Advertisement

ರೈತರಿಗೆ ಸೌಲಭ್ಯ ತಲುಪಿಸಲು ಸೂಚನೆ

01:41 PM Mar 08, 2017 | |

ಧಾರವಾಡ: ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗಬೇಕಿರುವ ಸೌಲಭ್ಯಗಳನ್ನು ತಲುಪಿಸುವಲ್ಲಿ ಬ್ಯಾಂಕ್‌ ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ ಕುಲಕರ್ಣಿ ಮತ್ತು ಸಂಸದ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತ ಪಡಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ನಡೆದ 2016-17ನೇ ಸಾಲಿನ ಮೂರನೇ ತ್ತೈಮಾಸಿಕ  ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

Advertisement

ಸಚಿವ ವಿನಯ್‌ ಕುಲಕರ್ಣಿ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ರೈತನ ಹಿತ ಕಾಯುವ ಹೊಣೆ ಬ್ಯಾಂಕುಗಳ  ಮೇಲಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಸಂಸದ ಪ್ರಹ್ಲಾದ ಜೋಶಿ, ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದಲ್ಲಿ ಬ್ಯಾಂಕುಗಳ ವರ್ತನೆ ಬಗ್ಗೆ ತಮಗೂ ಸಹಮತವಿಲ್ಲ.

ಆರ್‌ಬಿಐ  ನಿಯಮಗಳು ಯೋಜನೆಗಳ ಅನುಷ್ಠಾನಕ್ಕೆ ವ್ಯತ್ಯಯ ಉಂಟು ಮಾಡುತ್ತಿದ್ದರೆ ಅದನ್ನು ಸರಿಪಡಿಸಲು ರಾಜ್ಯಮಟ್ಟದ ಬ್ಯಾಂಕರುಗಳ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು, ಅದರ ಪ್ರತಿಯನ್ನು ಕಳುಹಿಸಿಕೊಟ್ಟರೆ ಕೇಂದ್ರ ಸರಕಾರದ ಮಟ್ಟದಲ್ಲಿ ಚರ್ಚಿಸಿ ಆ ನಿಯಮಗಳ ಬದಲಾವಣೆಗೆ ಆರ್‌ಬಿಐಗೆ ಮನವಿ  ಸಲ್ಲಿಸಲು ಪ್ರಯತ್ನಿಸಲಾಗುವುದು ಎಂದರು. 

ಈ ಬಾರಿಯ ಎಸ್‌ಎಲ್‌ಬಿಸಿ ಸಭೆಗೆ ಆಹ್ವಾನ ನೀಡಿದರೆ ಖುದ್ದಾಗಿ ಭಾಗವಹಿಸುವುದಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಮಣಿವಣ್ಣನ್‌ ಅವರಿಗೆ ಸಂಸದ ಜೋಶಿ ಹೇಳಿದರು. ರೈತರ ಬೆಳೆವಿಮೆ ಹಣ, ವೃದ್ಧಾಪ್ಯ, ವಿಧವಾ, ವಿಕಲಚೇತನರ ವೇತನಗಳು ಹಾಗೂ ನರೇಗಾ ಕೂಲಿ  ಹಣವನ್ನು ಅವರ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳುತ್ತಿರುವುದನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಎಸ್‌.ಶಿವಳ್ಳಿ, ಶಾಸಕ ಎನ್‌. ಎಚ್‌.ಕೋನರಡ್ಡಿ ಅವರು ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ಸೂಚಿಸಿದರು. 

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಈ ಬೇಸಿಗೆಯ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ  ನೀರಿನ ಅಭಾವ ನೀಗಿಸಲು ಸರಕಾರದ ಬಳಿ ಸಾಕಷ್ಟು ಹಣದ ಲಭ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಇದೇ ವೇಳೆ ಸ್ಪಷ್ಟಪಡಿಸಿದರು.  ನೀರು ಪೂರೈಕೆಗೆ ಹಣದ ಕೊರತೆಯಿಲ್ಲ. ಕೊಳವೆ ಬಾವಿಗಳು ವಿಫಲವಾದರೆ ಹತ್ತಿರದ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ನೀರೊದಗಿಸಲಾಗುತ್ತಿದೆ.

