Advertisement

ಪಠ್ಯ ಕಡಿತದಿಂದ ಪರೀಕ್ಷಾ ಸಿದ್ಧತೆಗೆ ಅನುಕೂಲ; ಪುನರಾವರ್ತನೆಗೆ ಎರಡು ತಿಂಗಳು ಕಾಲಾವಕಾಶ

11:32 PM Dec 03, 2021 | Team Udayavani |

ಬೆಂಗಳೂರು: ಈ ಬಾರಿ ಎಸೆಸೆಲ್ಸಿ ಪಠ್ಯದಲ್ಲಿ ಶೇ.20ರಷ್ಟು ಕಡಿತ ಮಾಡಿರುವುದರಿಂದ ಪರೀಕ್ಷೆ ಸಿದ್ಧತೆಗೆ ಹೆಚ್ಚುವರಿಯಾಗಿ ಕನಿಷ್ಠ ಒಂದು ತಿಂಗಳು ಸಮಯ ಸಿಕ್ಕಂತಾಗಿದೆ.

Advertisement

ರಾಜ್ಯ ಶಿಕ್ಷಣ ಸಂಶೋಧನ ಮತ್ತು ತರಬೇತಿ ಸಂಸ್ಥೆಯು (ಡಿಎಸ್‌ಇಆರ್‌ಟಿ) ಡಿಸೆಂಬರ್‌ನಿಂದ ಮಾರ್ಚ್‌ ಅವಧಿಯಲ್ಲಿ ಬೋಧಿಸಬಹುದಾದ ಶೇ.20ರಷ್ಟು ಪಠ್ಯವನ್ನು ಕಡಿತ ಮಾಡಿದೆ. ಬಹುತೇಕ ಶಾಲೆಗಳಲ್ಲಿ ಈಗಾಗಲೇ ಶೇ.50ರಷ್ಟು ಪಠ್ಯಗಳ ಬೋಧನೆ ಮುಗಿದಿದೆ. ಈಗ ಶೇ. 20ರಷ್ಟು ಪಠ್ಯ ಕಡಿತ ಮಾಡಿರುವುದರಿಂದ ಜನವರಿ ತಿಂಗಳಾಂತ್ಯಕ್ಕೆ ಉಳಿದ ಶೇ. 30ರಷ್ಟು ಬೋಧಿಸಿ ಪಠ್ಯ ಪೂರ್ಣಗೊಳಿಸುವ ನಿರೀಕ್ಷೆಯಿದೆ.

ಹೀಗಾಗಿ, ಪರೀಕ್ಷೆಗಿಂತ ಎರಡು ತಿಂಗಳ ಮೊದಲೇ ಪಠ್ಯ ಪೂರ್ಣಗೊಳ್ಳಲಿದ್ದು, ಎಪ್ರಿಲ್‌ ಮೊದಲ ವಾರದಲ್ಲಿ ಪರೀಕ್ಷೆ ನಡೆದರೂ ಕನಿಷ್ಠ ಎರಡು ತಿಂಗಳು ವಿದ್ಯಾರ್ಥಿಗಳ ಪುನರಾವರ್ತನೆಗೆ ಸಮಯ ಸಿಗಲಿದೆ.

ಕಡಿತವಾಗಿರುವ ವಿಷಯಗಳು
ಪ್ರಥಮ ಭಾಷೆ ಕನ್ನಡದ 8ನೇ ಅಧ್ಯಾಯ ಸುಕುಮಾರ ಸ್ವಾಮಿ ಕತೆ ಹಾಗೂ ಕೆಮ್ಮನೆ ಮೀಸೆವೊತ್ತೋನೆ ಎಂಬ ಪಠ್ಯವನ್ನು ಕೈಬಿಡಲಾಗಿದೆ. ಇಂಗ್ಲಿಷ್‌ನಲ್ಲಿ ಡಿಸ್ಕವರಿ, ಸೈನ್ಸ್‌ ಆ್ಯಂಡ್‌ ಹೋಮ್‌ ಆಫ್ ಸರ್ವೈವಲ್‌, ದಿ ಬರ್ಡ್‌ ಆಫ್ ಹ್ಯಾಪಿನೆಸ್‌, ಬ್ಯಾಲೆಡ್‌ ಆಫ್ ದಿ ಟೆಂಪೆಸ್ಟ್‌, ಆಫ್ ಟು ಔಟರ್‌ ಸ್ಪೇಸ್‌ ಟುಮಾರೋ ಮಾರ್ನಿಂಗ್‌ ಪಠ್ಯವನ್ನು ಕೈಬಿಡಲಾಗಿದೆ. ಹಿಂದಿಯಲ್ಲಿ ದುನಿಯಾ ಮೆ ಪೆಹಲಾ ಮಕಾನ್‌, ರೋಬೋಟ್‌ ಹಾಗೂ ಬಾಲ್‌ ಶಕಿತ್‌ ಪಠ್ಯ, ವಿಜ್ಞಾನದಲ್ಲಿ ಲೋಹಗಳು ಮತ್ತು ಅಲೋಹಗಳು, ಕಾರ್ಬನ್‌ ಮತ್ತು ಅದರ ಸಂಯುಕ್ತಗಳು, ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ, ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಎಂಬ ಪಾಠಗಳನ್ನು ಕೈಬಿಡಲಾಗಿದೆ.

