ಕೊಪ್ಪಳ: ತೀವ್ರತರನಾದ ಅಂಗವಿಕಲರ ಆರೈಕೆಯಲ್ಲಿ ತೊಡಗಿರುವ ಆರೈಕೆದಾರರಿಗೆ ನರೇಗಾದಡಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಈಚೆಗೆ ಬೆಳಕು ಆರೈಕೆದಾರರ ಸ್ವ ಸಹಾಯ ಸಂಘದಿಂದ ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಲಾಯಿತು.
ಆರೈಕೆದಾರರು ಸಂಕಷ್ಟದ ಜೀವನ ಸಾಗಿಸುತ್ತಿದ್ದು, ನರೇಗಾ ಯೋಜನೆಯಡಿ ವಿಶೇಷ ಸೌಲಭ್ಯ ಕಲ್ಪಿಸುವಂತೆ ಮತ್ತು 15ನೇ ಹಣಕಾಸು ಆಯೋಗದ ವಿಕಲಚೇತನರ ಶೇ. 5 ಅನುದಾನದಲ್ಲಿ ಗುಂಪು ಜೀವನೋಪಾಯ ಚಟುವಟಿಕೆಗೆ ಸಹಾಯಧನ ನೀಡಬೇಕು. ಗ್ರಾಮದಲ್ಲಿ ಕಳೆದ 6 ವರ್ಷದಿಂದ ಸಂಘವು ಅಂಗವಿಕಲರ ಹಾಗೂ ಆರೈಕೆದಾರರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ತೊಡಗಿದ್ದು, ಬುದ್ಧಿಮಾಂದ್ಯತೆ, ಮೆದುಳು ಅರ್ಧಾಂಗವಾಯು, ಮಾನಸಿಕ ಅಸ್ವಸ್ಥತೆ, ಬೆನ್ನುಹುರಿ ಅಪಘಾತ ಇತ್ಯಾದಿ ತೀವ್ರತರ ಅಂಗವಿಕಲರ ಆರೈಕೆಯಲ್ಲಿ ತೊಡಗಿರುವ ಆರೈಕೆದಾರರು ದಿನದ 24 ಗಂಟೆ ಆರೈಕೆಯಲ್ಲಿ ತೊಡಗುವುದರಿಂದ ಮನೆಯಲ್ಲೇ ಸಮಯ ಕಳೆಯಬೇಕಾಗಿದೆ.
ಇದರಿಂದ ಹೊರಗೆ ಹೋಗಿ ದುಡಿಮೆಯಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ. ತಮ್ಮ ಅಂಗವಿಕಲರ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ನಿರಂತರ ಆರೈಕೆಯ ಹೊರೆಯಿಂದ ಆರೈಕೆದಾರರು ಸ್ವತಃ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಮ್ಮ ನಂತರ ಇವರ ಆರೈಕೆ ಹೇಗೆ? ಎಂಬ ಆತಂಕ ಕಾಡುತ್ತಿದೆ. ಸಭೆ ಸಮಾರಂಭಗಳಲ್ಲಿ ಭಾಗಿಯಾಗಲು ಸಾಧ್ಯವಾಗದೇ ಸಾಮಾಜಿಕವಾಗಿ ದೂರ ಉಳಿದಿದ್ದಾರೆ.
ಆದ್ದರಿಂದ ಆರೈಕೆದಾರರ ಜೀವನ ಆರ್ಥಿಕವಾಗಿ ಸುಧಾರಿಸಲು ನರೇಗಾ ಯೋಜನೆಯಡಿ ಆರೈಕೆದಾರರನ್ನು ವಿಶೇಷ ವರ್ಗವಾಗಿ ಆದ್ಯತೆ ನೀಡಿ, ಆರೈಕೆ ಸೇವೆಯನ್ನೇ ಒಂದು ಉದ್ಯೋಗವಾಗಿ ಪರಿಗಣಿಸಿ ವರ್ಷದಲ್ಲಿ ಕನಿಷ್ಟ 50 ದಿನಗಳ ಕೂಲಿ ನೀಡಬೇಕು ಹಾಗೂ 15ನೇ ಹಣಕಾಸು ಆಯೋಗದ ವಿಕಲಚೇತನರ ಶೇ. 5 ಅನುದಾನದಲ್ಲಿ ಆರೈಕೆದಾರರ ಸಂಘಕ್ಕೆ ಗುಂಪು ಜೀವನೋಪಾಯ ಚಟುವಟಿಕೆ ಕೈಗೊಳ್ಳಲು ಸಹಾಯಧನ ನೀಡುವ ಮೂಲಕ ನೆರವಾಗಬೇಕೆಂದು ಪಿಡಿಒ ಅಶೋಕ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಸದಸ್ಯರಾದ ಬಾಳಮ್ಮ ಮಕಾಳಿ, ಶಿವಲಿಂಗಮ್ಮ ಕಲ್ಲೂರು, ಸಂಗಮ್ಮ ಶಾಸ್ತ್ರೀಮಠ, ಅನ್ನಪೂರ್ಣ ಪೊಲೀಸಪಾಟೀಲ್, ಮಂಜುಳಾ ಪೊಲೀಸಪಾಟೀಲ್ ಸೇರಿ ಇತರರು ಪಾಲ್ಗೊಂಡಿದ್ದರು.