Advertisement

ಸ್ಥಳೀಯ ಮಟ್ಟದಲ್ಲಿನ ಚುನಾಯಿತ ಪ್ರತಿನಿಧಿಗಳು ಕುಡಿಯುವ ನೀರು ಪೂರೈಕೆಯಲ್ಲಿ ಕಂಡು ಬರುವ ಸಮಸ್ಯೆಗಳನ್ನು ತಕ್ಷಣವೇ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು  ಪರಿಹರಿಸಿಕೊಳ್ಳಬೇಕು ಎಂದರು. ಸಾರ್ವಜನಿಕರು ನೀರನ್ನು ಅಗತ್ಯಕ್ಕೆ ಅನುಸಾರವಾಗಿ ನೀರನ್ನು ಮಿತವಾಗಿ ಬಳಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ಜಾಗೃತಿ ಹಮ್ಮಿಕೊಳ್ಳಬೇಕು.

ನೀರಿನ ಸದುಪಯೋಗ  ಮತ್ತು ಪೋಲು ತಡೆಯುವ ನಿಟ್ಟಿನಲ್ಲಿ ಗ್ರಾಮೀಣ ಭಾಗಗಳಲ್ಲಿ ನಿರಂತರ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕಾಂಕ್ರೀಟ್‌  ರಸ್ತೆಗಳಲ್ಲಿಯೇ ಬಟ್ಟೆ ತೊಳೆದು ಸಾಕಷ್ಟು ನೀರು ವ್ಯರ್ಥವಾಗಿ ಹರಿದು ಹೋಗುವ  ದೃಶ್ಯಗಳು ಅಲ್ಲಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿವೆ. ಈ ಬಗ್ಗೆ ವಿಶೇಷ ಜಾಗೃತಿ ಮೂಡಿಸಬೇಕು ಎಂದರು. 

ಮಹಾತ್ಮಾಗಾಂಧಿ ರಾಷ್ಟೀಯ ಗ್ರಾಮೀಣ  ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಬೇಕು. ಬರದ ಹಿನ್ನೆಲೆಯಲ್ಲಿ ಜನರಿಗೆ ಬೇರೆ ಯಾವುದೇ ರೀತಿಯ  ಉದ್ಯೋಗಗಳಿಲ್ಲ. ಅವರು ನರೇಗಾ ಯೋಜನೆಯನ್ನೇ ಅವಲಂಬಿಸಿದ್ದಾರೆ. ಬದುವು ನಿರ್ಮಾಣ, ಸೇತುವೆ, ಹೊಲಗಳಿಗೆ ರಸ್ತೆ ನಿರ್ಮಾಣದಂತಹ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಿ ಯೋಜನೆಯಲ್ಲಿ ಪ್ರಗತಿ  ಸಾಧಿಸಬೇಕು ಎಂದು ಸಚಿವ ವಿನಯ್‌ ಸೂಚಿಸಿದರು.

ರೇಷ್ಮೆ ಇಲಾಖೆ ಜಿಲ್ಲೆಯಲ್ಲಿ  ಸಾಧಿಸಿರುವ ಪ್ರಗತಿಯನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವ ಅಗತ್ಯವಿದೆ. ಈ  ಸಂದರ್ಭದಲ್ಲಿ ನಾನು ಕೂಡ ಹಾಜರಾಗಿ ಜಿಲ್ಲೆಯಲ್ಲಿನ ರೇಷ್ಮೆ ಅಭಿವೃದ್ಧಿಯನ್ನು ವೀಕ್ಷಿಸುತ್ತೇನೆ ಎಂದು ವಿಧಾನ ಪರಿಷತ್‌  ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ವಿಧಾನ ಪರಿಷತ್‌ ಸದಸ್ಯರಾದ ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ ಮೀನಾ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆರ್‌.ಸ್ನೇಹಲ್‌ ಇದ್ದರು.     

Advertisement

Udayavani is now on Telegram. Click here to join our channel and stay updated with the latest news.

Next