ಗಣಿತದಲ್ಲಿ ವಾಸ್ತವ ಸಂಖ್ಯೆಗಳು, ಬಹು ಪದೋಕ್ತಿಗಳು ಹಾಗೂ ಸಂಭವನೀಯತೆ, ಸಮಾಜ ವಿಜ್ಞಾನದಲ್ಲಿ 20ನೇ ಶತಮಾನದ ರಾಜಕೀಯ ಆಯಾಮಗಳು, ರಾಜ್ಯಶಾಸ್ತ್ರದಲ್ಲಿ ಜಾಗತಿಕ ಸಂಸ್ಥೆಗಳು, ಸಮಾಜಶಾಸ್ತ್ರದಲ್ಲಿ ಸಾಮಾಜಿಕ ಸಮಸ್ಯೆಗಳು ಎಂಬ ಅಧ್ಯಾಯವನ್ನು ಬೋಧನೆಯಿಂದ ಕೈಬಿಡ ಲಾಗಿದೆ. ಕಡಿತ ಮಾಡಿರುವ ಪಠ್ಯದ ಮಾಹಿತಿಯನ್ನು http//dsert.kar.nic.in ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

Advertisement

ಇದನ್ನೂ ಓದಿ:ಐಎಂಎಫ್ ನ ನಂ.2 ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ

ಶಿಕ್ಷಕರು ಅವಸರದಿಂದ ಪಠ್ಯವನ್ನು ಮುಗಿಸುವ ಬದಲು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಮಾಡಲು ಅನುಕೂಲವಾಗಿದೆ. ಆನ್‌ಲೈನ್‌ನಲ್ಲಿ ಪಾಠಗಳು ಸರಿಯಾಗಿ ಮನವರಿಕೆಯಾಗದಿದ್ದರೆ, ಮತ್ತೊಮ್ಮೆ ಬೋಧನೆಗೆ ಸಮಯ ಸಿಕ್ಕಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಪಠ್ಯ ಕಡಿತವು ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯದಾಗಲಿದೆ.
– ಎಚ್‌.ಕೆ. ಮಂಜುನಾಥ್‌, ಅಧ್ಯಕ್ಷ, ಪ್ರೌಢಶಾಲಾ ಶಿಕ್ಷಕರ ಸಂಘ

ಸರಕಾರವು ಶೇ. 20 ರಷ್ಟು ಪಠ್ಯ ಕಡಿತ ಮಾಡಿರು ವುದರಿಂದ ಖುಷಿಯಾಗಿದೆ. ಕೊನೇ ಕ್ಷಣದವರೆಗೂ ಪಾಠವನ್ನೇ ಕೇಳುವ ಬದಲಾಗಿ ಪುನರಾವರ್ತನೆಗೆ ಹೆಚ್ಚಿನ ಸಮಯ ಬಳಸಬಹುದಾಗಿದ್ದು, ಇದರಿಂದ ಪರೀಕ್ಷೆ ಸಿದ್ಧತೆಗಿದ್ದ ಭಯ ಸ್ವಲ್ಪ ಮಟ್ಟಿಗೆ ದೂರವಾಗಿದೆ.
– ಪ್ರಜ್ವಲ್‌, ಎಸೆಸೆಲ್ಸಿ ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next