Advertisement

ರೋಡ್‌ಹಂಪ್‌-ಝೀಬ್ರಾ ಕ್ರಾಸ್‌ಗಳಲ್ಲಿ ಮಾಸಿದ ಬಣ್ಣ: ಸವಾರರಿಗೆ ಸಂಕಷ್ಟ

10:16 AM Oct 08, 2018 | |

ಮಹಾನಗರ: ಸ್ಮಾರ್ಟ್‌ ಸಿಟಿಯಾಗಿ ರೂಪುಗೊಳ್ಳುತ್ತಿರುವ ನಗರದ ಪ್ರಮುಖ ರಸ್ತೆಗಳು ಗುಂಡಿಯಿಂದ ಕೂಡಿದ್ದು, ರಸ್ತೆಯುಬ್ಬುಗಳು ಕೂಡ ಇದರಿಂದ ಹೊರತಾಗಿಲ್ಲ. ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ನಗರದ ಅನೇಕ ಕಡೆಗಳಲ್ಲಿ ರೋಡ್‌ ಹಂಪ್ಸ್‌ಗಳನ್ನು ಅಳವಡಿಸಲಾಗಿದೆ. ಆದರೆ ಇದೀಗ ಅವುಗಳಿಗೆ ಬಳಿದ ಬಣ್ಣಗಳು ಮಾಯವಾಗಿವೆ. ಝೀಬ್ರಾ ಕ್ರಾಸ್‌ ಗಳಿಗೂ ಹಾಕಿದ ಬಣ್ಣಗಳು ಕಾಣಿಸುತ್ತಿಲ್ಲ. ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ನಗರದ ಹಲವೆಡೆ ರಸ್ತೆಯುಬ್ಬುಗಳಲ್ಲಿಯೇ ಗುಂಡಿ ಬಿದ್ದಿದ್ದು, ಸವಾರರು ಸಂಕಷ್ಟದಿಂದ ವಾಹನ ಚಲಾಯಿಸುವ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ. ನಗರದ ಶಾರದಾ ವಿದ್ಯಾಲಯ, ಬೆಸೆಂಟ್‌ ಕಾಲೇಜು ಸೇರಿದಂತೆ ಪ್ರಮುಖ ವಿದ್ಯಾಸಂಸ್ಥೆಗಳ ಎದುರಿರುವ ರಸ್ತೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರೋಡ್‌ ಹಂಪ್ಸ್‌ ಗಳನ್ನು ಅಳವಡಿಸಲಾಗಿದೆ.

ವಿಪರ್ಯಾಸ ಅಂದರೆ, ಇವುಗಳಿಗೆ ಬಣ್ಣಗಳೇ ಬಳಿದಿಲ್ಲ. ಇದರಿಂದ ವಾಹನ ಸವಾರರು ಒಮ್ಮೆಲೇ ಬ್ರೇಕ್‌ ಹಾಕಿದರೆ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ನಗರದ ಉರ್ವಸ್ಟೋರ್‌, ಕೊಟ್ಟಾರ, ಕೊಟ್ಟಾರ ಚೌಕಿ, ಲಾಲ್‌ಬಾಗ್‌ ಸಹಿತ ನಗರದ ವಿವಿಧ ಕಡೆಗಳಲ್ಲಿ ರಸ್ತೆಯುಬ್ಬುಗಳಿಗೆ ಹಾಕಿದ ಬಿಳಿಯ ಬಣ್ಣಗಳು ಕಾಣದೆ ರಾತ್ರಿ ಹೊತ್ತಿನಲ್ಲಿ ಸಂಚರಿಸುವವರಿಗೆ ಅಪಾಯ ಉಂಟಾಗುವ ಸಂಭವವೂ ಇದೆ. ಅಲ್ಲದೆ, ಪಿವಿಎಸ್‌, ಬಂಟ್ಸ್‌ಹಾಸ್ಟೆಲ್‌, ಜ್ಯೋತಿ ವೃತ್ತ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಝೀಬ್ರಾ ಕ್ರಾಸಿಂಗ್‌ ಇದೆ. 

ಇವುಗಳ ಬಣ್ಣಗಳು ಮಾಸಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ. ಕೊಟ್ಟಾರ ಕ್ರಾಸ್‌, ಬಿಜೈ ಮಾರುಕಟ್ಟೆ ರಸ್ತೆ ಸಹಿತ ಮತ್ತಿತರ ಕಡೆಗಳಲ್ಲಿ ರಸ್ತೆ ಕಾಮಗಾರಿಗಾಗಿ ಮಣ್ಣನ್ನು ಅಗೆದಿದ್ದು, ಹಾಗಾಗಿ ಝೀಬ್ರಾ ಕ್ರಾಸ್‌ಗಳು ಮಣ್ಣು ಮತ್ತು ಮಳೆ ನೀರಿನಿಂದಾಗಿ ಮಾಯವಾಗಿವೆ.

