Advertisement

ಅವಳಿನಗರ ಸೌಲಭ್ಯಗಳ ಸಮೀಕ್ಷೆ ಅಭಿಯಾನ

10:28 AM Feb 04, 2020 | Suhan S |

ಹುಬ್ಬಳ್ಳಿ: ರಾಷ್ಟ್ರೀಯ ನೀತಿಗೆ ಪೂರಕವಾದ ಅಂಶ ಸಂಗ್ರಹ ಹಾಗೂ ವಿವಿಧ ಸೌಲಭ್ಯಗಳು ಯಾವ ಮಟ್ಟದಲ್ಲಿವೆ ಎಂಬುದನ್ನು ನೇರವಾಗಿ ನಾಗರಿಕರಿಂದಲೇ ಪಡೆಯುವ ನಿಟ್ಟಿನಲ್ಲಿ ಅವಳಿನಗರದಲ್ಲಿ ಫೆ. 1ರಿಂದ 29ರ ವರೆಗೆ ಸಮೀಕ್ಷಣೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಸೌಲಭ್ಯಗಳ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ ಮಂಡನೆಗೆ ಮುಂದಾಗಬೇಕೆಂದು ಹು.ಧಾ. ಸ್ಮಾರ್ಟ್‌ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್‌ ಸಿಟಿ ಯೋಜನೆಗೆ ಒಳಪಟ್ಟ ಮಹಾನಗರಗಳಲ್ಲಿ ನಾಗರಿಕ ಸೌಲಭ್ಯಗಳ ವಸ್ತುಸ್ಥಿತಿ ಏನಿದೆ ಎಂಬುದನ್ನು ನೇರವಾಗಿ ನಾಗರಿಕರಿಂದಲೇ ಪಡೆಯಲು ಕೇಂದ್ರ ಸರಕಾರ ಮುಂದಾಗಿದೆ. ಇದು ಸಂಪೂರ್ಣವಾಗಿ ಆನ್‌ಲೈನ್‌ ಮೂಲಕ ಮಾಹಿತಿ ನೀಡಬಹುದಾದ ಪ್ರಕ್ರಿಯೆಯಾಗಿದೆ. ನಾಗರಿಕರು ಮೊಬೈಲ್‌ ಆ್ಯಪ್‌ ಹಾಗೂ ವೆಬ್‌ಸೈಟ್‌ ಮೂಲಕ ಅನಿಸಿಕೆ, ಮಾಹಿತಿ ನೀಡಬಹುದಾಗಿದೆ. ಇದಕ್ಕಾಗಿ ಸುಮಾರು 23 ಪ್ರಶ್ನಾವಳಿಗಳನ್ನು ಸಿದ್ಧಪಡಿಸಲಾಗಿದೆ ಎಂದರು.

ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ, ಮನರಂಜನೆ, ಸಾರಿಗೆ, ಜೀವನ ಗುಣಮಟ್ಟ, ಸುರಕ್ಷತೆ, ತ್ಯಾಜ್ಯ ಸಂಗ್ರಹ, ಗುಣಮಟ್ಟದ ವಿದ್ಯುತ್‌ ಪೂರೈಕೆ, ಬ್ಯಾಂಕ್‌, ಎಟಿಎಂ ಸೌಲಭ್ಯ ಇನ್ನಿತರ ವಿಷಯಗಳ ಕುರಿತಾಗಿ ಮಾಹಿತಿ ನೀಡಬೇಕಾಗಿದೆ ಎಂದು ಹೇಳಿದರು.

