ಕೊರಟಗೆರೆ: ರಾಜಕಾಲುವೆ ಒತ್ತುವರಿ ಭೂಮಿಯಲ್ಲಿ ಅನಧಿಕೃತವಾಗಿ ಪುಡ್ ಪ್ರಾಡೆಕ್ಟ್ ಫ್ಯಾಕ್ಟರಿ ನಿರ್ಮಿಸ ಲಾಗಿದ್ದು, ಅಲ್ಲದೇ ಫ್ಯಾಕ್ಟರಿಯ ಕಲುಷಿತ ನೀರು ಶೇಖರಣೆಗೆ ಬೃಹತ್ ಕಟ್ಟೆ ನಿರ್ಮಿಸಲಾಗಿದೆ. ಇಲ್ಲಿಂದ ಕಲುಷಿತ ನೀರು ರಾಜಕಾಲುವೆ ಮೂಲಕ ಮಲ್ಲೇಶಪುರ ಕೆರೆಗೆ ಹರಿಯುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಮಲ್ಲೇಶಪುರ ಕೆರೆ ನೀರಿನ ಮೂಲವಾದ ನವೀಲುಕುರಿಕೆ ಬೆಟ್ಟದಿಂದ ಬರುವ ಮಳೆ ನೀರಿನ ರಾಜಕಾಲುವೆ ಒತ್ತುವರಿ ಮಾಡಿಕೊಂಡ ಫ್ಯಾಕ್ಟರಿ ಮಾಲೀಕರು ಸುತ್ತಲೂ ಕಾಂಪೌಂಡು ನಿರ್ಮಾಣ ಮಾಡಿದ್ದಾರೆ. ಕಟ್ಟೆಯೊಳಗಿನ ಕಲುಷಿತ ನೀರಿನ ಜೊತೆ ವಿಷಕಾರಿ ಅನಿಲ ರಾಜಕಾಲುವೆ ಮೂಲಕ ಮಲ್ಲೇಶಪುರ ಕೆರೆಗೆ ಸೇರುತ್ತಿದ್ದು, ಸುತ್ತಮುತ್ತಲಿನ ಪರಿಸರ ದುರ್ವಾ ಸನೆಯಿಂದ ಕೂಡಿದೆ. ಕಸಬಾ ಹೋಬಳಿ ಹಂಚಿಹಳ್ಳಿಯ ಜಿ.ನಾಗೇ ಹಳ್ಳಿ ಸಮೀಪ ಕಳೆದ 2003-04ರಲ್ಲಿ ಬೆಂಗಳೂರಿನ ಮಧುಸೂದನ್ ಎಂಬುವರಿಗೆ ನ್ಯಾಚುರಲ್ ಫುಡ್ ಕಾರ್ಖಾನೆ ಪ್ರಾರಂಭಿಸಲು ಮೈಸೂರಿನ ಕಾರ್ಖಾನೆಗಳ ಸಹಾಯಕ ನಿರ್ದೇಶಕರು ಷರತ್ತು ಬದ್ಧ ಅನುಮತಿ ನೀಡಿದ್ದಾರೆ. 2003ರಿಂದ 2012ರ ವರೆಗೆ ಕಾರ್ಖಾನೆ ಪರವಾನಗಿ ನವೀಕರಣ ನಡೆದಿದೆ. ಅ ನಂತರ ನವೀಕರಣ ಮಾಡಿರುವ ದಾಖಲೆ ಗ್ರಾಪಂ ಬಳಿ ಲಭ್ಯವಿಲ್ಲ.
ಕಾರ್ಮಿಕರಿಗಿಲ್ಲ ಸುರಕ್ಷತೆ: ರೈತರು ಬೆಳೆಯುವ ಸೌತೆಕಾಯಿಯಿಂದ ವಿವಿಧ ಬಗೆಯ ಆಹಾರ ಉತ್ಪನ್ನ ತಯಾರಿಸಲು ಕಾರ್ಖಾನೆಯಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರಿಗೆ ಭದ್ರತೆಯಿಲ್ಲ. ಆ್ಯಸಿಡ್, ಕೆಮಿಕಲ್ ಮತ್ತು ಕಲ್ಮಶ ಬರಿಗೈಯಲ್ಲಿ ಮುಟ್ಟಿ ಕೆಲಸ ಮಾಡಬೇಕಾಗಿದೆ. ದುರ್ವಾಸನೆ ಬೀರುವ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ಪ್ರಥಮ ಚಿಕಿತ್ಸಾ ವ್ಯವಸ್ಥೆ ಜೊತೆಗೆ ಭದ್ರತೆಯೂ ಮರೀಚಿಕೆಯಾಗಿದೆ.
ನೊಟೀಸ್‌ಗೆ ಕ್ಯಾರೆ ಎನ್ನದ ಮಾಲೀಕ: ಮಲ್ಲೇಶಪುರ ಕೆರೆಗೆ ಫ್ಯಾಕ್ಟರಿ ನೀರು ಬೀಡದಂತೆ ಹಂಚಿಹಳ್ಳಿ ಗ್ರಾಪಂ ಪಿಡಿಒ ಮತ್ತು ಕೊರಟಗೆರೆ ತಹಶೀಲ್ದಾರ್ ಮಾಲೀಕರಿಗೆ ನೊಟೀಸ್ ನೀಡಿದ್ದಾರೆ. ನೊಟೀಸ್‌ಗೆ ಕಾರ್ಖಾನೆ ಮಾಲೀಕ ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ. ಆರೋಗ್ಯ, ಕಂದಾಯ ಮತ್ತು ಕಾರ್ಮಿಕ ಇಲಾಖೆಗೂ ಕಾರ್ಖಾನೆಗೂ ಯಾವುದೇ ಸಂಬಂಧ ವಿಲ್ಲವಂತೆ. ಇನ್ನೂ ಜಿಲ್ಲಾಡಳಿತ, ಪರಿಸರ ಮತ್ತು ಯೋಜನಾ ಇಲಾಖೆಗೆ ಕಾರ್ಖಾನೆ ಮಾಹಿತಿಯೇ ಇಲ್ಲದಂತಿದೆ.
ಭೂ ಪರಿವರ್ತನಾ ಜಮೀನಿನಲ್ಲಿ ಸ್ಥಾಪಿಸಲಾಗಿರುವ ಕಾರ್ಖಾನೆಯಿಂದ ಹೊರಬರುವ ಹೊಗೆ, ಅನಿಲ ಮತ್ತು ಕಲ್ಮಶ ಪರಿಣಾಮಕಾರಿ ಆಗಿ ತಡೆಗಟ್ಟಿ ಸಾರ್ವಜನಿಕರ ಆರೋಗ್ಯಕ್ಕೆ ಹಾನಿ ಮತ್ತು ಪರಿಸರ ಮಾಲಿನ್ಯ ಆಗದಂತೆ ತುರ್ತು ಕ್ರಮ ಕೈಗೊಳ್ಳದಿರುವ ಬಗ್ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆಗಳು ತಕ್ಷಣ ಕಾರ್ಖಾನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ
ಪದ್ಮನಾಭ್ ಎನ್.