್ವಂಸ ಮಾಡಿದಷ್ಟೆ ಆಸಕ್ತಿಯನ್ನು ನೀವು ದಾವೂದ್ ಮನೆಯ ವಿಷಯದಲ್ಲಿ ಯಾಕೆ ತೋರಿಸಿಲ್ಲ ಎಂದು ಹೇಳಿದ್ದಾರೆ.
ಸಿಬಿಐ ಮತ್ತು ಎನ್ ಸಿಬಿ ತನಿಖೆಗಳ ಕುರಿತು ಮಾತನಾಡಿದ ಅವರು, ಇದು ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಸತ್ಯವನ್ನು ಹೊರಹಾಕುತ್ತದೆ ಎಂದು ಹೇಳಿದರು. ಮಾದಕ ದ್ರವ್ಯ ದಂಧೆಯನ್ನು ಬಹಿರಂಗಪಡಿಸಿದ ರೀತಿ, ಈ ಕುರಿತಂತೆ ಆಳವಾಗಿ ಅಗೆಯುವ ಆವಶ್ಯಕತೆಯಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನ್ಪೋಟಕ ಮಾಹಿತಿಗಳು ಹೊರಬರಲಿದೆ ಎಂದು ತಿಳಿಸಿದ್ದಾರೆ.