ಕೇಂದ್ರ ಸರಕಾರ ವಿವಿಧ ಇಲಾಖೆಗಳಿಂದ ಸೌಲಭ್ಯಗಳ ಕುರಿತು ಎಲ್ಲ ರೀತಿಯ ಮಾಹಿತಿಯನ್ನು ತರಿಸಿಕೊಂಡಿದೆ. ನಾಗರಿಕರು ನೀಡುವ ಮಾಹಿತಿ, ಅನಿಸಿಕೆಗಳನ್ನು ಅಧಿಕಾರಿಗಳು ನೀಡಿದ ಮಾಹಿತಿಗೆ ತಾಳೆ ಹಾಕಲಿದ್ದು, ವ್ಯತ್ಯಾಸವಿದ್ದರೆ ಅದರ ಪರಿಶೀಲನೆ ಹಾಗೂ ಸರಿಪಡಿಸಲು ಸೂಚನೆ ನೀಡಲಿದೆ. ಇದೊಂದು ಮಹತ್ವದ ಸಮೀಕ್ಷೆ ಆಗಲಿದ್ದು, ನಾಗರಿಕರು ಸ್ವಯಂಪ್ರೇರಿತರಾಗಿ ಮಾಹಿತಿ ನೀಡಬೇಕು. ವೆಬ್‌ಸೈಟ್‌ ಇಲ್ಲವೆ ಮೊಬೈಲ್‌ ಆ್ಯಪ್‌ನಲ್ಲಿ ಸುಲಭ ಹಾಗೂ ಕೆಲವೇ ನಿಮಿಷಗಳಲ್ಲಿ ಮಾಹಿತಿ ನೀಡಬಹುದಾಗಿದೆ ಎಂದರು.

ಹು.ಧಾ. ಸ್ಮಾರ್ಟ್‌ ಸಿಟಿ ಯೋಜನೆ ವಿಶೇಷಾಧಿಕಾರಿ ಎಸ್‌.ಎಚ್‌. ನರೇಗಲ್ಲ ಮಾತನಾಡಿ, ಸಮೀಕ್ಷೆ ಅಭಿಯಾನ ಜಾಗೃತಿ ಹಾಗೂ ಪಾಲುದಾರಿಕೆ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಿಟಿಜನ್‌ ಫೋರಂ, ಎನ್‌ಜಿಒ, ಎಂಬಿಎ ಕಾಲೇಜುಗಳು, ದೇಶಪಾಂಡೆ ಪ್ರತಿಷ್ಠಾನದ ಲೀಡ್‌, ವಿವಿಧ ಅಸೋಸಿಯೇಶನ್‌ ಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಸಮೀಕ್ಷಾ ಅಭಿಯಾನದಲ್ಲಿ ಪಾಲುದಾರರಾಗಲು ಅನೇಕರು ಒಪ್ಪಿದ್ದಾರೆ. ಪಾಲಿಕೆ ಎಲ್ಲ ವಲಯ ಕಚೇರಿಗಳು ಸಹ ಇದಕ್ಕೆ ಸಹಾಯ ಮಾಡಲಿವೆ. ಪ್ರತಿ ವಾರ್ಡ್‌ವಾರು ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದರು. ಮಹಾನಗರ ಪಾಲಿಕೆ ಅಧೀಕ್ಷಕ ಎಂಜಿನಿಯರ್‌ ತಿಮ್ಮಪ್ಪ ಇನ್ನಿತರರು ಇದ್ದರು.

Advertisement

30 ಸರಕಾರಿ ಶಾಲೆಗಳಿಗೆ ಸ್ಮಾ ರ್ಟ್‌ ಸ್ಪರ್ಶ : ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮಳೆನೀರು ಕೊಯ್ಲು, ಸ್ಮಾರ್ಟ್‌ ಶಾಲೆ ಸೇರಿದಂತೆ 9 ಕಾಮಗಾರಿಗಳು ಪೂರ್ಣಗೊಂಡಿವೆ. 30 ಯೋಜನೆಗಳು ಪ್ರಗತಿ ಹಂತದಲ್ಲಿವೆ ಎಂದು ಹು.ಧಾ. ಸ್ಮಾರ್ಟ್‌ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ತಿಳಿಸಿದರು.

