ಅಯೋಧ್ಯೆ: ಭದ್ರತಾ ಕಾರಣಗಳಿಗಾಗಿ ಅಯೋಧ್ಯೆಯ ರಾಮ ಮಂದಿರದ ಸಂಕೀರ್ಣದೊಳಗೆ ಮುಖ ಗುರುತಿಸು ವಿಕೆ ಕ್ಯಾಮೆರಾಗಳನ್ನು ಅಳವಡಿಸುವ ಕುರಿತು ಚಿಂತನೆ ನಡೆದಿದೆ ಎಂದು ಅಯೋಧ್ಯೆ ವಿಭಾಗೀಯ ಆಯುಕ್ತ ಗೌರವ್ ದಯಾಳ್ ಹೇಳಿದ್ದಾರೆ. ವಿಮಾನನಿಲ್ದಾಣಗಳಲ್ಲಿ ಬಳಸುವ ಫೇಷಿಯಲ್ ರೆಕಗ್ನಿಷನ್ ತಂತ್ರಜ್ಞಾನ ವನ್ನೇ ಮಂದಿರದಲ್ಲೇ ಅಳವಡಿಸುವ ಮೂಲಕ ಭದ್ರತೆಯನ್ನು ಹೆಚ್ಚಿಸಲು ಚರ್ಚೆ ನಡೆಸಲಾಗಿದೆ. ಈ ಕೂಡಲೇ ಇದನ್ನು ಅಳವಡಿಸಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುತ್ತದೆ ಎಂದು ದಯಾಳ್ ತಿಳಿಸಿದ್ದಾರೆ.
ಮಂದಿರಕ್ಕೆ ಆಗಮಿಸುವ ಭಕ್ತರು ತಮ್ಮ ಮೊಬೈಲ್ ಮತ್ತು ಗ್ಯಾಡ್ಜೆಟ್‌ಗಳನ್ನು ಕೌಂಟರ್‌ಗಳಲ್ಲಿಯೇ ಇಟ್ಟು ದರ್ಶನ ಪಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಯಾರು ಯಾವ ವಸ್ತುಗಳನ್ನು ನೀಡಿದರು ಎಂದು ಗುರುತಿಸಲು ಇದು ಸಹಾಯವಾಗಲಿದೆ ಎಂದಿದ್ದಾರೆ.
ಅಯೋಧ್ಯೆಯಲ್ಲಿ ರಾಮ ದರ್ಬಾರ್ ನಿರ್ಮಾಣ ವರ್ಷಾಂತ್ಯಕ್ಕೆ ಪೂರ್ಣ?
ಅಯೋಧ್ಯೆಯ ರಾಮಮಂದಿರದಲ್ಲಿ ಮೊದಲ ಮತ್ತು ಎರಡನೇ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ನಿರ್ಮಾಣ ಕಾಮಗಾರಿಯು ಶೀಘ್ರದಲ್ಲೇ ಆರಂಭವಾಗಲಿದ್ದು, ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ರಾಮಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. ಶುಕ್ರವಾರವೇ ಸ್ಥಳಕ್ಕೆ ಆಗಮಿಸಿರುವ ಮಿಶ್ರಾ ಅವರು, ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದ್ದು, ಪ್ರಸಕ್ತ ವರ್ಷದ ಡಿಸೆಂಬರ್ 31ರೊಳಗೆ ನಿರ್ಮಾಣ ಪೂರ್ಣಗೊಳಿಸಬೇಕೆಂಬ ಗಡುವು ಹಾಕಿಕೊಂಡಿರುವುದಾಗಿ ತಿಳಿಸಿ ದ್ದಾರೆ. ಮಂದಿರದಲ್ಲಿ ಕಾಮಗಾರಿ ಮತ್ತೆ ಆರಂಭವಾಗಿದೆ. ಪರ್ಕೋಟಾ ನಿರ್ಮಾಣ ಕೆಲಸ ಮುಗಿದಿದೆ. 795 ಮೀ. ಪರಿಕ್ರಮ ಗೋಡೆ ಕೆಲಸ ನಡೆಯುತ್ತಿದೆ ಎಂದಿದ್ದಾರೆ.