ದೇವನಹಳ್ಳಿ: ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ರಾಜ್ಯ ಸರ್ಕಾರ ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರ ಸ್ಥಾಪಿಸಿದೆ ಎಂದು ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ ಜಂಟಿ ನಿರ್ದೇಶಕ ಮಧು ತಿಳಿಸಿದರು.
ಕಾರಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ಧಾರವಾಡ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರದಿಂದ ನಡೆದ ಉದ್ಯಮಶೀಲತೆ ಪ್ರೇರಣಾ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸರಕಾರದ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳುವುದು. ಕೌಶಲ್ಯಾಭಿವೃದ್ಧಿಯಡಿ ಸರ್ಕಾರ ನೀಡುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು, ಗ್ರಾಮೀಣ ಯುವಕ-ಯುವತಿಯರು, ಪುರುಷ-ಮಹಿಳೆಯರಿಗೆ ಸ್ವಉದ್ಯೋಗ ಸೃಜಿಸುವ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ವಿವರಿಸಿದರು.
ಸರ್ಕಾರದ 37 ಇಲಾಖೆಗಳ ಯೋಜನೆ ಮಾಹಿತಿ ಹೆಚ್ಚಿನವರಿಗೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಿವು ಮೂಡಿಸಿಕೊಳ್ಳಬೇಕು. ವಿಧ್ಯಾಭ್ಯಾಸ, ತಾಂತ್ರಿಕತೆ, ಕೈಗಾರಿಕೆ, ಸಣ್ಣ ಉದ್ದಿಮೆ ಸ್ಥಾಪನೆ, ಯೋಜನಾ ವರದಿ ತಯಾರಿಕೆಗೆ ಸರಕಾರದ ಸವಲತ್ತು, ರಿಯಾಯಿತಿ, ಸಹಾಯಧನ, ಲೆಕ್ಕಪತ್ರ ನಿರ್ವಹಣೆ ಹಾಗೂ ಸ್ವಯಂ ಉದ್ಯೋಗಕ್ಕೆ ಬೇಕಾದ ಎಲ್ಲಾ ಮಾಹಿತಿ ನೀಡಲಾಗುತ್ತದೆ. ಕಾರ್ಯಕ್ರಮದ ಸದುಪಯೋಗವನ್ನು ಪ್ರತಿ ಗ್ರಾಮಸ್ಥರು ಪಡೆದುಕೊಂಡು ಜೀವನ ಉತ್ತಮ ಪಡಿಸಿಕೊಳ್ಳುವಂತೆ ತಿಳಿಸಿದರು.
ತಾಪಂ ಸದಸ್ಯ ಶ್ರೀನಿವಾಸ್ ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಏಳಿಗೆ ಕಾಣುತ್ತದೆ. ಉತ್ಪಾದನೆ ಮಾಡುವ ಸಂಪತ್ತು ಹಳ್ಳಿಯಲ್ಲಿ ಉಳಿಯಬೇಕು. ಉದ್ಯಮಿಯಾಗಬೇಕು ಎಂದು ಆಸೆ ಇಟ್ಟುಕೊಂಡಿರುವ ಯುವಕರು/ಮಹಿಳೆಯರು ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಇರುವುದಿಲ್ಲ. ಅದರ ಬಗ್ಗೆ ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮ ಸಹಕಾರಿಯಾಗುತ್ತದೆ. ರೈತರು ಬರಗಾಲಕ್ಕೆ ಅಂಜದೇ ಧೈರ್ಯಯುತರಾಗಿ ಬದುಕಬೇಕು ಎಂದು ಸಲಹೆ ಮಾಡಿದರು.
ಗ್ರಾಪಂ ಅಧ್ಯಕ್ಷ ದೇವರಾಜ್ ಮಾತನಾಡಿ, ನುರಿತರಿಂದ ತರಬೇತಿ ನೀಡಿ ಜನರನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಗ್ರಾಮೀಣ ಭಾಗದಲ್ಲಿರುವ ಪ್ರತಿಯೊಬ್ಬರೂ ತಮ್ಮದೇ ಆದ ಉದ್ಯೋಗ ಸೃಜಿಸಿಕೊಳ್ಳಲು ಸರಕಾರ ಹಲವಾರು ಯೋಜನೆಗಳ ಮೂಲಕ ಸಾಲ ಸೌಲಭ್ಯ, ಮಾರುಕಟ್ಟೆ, ವ್ಯಾಪಾರ ಹಣಕಾಸು ನಿರ್ವಹಣೆ, ಬ್ಯಾಂಕಿಂಗ್ ಹೀಗೆ ಹತ್ತು ಹಲವಾರು ಯೋಜನೆಗಳ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಮಂಜುನಾಥ್, ಗ್ರಾಪಂ ಉಪಾಧ್ಯಕ್ಷೆ ಆನಂದಮ್ಮ, ದಿಶಾ ಜಿಲ್ಲಾ ವ್ಯವಸ್ಥಾಪಕಿ ರತ್ನಾ, ಉದ್ದಿಮೆ ಯಶಸ್ವಿ ಮಹಿಳೆ ವಿಜಯ, ಮುಖಂಡ ಕೆ.ಸಿ.ಮುನಿಕೃಷ್ಣಪ್ಪ ಮತ್ತಿತರರು ಇದ್ದರು.