Advertisement

ಸೌಲಭ್ಯ ವಂಚಿತ ದಲಿತ ಕಾಲೋನಿ

03:02 PM Dec 07, 2019 | Suhan S |

ಬರಗೂರು: ಹುಲಿಕುಂಟೆ ಹೋಬಳಿ ದೊಡ್ಡಬಾಣಗೆರೆ ಗ್ರಾಮದ ದಲಿತ ಕಾಲೋನಿಯ ಜನತೆ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದರೂ ಸಂಬಂಧ ಪಟ್ಟವರು ಗಮನಹರಿಸದಿರುವುದರಿಂದ ಇಲ್ಲಿನ ನಿವಾಸಿಗಳ ಜೀವನ ದುಸ್ತರವಾಗಿದೆ.

Advertisement

ಕಾಲೋನಿಯಲ್ಲಿ ಶೌಚಗೃಹ ಮತ್ತು ಸ್ನಾನಗೃಹ ಇಲ್ಲದೇ ಅಂಗಳದ ಒಂದು ಮೂಲೆಯಲ್ಲಿ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ. ಇಕ್ಕಟ್ಟಾದ ಸಂದಿ ಗೊಂದಿಗಳು, ಗಲ್ಲಿಗಳು, ಅಂಗೈಯಷ್ಟು ಅಗಲದ ಮನೆಗಳಲ್ಲಿ ನಾಲ್ಕಾರು ಸಂಸಾರಗಳ ಜೀವನ ನಿರ್ವಹಣೆ ಇಲ್ಲಿನವರ ಪರಿಸ್ಥಿತಿಯಾಗಿದೆ. ಹುಲಿಕುಂಟೆ ಹೋಬಳಿ ತಾಲೂಕಿನ ಮುಖ್ಯ ರಾಜಕೀಯ ಕೇಂದ್ರವಾಗಿದ್ದು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಆಡಳಿತ ಎಲ್ಲವೂ ಇದ್ದರೂ, ಒಂದು ಕೇರಿಯ ಉದ್ಧಾರ ಆಗಿಲ್ಲ. ಜನಪ್ರತಿನಿಧಿಗಳು ದಲಿತ ನಿವಾಸಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.

ಅವ್ಯವಸ್ಥೆ ಆಗರ: ಕೇರಿಯಲ್ಲಿ ಸುಮಾರು 120 ಮನೆ ಗಳಿದ್ದು, 400ಕ್ಕೂ ಹೆಚ್ಚಿನ ಜನ ಸಂಖ್ಯೆ ಇದೆ. ಮನೆಗಳ ನಡುವೆ ಗಲ್ಲಿ ಮಾದರಿ ರಸ್ತೆ ಇದ್ದರೆ, ಕೆಲವೆಡೆ ದ್ವಿಚಕ್ರ ವಾಹನ ಓಡಾಡುವುದೂ ದುಸ್ತರ ಎನ್ನುವಷ್ಟು ಕಿರಿದಾಗಿದೆ. ಇಲ್ಲಿನ ಬಹುತೇಕ ಮನೆಗಳಲ್ಲಿ ಸ್ನಾನಗೃಹವೇ ಇಲ್ಲ. ಇನ್ನು ಶೌಚಗೃಹ ಊಹಿಸಲೂ ಆಗದ ಸಂಗತಿ. ಪುರುಷರು ಹಗಲಿನಲ್ಲೇ ರಸ್ತೆ ಪಕ್ಕ ಸ್ನಾನ ಮಾಡುತ್ತಾರೆ.ಆದರೆ ಹೆಂಗಸರು ಸ್ನಾನ ಮಾಡಬೇಕೆಂದರೆ ರಾತ್ರಿ ಆಗುವವರೆಗೆ ಕಾಯಬೇಕು. ತಾತ್ಕಾಲಿಕವಾಗಿ ನಿರ್ಮಿಸಿಕೊಳ್ಳುವ ಸ್ನಾನಗೃಹಗಳಲ್ಲಿ ಕತ್ತಲಿನಲ್ಲಿ ಸ್ನಾನ ಮಾಡಬೇಕು. ಅದರಲ್ಲೂ ಒಂದು ಮನೆಯವರು ಮಾಡಿದ ಸ್ನಾನದ ನೀರು ಮತ್ತೂಂದು ಮನೆ ಮುಂಭಾಗಕ್ಕೆ ಹೋಗುವುದು ಸಾಮಾನ್ಯ. ಕೆಲವರು ಮನೆ ಮುಂದೆ ಗುಂಡಿ ನಿರ್ಮಿಸಿ ಸ್ನಾನದ ನೀರು ತುಂಬಿದ ಬಳಿಕ ಬಕೆಟ್‌ನಲ್ಲಿ ಸಂಗ್ರಹಿಸಿ ದೂರಕ್ಕೆ ಒಯ್ದು ಸಾಗಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಹಂಚಿಕೆಯಾಗದ ನಿವೇಶನ: ಕಾಲೋನಿಯ ಜನರ ಸಮಸ್ಯೆ ನಿವಾರಿಸುವ ಸಲುವಾಗಿ ಮಾಜಿ ಸಚಿವ ಜಯಚಂದ್ರ, ನಿವೇಶನ ಗಳಿಗೆ ಸ್ಥಳ ಗುರುತಿಸಿ, ಲೇಔಟ್‌ ಯೋಜನೆ ರೂಪಿಸಿದ್ದರು. ಆದರೆ ರಾಜಕೀಯ ಕಾರಣಗಳಿಂದ ವಸತಿ ಹೀನರಿಗೆ ಅದನ್ನು ಹಂಚಲಾಗಿಲ್ಲ. ನಿವೇಶನಗಳ ಕಡತ ತಾಲೂಕು ಪಂಚಾಯಿತಿ ಮಟ್ಟಕ್ಕೆ ಹೋಗಿ ವಾಪಸ್‌ ಬಂದಿದೆ. ಕಾರಣ ಕೇಳಿದರೆ ರಾಜೀವ್‌ಗಾಂಧಿ ವಸತಿ ನಿಗಮ ಸ್ಥಗಿತಗೊಂಡಿದೆ ಎನ್ನುತ್ತಾರೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಎಸ್‌.ಚಂದ್ರಪ್ಪ.

 

Advertisement

-ವೀರಭದ್ರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next