10 ಪ್ರೊಜೆಕ್ಟ್ಗಳು ಟೆಂಡರ್‌ ಹಂತದಲ್ಲಿವೆ. 3 ಪ್ರೊಜೆಕ್ಟ್ಗಳು ಡಿಪಿಆರ್‌ ಹಾಗೂ 4 ಪ್ರೊಜೆಕ್ಟ್ಗಳು ಪರಿಕಲ್ಪನೆ ಹಂತದಲ್ಲಿವೆ. ತೋಳನಕೆರೆ, ಎಂ.ಜಿ. ಮಾರುಕಟ್ಟೆ, ಎಂ.ಜಿ. ಪಾರ್ಕ್‌, ಎಂಎಸ್‌ ಎಂಇ, ಕೈಗಾರಿಕಾ ವಲಯ ರಸ್ತೆ ಇನ್ನಿತರ ಕಾಮಗಾರಿಗಳು ಇನ್ನು 6 ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಸ್ಮಾರ್ಟ್‌ ಶಾಲೆ ರೂಪಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಮಹತ್ವದ ಪ್ರಯೋಜನವಾಗಿದೆ. ಇನ್ನು 30 ಸರಕಾರಿ ಶಾಲೆಗಳನ್ನು ಸ್ಮಾರ್ಟ್‌ ಶಾಲೆಗಳನ್ನಾಗಿಸಲಾಗುವುದು ಎಂದು ತಿಳಿಸಿದರು. ನಾಲಾ ಬದಿಗೆ ಹಸಿರು ಕಾರಿಡಾರ್‌ ನಿರ್ಮಾಣ ನಿಟ್ಟಿನಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. ನಮಗೆ ಬೇಕಾದ 22 ಮೀಟರ್‌ ಜಾಗ ಸಿದ್ಧವಿದೆ. ಕೆಲವೊಂದು ಕಡೆ ನಾಲಾ ಜಾಗಅತಿಕ್ರಮಣವಾಗಿದ್ದು, ಅದರ ತೆರವಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಮೊಬಿಲಿಟಿ ಜಾಗದಲ್ಲಿ 12 ಅತಿಕ್ರಮಣ ಆಸ್ತಿಗಳಿದ್ದು, ಅವುಗಳನ್ನು ತೆರವುಗೊಳಿಸಲಾಗುವುದು. ಜನತಾ ಬಜಾರ ಮಾರುಕಟ್ಟೆ ನಿರ್ಮಾಣ ನಿಟ್ಟಿನಲ್ಲಿ ಸಿಎಲ್‌ಎಫ್‌ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಅಲ್ಲಿರುವ ವ್ಯಾಪಾರಸ್ಥರಿಗೆ ತಾತ್ಕಾಲಿಕ ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹುಬ್ಬಳ್ಳಿ ಹಳೇ ಬಸ್‌ನಿಲ್ದಾಣ ಪುನರ್‌ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದ್ದು, ವಾಯವ್ಯ ಸಾರಿಗೆ 40 ಕೋಟಿ ರೂ. ನೀಡಲು ಒಪ್ಪಿದೆ. ಕಟ್ಟಡದ ನೆಲ ಮಹಡಿ ವಾಣಿಜ್ಯ ಉದ್ದೇಶಕ್ಕೆ ಮೀಸಲಿಡುತ್ತಿದ್ದು, ಮೊದಲ ಮಹಡಿಯಲ್ಲಿ ಬಸ್‌ಗಳು ನಿಲುಗಡೆಯಾಗಲಿವೆ. ಅಲ್ಲಿ ಬರುವ ಫ್ಲೈಓವರ್‌ಗೆ ಸಮಾನ ರೀತಿಯಲ್ಲಿ ಬಸ್‌ ಗಳು ನಿಲುಗಡೆಯಾಗಲಿವೆ. ನೆಹರು ಮೈದಾನವನ್ನು ಕ್ರೀಡೆ, ಇತರೆ ಬಳಕೆಗೂ ಪೂರಕವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸೈಕಲ್‌ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ 364 ಸೈಕಲ್‌ಗ‌ಳನ್ನು ಖರೀದಿಸಲಾಗುತ್ತಿದ್ದು, ಮೊದಲ ಒಂದು ಗಂಟೆ ಉಚಿತವಾಗಿ ಸೈಕಲ್‌ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next