ನಿಯಮ ಏನು ಹೇಳುತ್ತದೆ?
ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ಪ್ರಕಾರ ರಸ್ತೆ ಉಬ್ಬುಗಳ ಗರಿಷ್ಠ ಎತ್ತರ 12ರಿಂದ 14 ಸೆಂ.ಮೀ. ಇರಬೇಕು ಎಂಬ ನಿಯಮವಿದೆ. ಅದೇ ರೀತಿ ಅಗಲ 3.5 ಮೀಟರ್‌, 17 ಮೀ. ಸುತ್ತಳತೆ ಹೊಂದಿರಬೇಕು. ವಾಹನಗಳು 25 ಕಿ.ಮೀ. ವೇಗದಲ್ಲಿ ಸರಾಗವಾಗಿ ಸಂಚರಿಸು ವಂತಿರಬೇಕು. ಅಲ್ಲದೆ, ಎರಡು ರಸ್ತೆಗಳು ಸಂಧಿಸುವ ಜಾಗದಲ್ಲಿ 5 ಮೀ. ಹೆಚ್ಚು ದೂರದಲ್ಲಿ ಹಂಪ್‌ ಗಳು ಇರಬಾರದು.

Advertisement

ರಸ್ತೆಯಲ್ಲಿವೆ ಬೋಲ್ಟ್‌ಗಳು 
ಡಾಮರ್‌ ರಸ್ತೆಯುಬ್ಬುಗಳ ಬದಲಾಗಿ ನಗರದ ವಿವಿಧೆಡೆ ಹಾಕಿರುವ ರಂಬ್ಲಿರ್ (ರಬ್ಬರ್‌ನಿಂದ ಮಾಡಿರುವ ರಸ್ತೆಯುಬ್ಬು) ಕೂಡ ಅಲ್ಲಲ್ಲಿ ಎದ್ದು ಹೋಗಿದ್ದು, ಇದಕ್ಕೆ ಬಳಸಲಾಗಿರುವ ಬೋಲ್ಟ್ ಗಳು ಮಾತ್ರ ರಸ್ತೆಗಳಲ್ಲಿ ಉಳಿದು ಕೊಂಡಿವೆ. ಬೋಲ್ಟ್‌ಗಳಿಂದ ವಾಹನಗಳ ಚಕ್ರಗಳು ಇವುಗಳಡಿಗೆ ಸಿಲುಕಿ ಟಯರ್‌ ಪಂಕ್ಚರ್‌ಗಳಾಗುವ ಸಂಭವ ಹೆಚ್ಚಿದೆ. ರಸ್ತೆಗಳಲ್ಲಿ ಹಂಪ್ಸ್‌ ಗಳಿವೆ ಎಂದು ಸವಾರರಿಗೆ ತಿಳಿಯಲು ಅನೇಕ ಕಡೆಗಳಲ್ಲಿ ಸೂಚನ ಫಲಕಗಳಿಲ್ಲ. ಅಷ್ಟೇ ಅಲ್ಲದೆ, ರೋಡ್‌ ಉಬ್ಬುಗಳಿಗೆ ಯಾವುದೇ ಅಳತೆಗೋಲು ಇಲ್ಲ. ಏಕೆಂದರೆ ಒಂದೊಂದು ಕಡೆ ಒಂದೊಂದು ತರಹದ ರಸ್ತೆ ಉಬ್ಬುಗಳಿವೆ. 

ಶೀಘ್ರ ಕ್ರಮ
ನಗರದ ಅನೇಕ ಕಡೆಗಳಲ್ಲಿರುವ ರಸ್ತೆ ಉಬ್ಬುಗಳಲ್ಲಿ ಬಣ್ಣ ಮಾಸಿದ್ದು, ಸದ್ಯದಲ್ಲಿಯೇ ಬಣ್ಣ ಬಳಿಯಲಾಗುವುದು. ಮತ್ತೂ ಕೆಲವೆಡೆ ಫೈಬರ್‌ ರೋಡ್‌ ಹಂಪ್ಸ್‌ಗಳು ತುಂಡಾಗಿದ್ದು, ಅವುಗಳನ್ನು ತೆರವುಗೊಳಿಸಿದ್ದೇವೆ. ಶೀಘ್ರ ಪಾಲಿಕೆ ಜತೆ ಚರ್ಚಿಸಿ ರಸ್ತೆ ಉಬ್ಬು ನಿರ್ಮಿಸುತ್ತೇವೆ.
ಮಂಜುನಾಥ ಶೆಟ್ಟಿ,
  ಎಸಿಪಿ ಟ್ರಾಫಿಕ್‌ ಮಂಗಳೂರು

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next